
ಕ್ರೈಸ್ಟ್ಚರ್ಚ್ನ ಹೆಗ್ಲಿ ಓವಲ್ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಎರಡನೇ ಟಿ20 ಪಂದ್ಯ ನಡೆಯಿತು. ಮೊದಲ ಟಿ20 ಪಂದ್ಯದಲ್ಲಿ ಆಡುವ ಅವಕಾಶ ಪಡೆದು 4 ವರ್ಷಗಳ ಬಳಿಕ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದ ಅನುಭವಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ಗೆ ಒಂದೇ ಒಂದು ವಿಕೆಟ್ ಸಿಕ್ಕಿರಲಿಲ್ಲ. ಆದರೆ ಎರಡನೇ ಟಿ20 ಪಂದ್ಯದಲ್ಲಿ ವಿಕೆಟ್ಗಳ ಖಾತೆ ತೆರೆಯುವಲ್ಲಿ ಯಶಸ್ವಿಯಾದ ಭುವನೇಶ್ವರ್ ಕುಮಾರ್ ರನ್ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಆದಾಗ್ಯೂ ಬರೋಬ್ಬರಿ ನಾಲ್ಕು ವರ್ಷ ಅಂದ್ರೆ 1,434 ದಿನಗಳ ಸುದೀರ್ಘ ಅಂತರದ ಬಳಿಕ ಭುವಿ ತಮ್ಮ ಮೊದಲ ಅಂತರರಾಷ್ಟ್ರೀಯ ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.
ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರನ್ನು ಕೇವಲ 6 ರನ್ಗಳಿಗೆ ಔಟ್ ಮಾಡುವ ಮೂಲಕ ಭುವನೇಶ್ವರ್ ತಮ್ಮ ವಿಕೆಟ್ಗಳ ಬರ ನೀಗಿಸಿಕೊಂಡರು. ಭುವಿ ಎಸೆದ ಲೆಂಗ್ತ್ನ ಚೆಂಡನ್ನು ಎದುರಿಸುವಲ್ಲಿ ಮಿಚೆಲ್ ಎಡವಿದರು. ದೊಡ ಹೊಡೆತ ಬಾರಿಸಲು ಮುಂದಾದಾಗ ಚೆಂಡು ಬ್ಯಾಟ್ನ ಅಂಚಿಗೆ ತಾಗಿ ಕವರ್-ಪಾಯಿಂಟ್ ಕಡೆಗೆ ಹಾರಿತು. ಅಲ್ಲಿ ಯುವ ಬ್ಯಾಟರ್ ತಿಲಕ್ ವರ್ಮಾ ಸುಲಭವಾಗಿ ಕ್ಯಾಚ್ ಹಿಡಿದು ಮಿಚೆಲ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು.
ಈ ವಿಕೆಟ್ನೊಂದಿಗೆ ಭುವನೇಶ್ವರ್ ಕುಮಾರ್ ಅವರ ಸುದೀರ್ಘ ಕಾಯುವಿಕೆ ಅಂತ್ಯಗೊಂಡಿತು. ಅವರು ಕೊನೆಯ ಬಾರಿಗೆ ಅಂತರರಾಷ್ಟ್ರೀಯ ವಿಕೆಟ್ ಪಡೆದಿದ್ದು, 2022ರ ನವೆಂಬರ್ 20ರಂದು ಮೌಂಟ್ ಮೌಂಗನುಯಿಯಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಆಗಿತ್ತು. ಇದೀಗ ಭುವಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆದಾಗ್ಯೂ ಬಹಳ ದಿನಗಳ ಬಳಿಕ ತಂಡಕ್ಕೆ ಮರಳಿದ ಭುವಿ ಅವರಿಂದ ಅಭಿಮಾನಿಗಳು ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದರು. ಆದರೆ ಬೌಲಿಂಗ್ನಲ್ಲಿ ಭುವಿ ದುಬಾರಿಯಾಗಿದ್ದಾರೆ. ನ್ಯೂಜಿಲೆಂಡ್ ಬ್ಯಾಟರ್ಗಳು ಅವರ ಬೌಲಿಂಗ್ನಲ್ಲಿ ಮನಬಂದಂತೆ ರನ್ ಗಳಿಸಿದ್ದು, ತಮ್ಮ ನಾಲ್ಕು ಓವರ್ಗಳಲ್ಲಿ ಬರೋಬ್ಬರಿ 50 ರನ್ ಬಿಟ್ಟುಕೊಟ್ಟರು. ಭುವಿ ಅವರ ಈ ಪ್ರದರ್ಶನದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ನಾನಾ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಭಾರತಕ್ಕೆ ಗಾಯದ ಆಘಾತ; 3ನೇ ಟಿ20 ಪಂದ್ಯಕ್ಕೂ ಇಶಾನ್ ಕಿಶನ್ ಅಲಭ್ಯ..!
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 180 ರನ್ಗಳ ಉತ್ತಮ ಮೊತ್ತ ದಾಖಲಿಸಿತು. ಕಿವೀಸ್ ಪರ ಗ್ಲೆನ್ ಫಿಲಿಪ್ಸ್ ಭರ್ಜರಿ 70 ರನ್ ಗಳಿಸಿದರೆ, ಬೆವನ್ ಜಾಕೋಬ್ ಕೂಡ 58 ರನ್ಗಳ ಮಹತ್ವದ ಕೊಡುಗೆ ನೀಡಿದರು. ಭಾರತದ ಪರ ಭುವನೇಶ್ವರ್ ಕುಮಾರ್ ನಾಲ್ಕು ಓವರ್ಗಳಲ್ಲಿ 50 ರನ್ ನೀಡಿ ಒಂದು ವಿಕೆಟ್ ಪಡೆದರು. ದುಬಾರಿ ಬೌಲಿಂಗ್ ಮಾಡಿದರೂ, ದೀರ್ಘ ವಿರಾಮದ ಬಳಿಕ ಅಂತರರಾಷ್ಟ್ರೀಯ ವಿಕೆಟ್ ಪಡೆದಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಇನ್ನು ಭಾರತದ ಪರ ಅರ್ಷದೀಪ್ ಸಿಂಗ್ ಅತ್ಯಧಿಕ ಎರಡು ವಿಕೆಟ್ ಪಡೆದು ಮಿಂಚಿದರು.