ಇಂಗ್ಲೆಂಡ್ ತಂಡಕ್ಕೆ ‘ಬೆನ್​’ಬಲ: ನಿವೃತ್ತಿ ಹಿಂಪಡೆದ ಸ್ಟೋಕ್ಸ್​..!

| Updated By: ಝಾಹಿರ್ ಯೂಸುಫ್

Updated on: Aug 14, 2023 | 10:58 PM

ODI World Cup 2023: ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಇನ್ನು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.

ಇಂಗ್ಲೆಂಡ್ ತಂಡಕ್ಕೆ ‘ಬೆನ್​’ಬಲ: ನಿವೃತ್ತಿ ಹಿಂಪಡೆದ ಸ್ಟೋಕ್ಸ್​..!
Ben Stokes
Follow us on

ಏಕದಿನ ವಿಶ್ವಕಪ್​ಗಾಗಿ ಇಂಗ್ಲೆಂಡ್ ತಂಡದ ಸ್ಟಾರ್ ಆಲ್​ರೌಂಡರ್ ಬೆನ್ ಸ್ಟೋಕ್ಸ್​ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅದರಂತೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ಇಂಗ್ಲೆಂಡ್ ಪರ ಸ್ಟೋಕ್ಸ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. 2022 ರಲ್ಲಿ ಏಕದಿನ ಕ್ರಿಕೆಟ್​ ನಿವೃತ್ತಿ ಘೋಷಿಸಿದ್ದ ಬೆನ್​ ಸ್ಟೋಕ್ಸ್, ಆ ಬಳಿಕ ಟಿ20 ಹಾಗೂ ಟೆಸ್ಟ್ ಕ್ರಿಕೆಟ್​ನಲ್ಲಿ ಮುಂದುವರೆದಿದ್ದರು.

ಇದೀಗ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೆ ಸ್ಟೋಕ್ಸ್ ಅವಶ್ಯಕತೆಯನ್ನು ಮನಗಂಡಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ನಿವೃತ್ತಿ ಹಿಂಪಡೆಯಲು ಸ್ಟೋಕ್ಸ್ ನಿರ್ಧರಿಸಿದ್ದಾರೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಇಂಗ್ಲೆಂಡ್ ಪಾಲಿನ ವಿಶ್ವಕಪ್ ಹೀರೋ:

2019 ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ ಬೆನ್ ಸ್ಟೋಕ್ಸ್​ ಅಜೇಯ 84 ರನ್​ ಬಾರಿಸಿದ್ದರು. ಈ ಮೂಲಕ ಪಂದ್ಯವನ್ನು ಟೈ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆ ಬಳಿಕ ನಡೆದ ಸೂಪರ್ ಓವರ್​ ಕೂಡ ಟೈ ಆದ ಪರಿಣಾಮ ಬೌಂಡರಿ ಲೆಕ್ಕದಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಪಟ್ಟಕ್ಕೇರಿತ್ತು.

ಇನ್ನು 2022 ರ ಟಿ20 ವಿಶ್ವಕಪ್​ ಫೈನಲ್​ನಲ್ಲೂ ಬೆನ್ ಸ್ಟೋಕ್ಸ್ ಅರ್ಧಶತಕ ಬಾರಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಹೀಗಾಗಿಯೇ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗೂ ಬೆನ್ ಸ್ಟೋಕ್ಸ್ ಅಗತ್ಯತೆ ಇಂಗ್ಲೆಂಡ್ ತಂಡಕ್ಕಿದೆ ಎಂದು ಕೆಲ ದಿನಗಳ ಹಿಂದೆಯಷ್ಟೇ ಇಂಗ್ಲೆಂಡ್ ಕೋಚ್ ಮ್ಯಾಥ್ಯೂ ಮೋಟ್ ಅಭಿಪ್ರಾಯಪಟ್ಟಿದ್ದರು.

ಇದೀಗ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬೆನ್ ಸ್ಟೋಕ್ಸ್ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿಯಾಗಿದ್ದು, ಅದರಂತೆ ಅಕ್ಟೋಬರ್ 5 ರಿಂದ ಶುರುವಾಗಲಿರುವ ಏಕದಿನ ವಿಶ್ವಕಪ್​ನಲ್ಲಿ ಸ್ಟಾರ್ ಆಲ್​ರೌಂಡರ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.

ಕೊನೆಯ ಏಕದಿನ ಪಂದ್ಯ:

ಬೆನ್ ಸ್ಟೋಕ್ಸ್ ಕೊನೆಯ ಬಾರಿ ಏಕದಿನ ಪಂದ್ಯದಲ್ಲಿ ಕಾಣಿಸಿಕೊಂಡಿದ್ದು 2022 ರಲ್ಲಿ. ಜುಲೈ 19 ರಂದು ಸೌತ್ ಆಫ್ರಿಕಾ ವಿರುದ್ಧದ ಪಂದ್ಯದ ಮೂಲಕ ಸ್ಟೋಕ್ಸ್ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಇದೀಗ ಬರೋಬ್ಬರಿ 1 ವರ್ಷದ ಬಳಿಕ ಮತ್ತೆ ಒನ್​ಡೇ ಕ್ರಿಕೆಟ್​ಗೆ ಮರಳುವ ನಿರ್ಧಾರ ಮಾಡಿದ್ದಾರೆ. ಅದು ಕೂಡ ಏಕದಿನ ವಿಶ್ವಕಪ್​ಗಾಗಿ ಎಂಬುದು ವಿಶೇಷ.

ಇದನ್ನೂ ಓದಿ: Ben Stokes: ಸಿಕ್ಸರ್ ಕಿಂಗ್…ಹೊಸ ದಾಖಲೆ ಬರೆದ ಬೆನ್ ಸ್ಟೋಕ್ಸ್

ಏಕದಿನ ವಿಶ್ವಕಪ್ ವೇಳಾಪಟ್ಟಿ:

ಈ ಬಾರಿಯ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಶುರುವಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಇನ್ನು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಹಾಗೆಯೆ ನವೆಂಬರ್ 19 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ಜರುಗಲಿದೆ.

 

Published On - 10:56 pm, Mon, 14 August 23