ಪಂದ್ಯ ನಡೆಸಬೇಕೆಂದರೆ..; ಕೆಎಸ್​ಸಿಎಗೆ 17 ಷರತ್ತುಗಳನ್ನು ವಿಧಿಸಿದ ಬೆಂಗಳೂರು ಪೊಲೀಸರು

Bengaluru Police Impose 17 Conditions: ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ನಡೆಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ)ಗೆ ಬೆಂಗಳೂರು ನಗರ ಪೊಲೀಸರು 17 ಷರತ್ತುಗಳನ್ನು ವಿಧಿಸಿದ್ದಾರೆ. ಪಾರ್ಕಿಂಗ್, ಮಹಿಳಾ ಮತ್ತು ಮಕ್ಕಳಿಗೆ ಪ್ರತ್ಯೇಕ ಮಾರ್ಗ, ಬ್ಯಾಗ್ ಸ್ಕ್ಯಾನರ್, ತುರ್ತು ನಿರ್ಗಮನ, ಪ್ರಥಮ ಚಿಕಿತ್ಸಾ ಸೌಲಭ್ಯ ಮುಂತಾದವು ಷರತ್ತುಗಳಲ್ಲಿ ಸೇರಿವೆ. 15 ದಿನಗಳೊಳಗೆ ಈ ಷರತ್ತುಗಳನ್ನು ಪೂರ್ಣಗೊಳಿಸಿದರೆ ಮಾತ್ರ ಪಂದ್ಯಕ್ಕೆ ಅನುಮತಿ ನೀಡುವ ಸೂಚನೆ ನೀಡಲಾಗಿದೆ.

ಪಂದ್ಯ ನಡೆಸಬೇಕೆಂದರೆ..; ಕೆಎಸ್​ಸಿಎಗೆ 17 ಷರತ್ತುಗಳನ್ನು ವಿಧಿಸಿದ ಬೆಂಗಳೂರು ಪೊಲೀಸರು
ಚಿನ್ನಸ್ವಾಮಿ ಕ್ರೀಡಾಂಗಣ

Updated on: Aug 22, 2025 | 7:09 PM

ಕೆಲವೇ ತಿಂಗಳುಗಳ ಹಿಂದೆ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​ಗೆ (IPL) ರಾಜಾತಿಥ್ಯ ನೀಡಿದ್ದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಯಾವುದೇ ಪಂದ್ಯಗಳು ನಡೆಯುವುದಿಲ್ಲವೇನೋ ಎಂಬ ಆತಂಕ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಮೂಡಿತ್ತು. ಇದಕ್ಕೆ ಕಾರಣ ಅದೊಂದು ಘೋರ ದುರಂತ. 18 ವರ್ಷಗಳ ಬಳಿಕ ಐಪಿಎಲ್ ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದ ಆರ್​ಸಿಬಿ (RCB), ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಸುವ ಸಲುವಾಗಿ ಸಡಗರದಿಂದಲೇ ಬೆಂಗಳೂರಿಗೆ ಬಂದಿಳಿದಿತ್ತು. ಆದರೆ ಈ ಸಂಭ್ರಮಕ್ಕೆ ಕೆಲವೇ ಗಂಟೆಗಳಲ್ಲಿ ಸೂತಕದ ಛಾಯೆ ಆವರಿಸಿತು. ತನ್ನ ನೆಚ್ಚಿನ ಆಟಗಾರರನ್ನು ಹತ್ತಿರದಿಂದ ನೋಡುವ ಆಸೆಯಿಂದ ಚಿನ್ನಸ್ವಾಮಿ (M. Chinnaswamy Stadium) ಮೈದಾನದತ್ತ ಬಂದ ಅಭಿಮಾನಿಗಳು ಸಾವಿನ ಮನೆ ಕದ ತಟ್ಟಿದ್ದರು.

2 ಪ್ರಮುಖ ಪಂದ್ಯಾವಳಿಗಳು ಶಿಫ್ಟ್

ಈ ದುರಂತದ ಬಳಿಕ ರಾಜ್ಯ ಸರ್ಕಾರ, ನ್ಯಾಯಮುರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು ಚಿನ್ನಸ್ವಾಮಿ ಕ್ರೀಡಾಂಗಣ ಯಾವುದೇ ದೊಡ್ಡ ಸಮಾರಂಭಗಳ ಆಯೋಜನೆಗೆ ಯೋಗ್ಯವಾಗಿಲ್ಲ ಎಂಬ ವರದಿ ನೀಡಿತ್ತು. ಆ ಬಳಿಕ ಈ ಮೈದಾನದಲ್ಲಿ ನಡೆಯಬೇಕಿದ್ದ ಮಹಾರಾಜ ಟಿ20 ಟ್ರೋಫಿ ಆಯೋಜನೆಗೆ ನಗರದ ಪೊಲೀಸರಿಂದ ಅನುಮತಿ ಸಿಗಲಿಲ್ಲ. ಹೀಗಾಗಿ ಈ ಟೂರ್ನಿಯನ್ನು ಮೈಸೂರಿಗೆ ಸ್ಥಳಾಂತರಿಸಲಾಯಿತು. ಇದೀಗ ಇದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಮಹಿಳೆಯ ಏಕದಿನ ವಿಶ್ವಕಪ್​ ಪಂದ್ಯಗಳನ್ನು ಸಹ ನವಿ ಮುಂಬೈಗೆ ಶಿಫ್ಟ್ ಮಾಡಲಾಗಿದೆ.

17 ಷರತ್ತು ವಿಧಿಸಿದ ಪೊಲೀಸರು

ಇದರಿಂದಾಗಿ ಇನ್ನು ಮುಂದೆ ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯುವುದಿಲ್ಲವಾ ಎಂಬ ಪ್ರಶ್ನೆಗಳು ಮೂಡಿದ್ದವು. ಆದರೀಗ ನಗರದ ಪೊಲೀಸರು ಕೆಎಸ್​ಸಿಎಗೆ 17 ಷರತ್ತುಗಳನ್ನು ವಿಧಿಸಿದ್ದು, ಈ ಷರತ್ತುಗಳನ್ನು ಪೂರ್ಣಗೊಳಿಸಿದರೆ ಪಂದ್ಯ ನಡೆಸಲು ಅನುಮತಿ ನೀಡುವ ಸುಳಿವು ನೀಡಿದ್ದಾರೆ. ಅಲ್ಲದೆ 15 ದಿನದೊಳಗೆ ಷರತ್ತುಗಳನ್ನು ಪೂರೈಸುವಂತೆ ಕೆಎಸ್​ಸಿಎಗೆ ಡೆಡ್ ಲೈನ್ ಕೂಡ ನೀಡಲಾಗಿದೆ.

ನಗರ ಪೊಲೀಸರು ಕೆಎಸ್​ಸಿಎಗೆ ವಿಧಿಸಿದ 17 ಷರತ್ತುಗಳಿವು

  • ಬರುವ ವಾಹನಗಳಿಗಾಗಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು.
  • ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕವಾದ ಮಾರ್ಗ
  • ಎಲ್ಲಾ ಕಡೆಯಲ್ಲೂ ಬ್ಯಾಗ್ ಸ್ಕ್ಯಾನರ್ ಇನ್ಸ್ಟಾಲೇಷನ್ ಮಾಡಬೇಕು
  • ಅವಘಡ ಸಂಭವಿಸಿದಾಗ ತೆರಳಲು ಸುರಕ್ಷಿತ ಸ್ಥಳವನ್ನು ಗುರುತಿಸಬೇಕು
  • ಜನಸಮೂಹ ಮಾನಿಟರ್ ಮಾಡುವ ವ್ಯವಸ್ಥೆ ಇರಬೇಕು
  • ಶಾಶ್ವತವಾಗಿ ಪ್ರಥಮ ಚಿಕಿತ್ಸೆ ಸೌಲಭ್ಯ ಕಲ್ಪಿಸಬೇಕು
  • ಪ್ರತ್ಯೇಕವಾಗಿ ವಿದ್ಯುತ್ ಸಂಪರ್ಕ ಕಲ್ಪಿಸೊ ವ್ಯವಸ್ಥೆ
  • ಆಟಗಾರರಿಗೆ ಪ್ರತ್ಯೇಕ ಆಗಮನ ಮತ್ತು ನಿರ್ಗಮನ ದ್ವಾರ ಇರಬೇಕು
  • ಪ್ರತಿ ಬಾರಿಯು ಪೊಲೀಸರಿಂದ ಅನುಮತಿ ಕಡ್ಡಾಯ
  • ತುರ್ತು ನಿರ್ಗಮನ ವ್ಯವಸ್ಥೆ ಕಡ್ಡಾಯವಾಗಿರಬೇಕು
  • ವಿಪತ್ತು ನಿರ್ವಹಣೆ ಮಾರ್ಗಸೂಚಿ ಫಾಲೊ ಮಾಡಬೇಕು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:05 pm, Fri, 22 August 25