ಐಸಿಸಿ ಟಿ20 ವಿಶ್ವಕಪ್ (T20 World Cup) ಮುಕ್ತಾಯದ ಬಳಿಕ ಭಾರತ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ಪ್ರವಾಸ ಬೆಳೆಸಲಿದೆ. ಕಿವೀಸ್ ವಿರುದ್ಧ ಏಕದಿನ ಮತ್ತು ಟಿ20, ಬಾಂಗ್ಲಾ ವಿರುದ್ಧ ಏಕದಿನ ಮತ್ತು ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ ಆಡಲಿದೆ. ಸೋಮವಾರ ಸಂಜೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟ ಮಾಡಿದೆ. ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ಕೂಡ ನೀಡಲಾಗಿದೆ. ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಸರಣಿಯಿಂದ ಹಿಂದೆ ಸರಿಯಲಿದ್ದಾರೆ. ಇದರ ನಡುವೆ ಅಚ್ಚರಿ ಎಂಬಂತೆ ನ್ಯೂಜಿಲೆಂಡ್ ವಿರುದ್ಧದ ಟಿ20 ತಂಡದಿಂದ ದಿನೇಶ್ ಕಾರ್ತಿಕ್ (Dinesh Karthik) ಮತ್ತು ಆರ್ ಅಶ್ವಿನ್ ಅವರನ್ನು ಕೈಬಿಡಲಾಗಿದೆ. ಸದ್ಯ ಸಾಗುತ್ತಿರುವ ಟಿ20 ವಿಶ್ವಕಪ್ನಲ್ಲಿ ಕಾರ್ತಿಕ್ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡದ ಕಾರಣ ಅವರನ್ನು ಕೈಬಿಡಲಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ, ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಕಾರ್ತಿಕ್ರನ್ನು ಆಯ್ಕೆ ಮಾಡದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ದಿನೇಶ್ ಕಾರ್ತಿಕ್ ಯಾಕೆ ಆಯ್ಕೆ ಆಗಿಲ್ಲ?:
ದಿನೇಶ್ ಕಾರ್ತಿಕ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗಿಟ್ಟ ಬಗ್ಗೆ ಮಾತನಾಡಿರುವ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ, ”ಇದು ನೀವು ಅಂದುಕೊಂಡಂತೆ ಅಲ್ಲ. ಈ ಸರಣಿ ಟಿ20 ವಿಶ್ವಕಪ್ ಮುಗಿದ ತಕ್ಷಣ ನಡೆಯಲಿದೆ. ಕೆಲ ಆಟಗಾರರು ಸತತವಾಗಿ ಕ್ರಿಕೆಟ್ ಆಡುತ್ತಿರುವುದರಿಂದ ಅವರಿಗೆ ವಿಶ್ರಾಂತಿಯ ಅಗತ್ಯವಿರುತ್ತದೆ. ಮ್ಯಾನೇಜ್ಮೆಂಟ್ ಇದನ್ನೆಲ್ಲ ಗಮನಿಸಿ ಕಾರ್ತಿಕ್ ಅವರಿಗೆ ವಿಶ್ರಾಂತಿ ನೀಡಿದೆ. ಇವರು ಯಾವಾಗಲು ಟಿ20 ಸರಣಿಗೆ ನಮ್ಮ ಆಯ್ಕೆಯಲ್ಲಿ ಇರುತ್ತಾರೆ. ಕಾರ್ತಿಕ್ ಒಬ್ಬ ಅದ್ಭುತ ಆಟಗಾರ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ,” ಎಂದು ಹೇಳಿದ್ದಾರೆ.
ದಿನೇಶ್ ಕಾರ್ತಿಕ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದರು. ಮುಖ್ಯವಾಗಿ ಫಿನಿಶರ್ ಆಗಿ ಗುರುತಿಸಿಕೊಂಡಿರುವ ಇವರು ಟಿ20 ವಿಶ್ವಕಪ್ನಲ್ಲಿ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಅಲ್ಲದೆ ಕಳೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮಧ್ಯೆ ಇಂಜುರಿಗೆ ತುತ್ತಾಗಿದ್ದಾರೆ. ಬೆನ್ನು ನೋವು ಕಾಣಿಸಿಕೊಂಡ ಪರಿಣಾಮ ಪಂದ್ಯದ ಮಧ್ಯೆಯೇ ಹೊರ ನಡೆಯಬೇಕಾಯಿತು. ಹೀಗಾಗಿ ಟಿ20 ವಿಶ್ವಕಪ್ನಲ್ಲಿ ಬುಧವಾರ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಇವರು ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ಇವರ ಬದಲು ಅವಕಾಶಕ್ಕಾಗಿ ಕಾಯುತ್ತಿರುವ ರಿಷಭ್ ಪಂತ್ ಸ್ಥಾನ ಪಡೆದುಕೊಳ್ಳಬಹುದು.
ಇನ್ನು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ನಾಯಕರಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಶಿಖರ್ ಧವನ್ ಏಕದಿನ ಸರಣಿಗೆ ನಾಯಕನಾಗಿದ್ದಾರೆ. ಎರಡೂ ಸರಣಿಗಳಲ್ಲಿ ರಿಷಭ್ ಪಂತ್ ಉಪನಾಯಕನಾಗಿದ್ದಾರೆ. ಬಾಂಗ್ಲಾ ವಿರುದದ್ಧದ ಏಕದಿನ ಸರಣಿ ಮತ್ತು ಟೆಸ್ಟ್ ಸರಣಿಯನ್ನು ಎಂದಿನಂತೆ ರೋಹಿತ್ ಶರ್ಮಾ ಮುನ್ನಡೆಲಿಸಲಿದ್ದು, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ತಂಡ ಸೇರಿಕೊಳ್ಳಲಿದ್ದಾರೆ. ಕಿವೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಕುಲ್ದೀಪ್ ಸೇನ್ ಮತ್ತು ಉಮ್ರಾನ್ ಮಲಿಕ್ ಕೂಡ ಆಯ್ಕೆ ಆಗಿದ್ದಾರೆ.
ಭಾರತ vs ನ್ಯೂಜಿಲೆಂಡ್:
ಭಾರತ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್ ಮತ್ತು ಉಪನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಅರ್ಶ್ದೀಪ್ ಸಿಂಗ್ , ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.
ಭಾರತ ಏಕದಿನ ತಂಡ: ಶಿಖರ್ ಧವನ್ (ನಾಯಕ), ರಿಷಬ್ ಪಂತ್ (ವಿಕೆಟ್ ಕೀಪರ್ ಮತ್ತು ಉಪನಾಯಕ), ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್ , ಅರ್ಶ್ದೀಪ್ ಸಿಂಗ್, ದೀಪಕ್ ಚಹಾರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.
ಭಾರತ vs ಬಾಂಗ್ಲಾದೇಶ:
ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಡಬ್ಲ್ಯೂ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಯಶ್ ದಯಾಳ್.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊ. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.
Published On - 8:18 am, Tue, 1 November 22