ಪ್ರಸ್ತುತ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ 9ನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup 2024) ನಡೆಯುತ್ತಿದೆ. ಈ ಮಿನಿ ವಿಶ್ವಸಮರದಲ್ಲಿ ಸೂಪರ್ 8 ಸುತ್ತಿಗೆ ಅರ್ಹತೆ ಪಡೆದಿರುವ ಟೀಂ ಇಂಡಿಯಾ (Team India) ಇಂದು ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಈ ಬಳಿಕ ಇದೇ ಸುತ್ತಿನಲ್ಲಿ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಸುತ್ತಿನಲ್ಲಿ ಭಾರತ ಕನಿಷ್ಠ 2 ಪಂದ್ಯಗಳನ್ನು ಗೆದ್ದರೆ ಮುಂದಿನ ಸುತ್ತಿಗೆ ಲಗ್ಗೆ ಇಡಲಿದೆ. ಅದು ಸಾಧ್ಯವಾಗದಿದ್ದರೆ, ರೋಹಿತ್ ಪಡೆ ಈ ಬಾರಿಯೂ ಖಾಲಿ ಕೈಯಲ್ಲಿ ಟೂರ್ನಿಯಿಂದ ವಾಪಸ್ಸಾಗಬೇಕಾಗುತ್ತದೆ. ಹೀಗಾಗಿ ಸೂಪರ್ 8 ಸುತ್ತನ್ನು ಗಂಭೀರವಾಗಿ ಪರಿಗಣಿಸಿರುವ ರೋಹಿತ್ ಪಡೆ ಪ್ರತಿ ಪಂದ್ಯವನ್ನು ಗೆಲ್ಲಲು ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ಈ ನಡುವೆ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಯಾವ ತಂಡಗಳನ್ನು ಎದುರಿಸಲಿದೆ? ಎಷ್ಟು ಪಂದ್ಯಗಳು ನಡೆಯಲ್ಲಿವೆ ಎಂಬುದರ ಬಗ್ಗೆ ಬಿಸಿಸಿಐ (BCCI) ಖಚಿತ ಮಾಹಿತಿ ನೀಡಿದೆ. ಅಂದರೆ ಮುಂದಿನ ಫೆಬ್ರವರಿ 2025 ರವರೆಗಿನ ಭಾರತ ತಂಡದ ವೇಳಾಪಟ್ಟಿಯನ್ನು ಇಂದು ಬಿಸಿಸಿಐ ಬಹಿರಂಗಪಡಿಸಿದೆ.
ಬಾಂಗ್ಲಾದೇಶ ತಂಡ ಈ ವರ್ಷ ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗೆ ಭಾರತದ ಪ್ರವಾಸ ಮಾಡಲಿದೆ. ಈ ಪ್ರವಾಸದಲ್ಲಿ ಬಾಂಗ್ಲಾದೇಶ ತಂಡ ಎರಡು ಟೆಸ್ಟ್ ಹಾಗೂ ಮೂರು ಟಿ20 ಪಂದ್ಯಗಳನ್ನು ಭಾರತದ ವಿರುದ್ಧ ಆಡಲಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ಆರಂಭವಾಗಲಿದೆ. ಇದಾದ ಬಳಿಕ ಎರಡನೇ ಟೆಸ್ಟ್ ಪಂದ್ಯ ಅಕ್ಟೋಬರ್ 1 ರಿಂದ ಕಾನ್ಪುರದಲ್ಲಿ ನಡೆಯಲಿದೆ. ಇನ್ನು ಮೂರು ಟಿ20 ಪಂದ್ಯಗಳ ಸರಣಿ ಅಕ್ಟೋಬರ್ 6, 9 ಮತ್ತು 12 ರಂದು ನಡೆಯಲಿದೆ. ಈ ಪಂದ್ಯಗಳ ಆತಿಥ್ಯವನ್ನು ಧರ್ಮಶಾಲಾ, ದೆಹಲಿ ಮತ್ತು ಹೈದರಾಬಾದ್ ವಹಿಸುತ್ತಿವೆ.
🥁 Announced!
The International Home Season 2024-25 Fixtures are here! 🙌
Which contest are you looking forward to the most 🤔#TeamIndia | @IDFCFIRSTBank
— BCCI (@BCCI) June 20, 2024
ಬಾಂಗ್ಲಾದೇಶ ವಿರುದ್ಧದ ಸರಣಿ ಮುಗಿದ ಬಳಿಕ ಭಾರತ, ನ್ಯೂಜಿಲೆಂಡ್ ತಂಡದ ವಿರುದ್ಧ ತವರಿನಲ್ಲಿ ಮುಖಾಮುಖಿಯಾಗಲಿದೆ. ಇದಕ್ಕಾಗಿ ಕಿವೀಸ್ ಪಡೆ ಅಕ್ಟೋಬರ್ನಿಂದ ನವೆಂಬರ್ವರೆಗೆ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳು ನಡೆಯಲಿವೆ. ಸರಣಿಯ ಮೊದಲ ಪಂದ್ಯ ಅಕ್ಟೋಬರ್ 16 ರಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಎರಡನೇ ಟೆಸ್ಟ್ ಅಕ್ಟೋಬರ್ 24 ರಿಂದ ಪುಣೆಯಲ್ಲಿ ನಡೆಯಲಿದ್ದು, ಮೂರನೇ ಮತ್ತು ಕೊನೆಯ ಪಂದ್ಯ ನವೆಂಬರ್ 1 ರಿಂದ ಮುಂಬೈನಲ್ಲಿ ನಡೆಯಲಿದೆ. ಇದರೊಂದಿಗೆ ಈ ಸರಣಿ ಕೊನೆಗೊಳ್ಳಲಿದೆ.
ಮುಂದಿನ ವರ್ಷ ಅಂದರೆ 2025ರ ಜನವರಿಯಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕೆ ಭೇಟಿ ನೀಡಲಿದೆ. ಈ ಸರಣಿಯಲ್ಲಿ 5 ಟಿ20 ಪಂದ್ಯಗಳ ಸರಣಿ ಮತ್ತು ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಜನವರಿ 22 ರಂದು ಚೆನ್ನೈನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಸರಣಿಯ ಎರಡನೇ ಪಂದ್ಯ ಜನವರಿ 25 ರಂದು ಕೋಲ್ಕತ್ತಾದಲ್ಲಿ ಮತ್ತು ಮೂರನೇ ಪಂದ್ಯ ಜನವರಿ 28 ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಸರಣಿಯ ನಾಲ್ಕನೇ ಪಂದ್ಯ ಜನವರಿ 31 ರಂದು ಪುಣೆಯಲ್ಲಿ ನಡೆಯಲಿದೆ. ಕೊನೆಯ ಮತ್ತು ಐದನೇ ಟಿ20 ಪಂದ್ಯ ಫೆಬ್ರವರಿ 2 ರಂದು ಮುಂಬೈನಲ್ಲಿ ನಡೆಯಲಿದೆ. ಸರಣಿಯ ಮೊದಲ ಏಕದಿನ ಪಂದ್ಯ ಫೆಬ್ರವರಿ 6 ರಂದು ನಾಗ್ಪುರದಲ್ಲಿ, ಎರಡನೇ ಪಂದ್ಯ ಫೆಬ್ರವರಿ 9 ರಂದು ಕಟಕ್‌ನಲ್ಲಿ ಮತ್ತು ಕೊನೆಯ ಪಂದ್ಯ ಫೆಬ್ರವರಿ 12 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಇದರೊಂದಿಗೆ ಸರಣಿ ಕೊನೆಗೊಳ್ಳಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Thu, 20 June 24