BBL 2021-22: ಔಟ್ ನೀಡಿ ಆ ಬಳಿಕ ನಾಟೌಟ್ ಎಂದ ಅಂಪೈರ್: ಸಿಟ್ಟು ನೆತ್ತಿಗೇರಿಸಿಕೊಂಡ ಮ್ಯಾಕ್ಸ್​ವೆಲ್

| Updated By: ಝಾಹಿರ್ ಯೂಸುಫ್

Updated on: Jan 02, 2022 | 2:39 PM

BBL 2021-22: ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾರ್ಚರ್ಸ್ ತಂಡದ ನಾಯಕ ಆಷ್ಟನ್ ಟರ್ನರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್​ ಆರಂಭಿಸಿದ ಪರ್ತ್ ಸ್ಕಾಚರ್ಸ್​ ತಂಡ 13 ಓವರ್‌ಗಳಲ್ಲಿ 4 ವಿಕೆಟ್‌ಗೆ 124 ರನ್ ಗಳಿಸಿತು.

BBL 2021-22: ಔಟ್ ನೀಡಿ ಆ ಬಳಿಕ ನಾಟೌಟ್ ಎಂದ ಅಂಪೈರ್: ಸಿಟ್ಟು ನೆತ್ತಿಗೇರಿಸಿಕೊಂಡ ಮ್ಯಾಕ್ಸ್​ವೆಲ್
BBL 2021-22
Follow us on

ಅಂಪೈರ್ ತೀರ್ಪು ಅಂತಿಮ…ಇದು ಕ್ರಿಕೆಟ್​ ಅಂಗಳದ ಅಲಿಖಿತ ನಿಯಮ ಎಂದೇ ಹೇಳಬಹುದು. ಹೀಗಾಗಿಯೇ ಅನೇಕ ಬಾರಿ ಬ್ಯಾಟರ್​ಗಳು ನಾಟೌಟ್ ಆಗಿದ್ದರೂ, ಅಂಪೈರ್ ಮಾಡುವ ಸಣ್ಣ ತಪ್ಪಿನಿಂದಾಗಿ ಕ್ರೀಸ್ ತೊರೆಯುತ್ತಾರೆ. ಆದರೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನಲ್ಲಿ ಅಂಪೈರ್ ನೀಡಿದ ತೀರ್ಪಿನಿಂದ ಆಟಗಾರರು ಕೆಲ ಕ್ಷಣ ಗೊಂದಲಕ್ಕೊಳಗಾದರು. ಹೌದು, ಬಿಬಿಎಲ್​ನ 31ನೇ ಪಂದ್ಯದಲ್ಲಿ ಪರ್ತ್ ಸ್ಕಾರ್ಚರ್ಸ್ ಮತ್ತು ಮೆಲ್ಬೋರ್ನ್ ಸ್ಟಾರ್ಸ್ ಮುಖಾಮುಖಿಯಾಗಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾರ್ಚರ್ಸ್ ತಂಡದ ನಾಯಕ ಆಷ್ಟನ್ ಟರ್ನರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್​ ಆರಂಭಿಸಿದ ಪರ್ತ್ ಸ್ಕಾಚರ್ಸ್​ ತಂಡ 13 ಓವರ್‌ಗಳಲ್ಲಿ 4 ವಿಕೆಟ್‌ಗೆ 124 ರನ್ ಗಳಿಸಿತು. ಈ ವೇಳೆ ಆರೋನ್ ಹಾರ್ಡಿ ಮತ್ತು ನಾಯಕ ಟರ್ನರ್ ಕ್ರೀಸ್‌ನಲ್ಲಿದ್ದರು. ಮೆಲ್ಬೋರ್ನ್ ಸ್ಟಾರ್ಸ್ ತಂಡದ ನಾಯಕ ಗ್ಲೆನ್ ಮ್ಯಾಕ್ಸ್​ವೆಲ್ 14 ನೇ ಓವರ್​ ವೇಳೆ ಚೆಂಡನ್ನು ಚೊಚ್ಚಲ ಪಂದ್ಯವಾಡುತ್ತಿರುವ ಯುವ ವೇಗಿ ಕ್ಸೇವಿಯರ್ ಕ್ರೋನ್ ಅವರ ಕೈಗಿತ್ತರು. ಕ್ರೋನ್ ಎಸೆದ ಬೌನ್ಸರ್ ಟರ್ನರ್ ಅವರನ್ನು ವಂಚಿಸಿ ನೇರವಾಗಿ ವಿಕೆಟ್ ಕೀಪರ್ ಕೈ ಸೇರಿತು. ಅತ್ತ ಆಟಗಾರರ ಮನವಿ ಬೆನ್ನಲ್ಲೇ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್ ಬೆರಳನ್ನು ಮೇಲೆಕ್ಕೆತ್ತಿ ಔಟ್ ಎಂದು ತೀರ್ಪು ನೀಡಿದರು. ಅತ್ತ ಚೊಚ್ಚಲ ವಿಕೆಟ್ ಪಡೆದ ಖುಷಿಯಲ್ಲಿ ಕ್ರೋನ್ ಸಂಭ್ರಮಿಸಲಾರಂಭಿಸಿದರು.

ಅಂಪೈರ್ ತೀರ್ಪು ನೀಡುತ್ತಿದ್ದಂತೆ ಟರ್ನರ್ ಚೆಂಡು ಹೆಲ್ಮೆಟ್​ಗೆ ಬಡಿದಿರುವುದು ಎಂದು ಸನ್ನೆ ಮಾಡಿದರು. ಕ್ಷಣಾರ್ಧದಲ್ಲೇ ತೀರ್ಪು ಬದಲಿಸಿದ ಅಂಪೈರ್ ನಾಟೌಟ್ ಎಂದರು. ತೀರ್ಪು ಬದಲಿಸಿದ ಅಂಪೈರ್ ನಿರ್ಧಾರವನ್ನು ಮೆಲ್ಬೋರ್ನ್​ ಸ್ಟಾರ್ಸ್​ ತಂಡದ ನಾಯಕ ಗ್ಲೆನ್ ಮ್ಯಾಕ್ಸ್​ವೆಲ್ ಪ್ರಶ್ನಿಸಿದರು. ಅಷ್ಟೇ ಅಲ್ಲದೆ ಅಂಪೈರ್​ ಜೊತೆ ಕೆಲ ಕ್ಷಣ ವಾಗ್ವಾದಕ್ಕಿಳಿದರು.

ಈ ಬಗ್ಗೆ ಮ್ಯಾಕ್ಸ್​ವೆಲ್​ಗೆ ಸ್ಪಷ್ಟನೆ ನೀಡಿದ ಅಂಪೈರ್, ತೀರ್ಪು ಬದಲಿಸಲು ಮುಖ್ಯ ಕಾರಣ, ನಾನು ಔಟ್ ನೀಡಲು ಬೆರಳು ಎತ್ತಿದ ತಕ್ಷಣ, ಚೆಂಡು ವಿಕೆಟ್ ಕೀಪರ್‌ ಕೈ ಸೇರಿದ ರೀತಿಯನ್ನು ಗಮನಿಸಿದರೆ ಚೆಂಡು ಬ್ಯಾಟ್‌ನೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಿಲ್ಲ ಎಂದು ನನಗೆ ಅನಿಸಿತು . ಹಾಗಾಗಿ ನಾನು ನನ್ನ ನಿರ್ಧಾರವನ್ನು ಬದಲಾಯಿಸಿದೆ ಎಂದು ತಿಳಿಸಿದರು.

ಈ ಪಂದ್ಯದಲ್ಲಿ ಪರ್ತ್ ಸ್ಕಾರ್ಚರ್ಸ್​ ನೀಡಿದ 181 ರನ್​ಗಳ ಗುರಿ ಬೆನ್ನತ್ತಿದ ಮೆಲ್ಬೋರ್ನ್​ ಸ್ಟಾರ್ ತಂಡವು 18.5 ಓವರ್​ಗಳಲ್ಲಿ 130 ರನ್​ಗೆ ಆಲೌಟ್ ಆಗುವ ಮೂಲಕ 50 ರನ್​ಗಳ ಹೀನಾಯ ಸೋಲನುಭವಿಸಿತು.

ಇದನ್ನೂ ಓದಿ:  India vs South Africa 1st Test: ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಭರ್ಜರಿ ಜಯ

ಇದನ್ನೂ ಓದಿ:  Ravindra Jadeja: ಸ್ಟಾರ್ ಆಲ್​ರೌಂಡರ್ ಜಡೇಜಾರನ್ನು ಆಯ್ಕೆ ಮಾಡದಿರಲು ಇದುವೇ ಕಾರಣ..!

ಇದನ್ನೂ ಓದಿ: Rohit Sharma: ಫಿಟ್​ನೆಸ್​ ಅಥವಾ ಇನ್ನೇನಾದರೂ? ರೋಹಿತ್ ಶರ್ಮಾ ಕೈ ಬಿಡಲು ಕಾರಣವೇನು?

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(BBL 2022: umpire’s ‘bizarre’ reversal as Scorchers star enters ‘dangerous’ territory)

Published On - 2:36 pm, Sun, 2 January 22