ಸದ್ಯ ಶ್ರೀಲಂಕಾ ಪ್ರವಾಸವನ್ನು ಮುಗಿಸಿ ವಿರಾಮದಲ್ಲಿರುವ ಟೀಂ ಇಂಡಿಯಾ ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ನಿಂದ ಮತ್ತೆ ಮೈದಾನಕ್ಕೆ ಮರಳಲಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಟೀಂ ಇಂಡಿಯಾದ ಜರ್ನಿ ಆರಂಭವಾಗಲಿದೆ. ಉಭಯ ದೇಶಗಳ ನಡುವೆ ಮೊದಲು ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲ್ಲಿದೆ. ಆ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ನಡೆಯಲ್ಲಿದೆ. ವೇಳಾಪಟ್ಟಿಯಂತೆ ಮೊದಲ ಟೆಸ್ಟ್ ಪಂದ್ಯ ಸೆಪ್ಟೆಂಬರ್ 19 ರಂದು ನಡೆದರೆ, ಎರಡನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 27 ರಿಂದ ಆರಂಭವಾಗಲಿದೆ. ಈ ನಡುವೆ ಎರಡೂ ದೇಶಗಳ ನಡೆಯುವ ಟಿ20 ಸರಣಿಯ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆಗಳಾಗಿದ್ದು. ಆಗಿರುವ ಬದಲಾವಣೆ ಏನು ಎಂಬುದನ್ನು ಬಿಸಿಸಿಐ ತನ್ನ ಹೇಳಿಕೆಯಲ್ಲಿ ಖಚಿತಪಡಿಸಿದೆ.
ಮೇಲೆ ಹೇಳಿದಂತೆ ಉಭಯ ತಂಡಗಳ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ನಂತರ, 3 ಪಂದ್ಯಗಳ ಟಿ20 ಸರಣಿಯೂ ನಡೆಯಲಿದ್ದು, ಈ ಸರಣಿ ಅಕ್ಟೋಬರ್ 6 ರಿಂದ ಪ್ರಾರಂಭವಾಗಲಿದೆ. ಆದರೆ ಈ ಟಿ20 ಸರಣಿಗೆ ಆತಿಥ್ಯವಹಿಸುತ್ತಿರುವ ಸ್ಥಳಗಳಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಈ ಮೊದಲು ಮೊದಲ ಟಿ20 ಪಂದ್ಯ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಬೇಕಿತ್ತು. ಆದರೆ ಈಗ ಅದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯಲಿದೆ. ಈ ಬದಲಾವಣೆಗೆ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುರಸ್ತಿ ಕಾರ್ಯವೇ ಕಾರಣ ಎನ್ನಲಾಗಿದೆ.
ಈ ಮೂಲಕ 14 ವರ್ಷಗಳ ನಂತರ ಮೊದಲ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯವಹಿಸಲು ಗ್ವಾಲಿಯರ್ ಸಜ್ಜಾಗಿದೆ. ಈ ಪಂದ್ಯಕ್ಕೂ ಮೊದಲು ಅಂದರೆ, 2010 ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಏಕದಿನ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದ್ವಿಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಪುರುಷ ಕ್ರಿಕೆಟಿಗ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದರು. ಆ ಬಳಿಕ ಈ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಅಂತರಾಷ್ಟ್ರೀಯ ಪಂದ್ಯ ಇದಾಗಲಿದೆ.
🚨 NEWS 🚨
BCCI issues revised schedule for international home season (2024-25).
All the details 🔽 #TeamIndia https://t.co/q67n4o7pfF
— BCCI (@BCCI) August 13, 2024
ಈ ಪಂದ್ಯ ಮಾತ್ರವಲ್ಲದೆ, ಇನ್ನೆರಡು ಪಂದ್ಯಗಳ ವೇಳಾಪಟ್ಟಿಯನ್ನೂ ಬದಲಾಯಿಸಲಾಗಿದೆ. ಆದರೆ ಈ ಎರಡೂ ಪಂದ್ಯಗಳು ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟಿ20 ಸರಣಿಗೆ ಒಳಪಟ್ಟ ಪಂದ್ಯಗಳಲ್ಲ. ಬದಲಿಗೆ ಮುಂದಿನ ವರ್ಷ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಲ್ಲಿರುವ ಟಿ20 ಸರಣಿಯ ಪಂದ್ಯಗಳು. ವಾಸ್ತವವಾಗಿ ಇಂಗ್ಲೆಂಡ್ ತಂಡ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಉಭಯ ತಂಡಗಳ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲ್ಲಿದೆ. ಇದೀಗ ಈ ಸರಣಿಯ ಮೊದಲ ಮತ್ತು ಎರಡನೇ ಪಂದ್ಯಗಳ ಸ್ಥಳಗಳನ್ನು ಬದಲಾಯಿಸಲಾಗಿದೆ. ಮೊದಲ ಟಿ20 ಜನವರಿ 22 ರಂದು ಚೆನ್ನೈನಲ್ಲಿ ನಡೆಯಬೇಕಿತ್ತು ಆದರೆ ಈಗ ಈ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಜನವರಿ 25 ರಂದು ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಎರಡನೇ ಟಿ20 ಪಂದ್ಯ ಈಗ ಅದೇ ದಿನಾಂಕದಂದು ಚೆನ್ನೈನಲ್ಲಿ ನಡೆಯಲಿದೆ. ಗಣರಾಜ್ಯೋತ್ಸವದ ಸಿದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಕೋಲ್ಕತ್ತಾ ಪೊಲೀಸರು ಈ ಬದಲಾವಣೆಗೆ ಒತ್ತಾಯಿಸಿದ್ದಾರೆ ಎಂದು ಬಿಸಿಸಿಐ ಕಾರಣ ನೀಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:58 pm, Tue, 13 August 24