Asia Cup 2022: ಏಷ್ಯಾಕಪ್ನಲ್ಲಿನ ಸತತ ಎರಡು ಸೋಲುಗಳ ಬೆನ್ನಲ್ಲೇ ಬಾಂಗ್ಲಾದೇಶ್ ತಂಡದ ಸ್ಟಾರ್ ಆಟಗಾರ ಮುಶ್ಫಿಕರ್ ರಹೀಮ್ (Mushfiqur Rahim) ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಶ್ರೀಲಂಕಾ ವಿರುದ್ದದ ಪಂದ್ಯದ ವಿಫಲರಾಗಿದ್ದ ಮುಶ್ಫಿಕರ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗಳು ಕೇಳಿ ಬಂದಿದ್ದವು. ಅದರಲ್ಲೂ ವಿಕೆಟ್ ಕೀಪರ್ ಆಗಿರುವ ರಹೀಮ್ ಕ್ಯಾಚ್ವೊಂದನ್ನು ಕೈಚೆಲ್ಲಿದ್ದರು. ಹೀಗಾಗಿ ಬಾಂಗ್ಲಾ ಕ್ರಿಕೆಟ್ ಪ್ರೇಮಿಗಳು ಸೋಷಿಯಲ್ ಮೀಡಿಯಾದ ಟೀಕಾ ಪ್ರಹಾರವನ್ನೇ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ಮುಶ್ಫಿಕರ್ ರಹೀಮ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದಾರೆ. ಇದಾಗ್ಯೂ ಏಕದಿನ ಹಾಗೂ ಟೆಸ್ಟ್ ಹಾಗೂ ಫ್ರಾಂಚೈಸಿ ಟಿ20 ಲೀಗ್ ಮುಂದುವರೆಯುವುದಾಗಿ ಮುಶ್ಫಿಕರ್ ರಹೀಮ್ ತಿಳಿಸಿದ್ದಾರೆ.
35 ವರ್ಷದ ಮುಶ್ಫಿಕರ್ ರಹೀಮ್ ಬಾಂಗ್ಲಾದೇಶ ಪರ 102 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ 6 ಅರ್ಧಶತಕಗಳ ನೆರವಿನಿಂದ ಒಟ್ಟು 1500 ರನ್ ಗಳಿಸಿದ್ದಾರೆ. 2005 ರಲ್ಲಿ ಬಾಂಗ್ಲಾದೇಶದ ಪರ ಪಾದಾರ್ಪಣೆ ಮಾಡಿದ್ದ ರಹೀಮ್ ಇದುವರೆಗೆ 82 ಟೆಸ್ಟ್ ಮತ್ತು 236 ಏಕದಿನ ಪಂದ್ಯಗಳನ್ನು ಸಹ ಆಡಿದ್ದಾರೆ.
ಕಳೆದ ಕೆಲ ಸರಣಿಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಮುಶ್ಫಿಕರ್ ರಹೀಮ್, ಕೊನೆಯ10 ಟಿ20 ಪಂದ್ಯಗಳಲ್ಲಿ ಕೇವಲ ಮೂರು ಬಾರಿ ಎರಡಂಕಿಯ ರನ್ ಗಳಿಸಿದ್ದಾರೆ. ಇನ್ನು ಏಷ್ಯಾಕಪ್‌ನಲ್ಲಿ ಎರಡು ಪಂದ್ಯಗಳಲ್ಲಿ ಕೇವಲ ಐದು ರನ್ ಗಳಿಸಿದ್ದರು.
ಏಷ್ಯಾ ಕಪ್ 2022 ರಲ್ಲಿ ಬಾಂಗ್ಲಾದೇಶ ತನ್ನ ಮೊದಲ ಪಂದ್ಯವನ್ನು ಅಫ್ಘಾನಿಸ್ತಾನ ವಿರುದ್ಧ ಆಡಿತು. ಈ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕಕ್ಕೆ ಕಣಕ್ಕಿಳಿದ ರಹೀಮ್ ನಾಲ್ಕು ಎಸೆತಗಳಲ್ಲಿ ಕೇವಲ ಒಂದು ರನ್ ಗಳಿಸಿ ಔಟಾದರು.
ಹಾಗೆಯೇ ಶ್ರೀಲಂಕಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಐದು ಎಸೆತಗಳಲ್ಲಿ ಕೇವಲ ನಾಲ್ಕು ರನ್ ವಿಕೆಟ್ ಒಪ್ಪಿಸಿದ್ದರು. ಇದಲ್ಲದೇ ಈ ಪಂದ್ಯದಲ್ಲಿ ಮಹತ್ವದ ಕ್ಯಾಚ್ ಕೂಡ ಕೈಚೆಲ್ಲಿದ್ದರು.
ವಿಶೇಷ ಎಂದರೆ ಬಾಂಗ್ಲಾದೇಶ ಪರ ಅತಿ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ರಹೀಮ್ ಎರಡನೇ ಸ್ಥಾನದಲ್ಲಿದ್ದಾರೆ. ಸದ್ಯ ಈ ಪಟ್ಟಿಯಲ್ಲಿ ಮಹಮ್ಮದುಲ್ಲಾ (121) ಅಗ್ರಸ್ಥಾನದಲ್ಲಿದ್ದಾರೆ. ಇನ್ನು 2011 ಮತ್ತು 2014 ರ ನಡುವೆ 23 T20 ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡದ ನಾಯಕರಾಗಿ ಕೂಡ ಮುಶ್ಫಿಕರ್ ರಹೀಮ್ ಕಾಣಿಸಿಕೊಂಡಿದ್ದರು. ಇದೀಗ ನಿವೃತ್ತಿಯೊಂದಿಗೆ ಬಾಂಗ್ಲಾ ಟಿ20 ತಂಡದಲ್ಲಿ ಮುಶ್ಫಿಕರ್ ರಹೀಮ್ ಅವರ ಯುಗಾಂತ್ಯವಾಗಿದೆ.