RCB ಫ್ಯಾನ್ಸ್​ಗೆ ಗುಡ್ ನ್ಯೂಸ್: ಕೋಚ್ ಆಫರ್ ತಿರಸ್ಕರಿಸಿದ ಆ್ಯಂಡಿ ಫ್ಲವರ್!

ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ಕೋಚ್​ಗಳಲ್ಲಿ ಒಬ್ಬರಾದ ಆ್ಯಂಡಿ ಫ್ಲವರ್, ಮತ್ತೊಮ್ಮೆ ಫ್ರಾಂಚೈಸಿ ಕ್ರಿಕೆಟ್‌ಗೆ ತಮ್ಮ ಮೊದಲ ಆದ್ಯತೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ಜವಾಬ್ದಾರಿ ವಹಿಸಿಕೊಳ್ಳುವಂತೆ ಇಸಿಬಿ ನೀಡಿದ್ದ ಮುಕ್ತ ಅವಕಾಶವನ್ನು ನಿರಾಕರಿಸಿರುವ ಅವರು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲೇ ಮುಂದುವರಿಯಲು ನಿರ್ಧರಿಸಿದ್ದಾರೆ. 

RCB ಫ್ಯಾನ್ಸ್​ಗೆ ಗುಡ್ ನ್ಯೂಸ್: ಕೋಚ್ ಆಫರ್ ತಿರಸ್ಕರಿಸಿದ ಆ್ಯಂಡಿ ಫ್ಲವರ್!
Andy Flower
Image Credit source: RCB

Updated on: Jul 18, 2026 | 8:31 AM

ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ರೇಸ್‌ನಲ್ಲಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರು ಆ ಹುದ್ದೆಯನ್ನು ವಿನಮ್ರವಾಗಿ ನಿರಾಕರಿಸಿದ್ದಾರೆ. ಬ್ರೆಂಡನ್ ಮೆಕಲಮ್ ಅವರ ವಜಾದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಫ್ಲವರ್ ಅವರನ್ನೇ ತನ್ನ ಮೊದಲ ಆಯ್ಕೆಯನ್ನಾಗಿ ಮಾಡಿಕೊಂಡಿತ್ತು. ಆದರೆ, ಆ್ಯಂಡಿ ಫ್ಲವರ್ ತಾವು ಆರ್‌ಸಿಬಿ ಮತ್ತು ಲಂಡನ್ ಸ್ಪಿರಿಟ್ ತಂಡಗಳ ಜವಾಬ್ದಾರಿಯಲ್ಲೇ ಸಂತೋಷವಾಗಿದ್ದೇನೆ. ಹೀಗಾಗಿ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಆಗುತ್ತಿಲ್ಲ ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಹುದ್ದೆ ನಿರಾಕರಿಸಲು ಮುಖ್ಯ ಕಾರಣವೇನು?

ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆ್ಯಂಡಿ ಫ್ಲವರ್, ತಾವು ಈ ನಿರ್ಧಾರಕ್ಕೆ ಬರಲು ಇರುವ ಪ್ರಮುಖ ಕಾರಣಗಳನ್ನು ಹಂಚಿಕೊಂಡಿದ್ದಾರೆ.

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​  ಒಂದೇ ಸಮಯದಲ್ಲಿ ಇಂಗ್ಲೆಂಡ್ ತಂಡ ಹಾಗೂ ಐಪಿಎಲ್ ಫ್ರಾಂಚೈಸಿ ಎರಡನ್ನೂ ನಿಭಾಯಿಸುವ  ಮುಕ್ತ ಆಫರ್ ನೀಡಿತ್ತು. ಆದರೆ, ಐಪಿಎಲ್ ನಡೆಯುವ ತಿಂಗಳುಗಳು ಇಂಗ್ಲೆಂಡ್‌ನ ತವರಿನ ಕ್ರಿಕೆಟ್ ಸೀಸನ್‌ನ ಆರಂಭಿಕ ಹಂತದೊಂದಿಗೆ ನೇರವಾಗಿ ಸಂಘರ್ಷಕ್ಕೊಳಗಾಗುತ್ತವೆ.

“ನಾನು ಇಂಗ್ಲೆಂಡ್ ಕೋಚ್ ಆಗಿದ್ದರೆ ಇಲ್ಲೇ ಇದ್ದು ಆಟಗಾರರನ್ನು ಗಮನಿಸಬೇಕು, ಅದು ಸಾಧ್ಯವಾಗದ ಕಾರಣ ಈ ಆಫರ್ ಬೇಡವೆಂದೆ” ಎಂದು ಫ್ಲವರ್ ತಿಳಿಸಿದ್ದಾರೆ.

ಈ ಬಗ್ಗೆ ಇಸಿಬಿ ಮ್ಯಾನೇಜಿಂಗ್ ಡೈರೆಕ್ಟರ್ ರಾಬ್ ಕೀ ಅವರೊಂದಿಗೆ ನಾನು ಮಾತುಕತೆ ನಡೆಸಿರುವುದು ನಿಜ. ಆದರೆ ಪ್ರಸ್ತುತ ನಾನು ಕೆಲಸ ಮಾಡುತ್ತಿರುವ ಸಂಸ್ಥೆಗಳು, ಅಲ್ಲಿನ ಸುತ್ತಮುತ್ತಲಿನ ಜನರು ಮತ್ತು ಆಟಗಾರರೊಂದಿಗೆ ನಾನು ತುಂಬಾ ಕಂಫರ್ಟಬಲ್ ಆಗಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆರ್‌ಸಿಬಿ ಪಾಲಿಗೆ ಫ್ಲವರ್ ಅನಿವಾರ್ಯ ಏಕೆ?

ಆ್ಯಂಡಿ ಫ್ಲವರ್ ಆರ್‌ಸಿಬಿ ತಂಡದ ಯಶಸ್ಸಿನ ಹಿಂದಿನ ದಿಕ್ಸೂಚಿಯಾಗಿದ್ದಾರೆ. ಫ್ರಾಂಚೈಸಿ ಕ್ರಿಕೆಟ್ ಲೋಕದ ಅತ್ಯಂತ ಯಶಸ್ವಿ ತಂತ್ರಜ್ಞರಾಗಿರುವ ಫ್ಲವರ್, ಆರ್‌ಸಿಬಿ ತಂಡದಲ್ಲಿ ಹೊಸ ಗೆಲುವಿನ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ.

2025 ಮತ್ತು 2026ರ ಸೀಸನ್‌ಗಳಲ್ಲಿ ಆರ್‌ಸಿಬಿಗೆ ಚಾಂಪಿಯನ್ ಪಟ್ಟ ತಂದುಕೊಟ್ಟ ಹೆಗ್ಗಳಿಕೆಯೂ ಇವರಿಗಿದೆ. ಮುಂಬರುವ ಐಪಿಎಲ್ ಸೀಸನ್‌ನ ಮಿನಿ ಹರಾಜು ಹಾಗೂ ತಂಡದ ಪುನರ್ನಿರ್ಮಾಣದ ದೃಷ್ಟಿಯಿಂದ ಫ್ಲವರ್ ಆರ್‌ಸಿಬಿಯಲ್ಲೇ ಉಳಿದಿರುವುದು ತಂಡಕ್ಕೆ ಆನೆಬಲ ತಂದಿದೆ.

ಇಂಗ್ಲೆಂಡ್ ತಂಡಕ್ಕೆ ಮುಂದಿನ ದಾರಿಯೇನು?

ಆ್ಯಂಡಿ ಫ್ಲವರ್ ಅವರ ಈ ‘ನೋ’ ನಿರ್ಧಾರದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ದೊಡ್ಡ ಹಿನ್ನಡೆಯಾಗಿದೆ. ಮುಂಬರುವ ಆಗಸ್ಟ್ 19 ರಿಂದ ಪಾಕಿಸ್ತಾನ್ ವಿರುದ್ಧ ಆರಂಭವಾಗಲಿರುವ ಟೆಸ್ಟ್ ಸರಣಿಗೂ ಮುನ್ನ ಹೊಸ ಕೋಚ್ ಹುಡುಕಬೇಕಾದ ಅನಿವಾರ್ಯತೆ ಇಸಿಬಿಗೆ ಎದುರಾಗಿದೆ.

ಇದನ್ನೂ ಓದಿ: ಗಾಂಜಾ ಕಿಕ್… ಪಾಕಿಸ್ತಾನ್ ಆಟಗಾರನಿಗೆ ಐಸಿಸಿ ನಿಷೇಧ!

ಸದ್ಯಕ್ಕೆ ಇಂಗ್ಲೆಂಡ್ ಕೋಚ್ ರೇಸ್‌ನಲ್ಲಿ ರಾಹುಲ್ ದ್ರಾವಿಡ್, ಜೋನಾಥನ್ ಟ್ರಾಟ್, ರಿಚರ್ಡ್ ಡಾಸನ್, ಸ್ಟೀಫನ್ ಫ್ಲೆಮಿಂಗ್ ಮತ್ತು ಟಾಮ್ ಮೂಡಿ ಅವರ ಹೆಸರುಗಳು ಕೇಳಿಬರುತ್ತಿವೆ. ಇವರಲ್ಲಿ ಯಾರನ್ನು ಆಯ್ಕೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

 

Follow Us