
ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ್ ತಂಡ ಭಾಗವಹಿಸಲಿದೆಯಾ? ಈ ಪ್ರಶ್ನೆಗೆ ಜನವರಿ 21 ರಂದು ಸ್ಪಷ್ಟ ಉತ್ತರ ಸಿಗಲಿದೆ. ಏಕೆಂದರೆ ವಿಶ್ವಕಪ್‌ನಲ್ಲಿ ಭಾಗವಹಿಸುವಿಕೆಯ ಬಗ್ಗೆ ಅಂತಿಮ ನಿರ್ಧಾರವನ್ನು ತಿಳಿಸಲು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ಐಸಿಸಿ ಗಡುವು ನೀಡಿದೆ.
ಜನವರಿ 17 ರಂದು ಢಾಕಾದಲ್ಲಿ ನಡೆದ ಸಭೆಯಲ್ಲಿ ಐಸಿಸಿ ಈ ಹೊಸ ಗಡುವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ತಿಳಿಸಿದೆ. ಟಿ20 ವಿಶ್ವಕಪ್‌ನಲ್ಲಿ ಆಡಬೇಕೆ ಬೇಡವೇ ಎಂಬುದನ್ನು ಮಾತ್ರವಲ್ಲದೆ, ಟೂರ್ನಮೆಂಟ್‌ಗಾಗಿ ಭಾರತಕ್ಕೆ ಪ್ರಯಾಣಿಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸಲು ಬಾಂಗ್ಲಾದೇಶಕ್ಕೆ ಜನವರಿ 21 ರವರೆಗೆ ಸಮಯಾವಕಾಶ ನೀಡಲಾಗಿದೆ.
ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಭಾರತದಲ್ಲಿ ಪಂದ್ಯವಾಡಲು ಹಿಂದೇಟು ಹಾಕುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಬಾಂಗ್ಲಾ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಲು ಬಿಸಿಬಿ ಮನವಿ ಮಾಡಿದೆ. ಈ ಮನವಿಯ ಹೊರತಾಗಿಯೂ ಪಂದ್ಯಗಳ ಸ್ಥಳಾಂತರಿಸಲಾಗುವುದಿಲ್ಲ ಎಂದು ಐಸಿಸಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ತಿಳಿಸಿದೆ.
ಕೆಲ ದಿನಗಳ ಹಿಂದೆಯಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಬಾಂಗ್ಲಾದೇಶ್ ವೇಗಿ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈ ಬಿಡಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಬಾಂಗ್ಲಾದೇಶ್ನಲ್ಲಿ ಹಿಂದೂಗಳ ಮೇಲಿನ ನಡೆಯುತ್ತಿರುವ ದೌರ್ಜನ್ಯ. ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಹತ್ಯೆಯನ್ನು ಖಂಡಿಸಿ ಇತ್ತೀಚೆಗೆ ಭಾರತದಲ್ಲಿ ಪ್ರತಿಭಟನೆಗಳು ನಡೆದಿದ್ದವು.
ಈ ಪ್ರತಿಭಟನೆ ವೇಳೆ ಬಾಂಗ್ಲಾದೇಶ್ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಕೆಕೆಆರ್ ಪರ ಕಣಕ್ಕಿಳಿಯಲು ಬಿಡುವುದಿಲ್ಲ ಎಂದು ಕೆಲ ಸಂಘಟನೆಗಳು ಘೋಷಿಸಿದ್ದವು. ಹೀಗಾಗಿ ಐಪಿಎಲ್ನಿಂದ ಬಾಂಗ್ಲಾ ವೇಗಿಯನ್ನು ಕೈ ಬಿಡುವಂತೆ ಬಿಸಿಸಿಐ ಸೂಚಿಸಿತ್ತು. ಅದರಂತೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಾರೆ.
ಬಾಂಗ್ಲಾದೇಶ್ ಆಟಗಾರನನ್ನು ಐಪಿಎಲ್ನಿಂದ ಕೈ ಬಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಟಿ20 ವಿಶ್ವಕಪ್‌ನಲ್ಲಿ ತಮ್ಮ ತಂಡದ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನೆತ್ತಿದೆ. ಭಾರತದಲ್ಲಿ ಓರ್ವ ಆಟಗಾರನಿಗೆ ಸಂಪೂರ್ಣ ಸುರಕ್ಷತೆ ನೀಡಲು ಸಾಧ್ಯವಾಗದೇ ಇದ್ದರೆ, ಬಿಸಿಸಿಐ ಹೇಗೆ ಬಾಂಗ್ಲಾದೇಶ್ ತಂಡಕ್ಕೆ ಭದ್ರತಾ ವ್ಯವಸ್ಥೆ ಕಲ್ಪಿಸಲಿದೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಹೀಗಾಗಿ ಬಾಂಗ್ಲಾದೇಶ್ ತಂಡದ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಯೋಜಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಐಸಿಸಿಗೆ ಮನವಿ ಮಾಡಿದೆ. ಬಿಸಿಬಿಯ ಈ ಮನವಿಯ ಹೊರತಾಗಿಯೂ, ಭಾರತದಲ್ಲೇ ಟೂರ್ನಿ ಆಡುವಂತೆ ಸೂಚಿಸಲಾಗಿದೆ. ಅಲ್ಲದೆ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಜನವರಿ 21 ರವರೆಗೆ ಗಡುವು ನೀಡಲಾಗಿದೆ.
ಒಂದು ವೇಳೆ ಬಾಂಗ್ಲಾದೇಶ್ ತಂಡವು ಟಿ20 ವಿಶ್ವಕಪ್ನಿಂದ ಹಿಂದೆ ಸರಿದರೆ, ಟಿ20 ತಂಡಗಳ ಶ್ರೇಯಾಂಕದ ಆಧಾರದ ಮೇಲೆ ಸ್ಕಾಟ್ಲೆಂಡ್ ತಂಡಕ್ಕೆ ಚಾನ್ಸ್ ಸಿಗಲಿದೆ. ಹೀಗಾಗಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ನ ಮುಂದಿನ ನಿಲುವೇನು ಎಂಬುದನ್ನು ಸ್ಕಾಟ್ಲೆಂಡ್ ಕ್ರಿಕೆಟ್ ಬೋರ್ಡ್ ಕೂಡ ಎದುರು ನೋಡುತ್ತಿದೆ.