ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಕ್ಷಣಗಣನೆ ಆರಂಭವಾಗಿದೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ನಾಳೆಯಿಂದ ಅಂದರೆ, ನವೆಂಬರ್ 22 ರಿಂದ ಶುರುವಾಗಲಿದೆ. 1996 ರಿಂದ ಎರಡೂ ದೇಶಗಳ ನಡುವೆ ಬಾರ್ಡರ್-ಗವಾಸ್ಕರ್ ಟ್ರೋಫಿ ಆಡಲಾಗುತ್ತಿದೆ. ಆದರೆ ಈ ಬಾರಿಯ ಸರಣಿಯ ಮೊದಲ ಪಂದ್ಯ ಈ ಟ್ರೋಫಿಯ ಇತಿಹಾಸದಲ್ಲೇ ಅತ್ಯಂತ ವಿಶೇಷ ಪಂದ್ಯವಾಗಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಹಿಂದೆಂದೂ ಕಾಣದ ಚಮತ್ಕಾರ ಈ ಪಂದ್ಯದಲ್ಲಿ ಕಾಣಸಿಗಲಿದೆ. ಈ ಟೆಸ್ಟ್ ಸರಣಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡೂ ತಂಡಗಳ ನಾಯಕರು ವೇಗಿಗಳಾಗಿರುವುದೇ ಈ ಪಂದ್ಯದ ಅಪರೂಪದ ಸಂಗತಿಯಾಗಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಕಮಾಂಡ್ ಪ್ಯಾಟ್ ಕಮಿನ್ಸ್ ಕೈಯಲ್ಲಿದ್ದರೆ, ಜಸ್ಪ್ರೀತ್ ಬುಮ್ರಾ ಅವರು ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ವಾಸ್ತವವಾಗಿ, ರೋಹಿತ್ ಶರ್ಮಾ ಈ ಸರಣಿಗೆ ಇನ್ನೂ ತಂಡವನ್ನು ಸೇರಿಕೊಂಡಿಲ್ಲ. ಹೀಗಾಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಈ ದೊಡ್ಡ ಜವಾಬ್ದಾರಿ ನೀಡಲಾಗಿದೆ. ಅಂದರೆ ಸರಣಿಯ ಮೊದಲ ಪಂದ್ಯದಲ್ಲಿ ಉಭಯ ತಂಡಗಳ ಕಮಾಂಡ್ ವೇಗದ ಬೌಲರ್ಗಳ ಕೈಯಲ್ಲಿ ಇರಲಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ಈ ದೃಶ್ಯ ಕಾಣಸಿಗುವುದು ತೀರ ಅಪರೂಪ.
ವಾಸ್ತವವಾಗಿ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಇತಿಹಾಸದಲ್ಲಿ ಇಬ್ಬರು ವೇಗದ ಬೌಲರ್‌ಗಳು ಒಂದೇ ಪಂದ್ಯದಲ್ಲಿ ನಾಯಕತ್ವ ವಹಿಸುತ್ತಿರುವುದು ಇದೇ ಮೊದಲು. ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಈ ದೃಶ್ಯ ಹಿಂದೆಂದೂ ಕಂಡಿರಲಿಲ್ಲ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ವರ್ಷ ಎರಡನೇ ಬಾರಿಗೆ ಇಬ್ಬರು ವೇಗದ ಬೌಲರ್‌ಗಳು ಟೆಸ್ಟ್ ಪಂದ್ಯದ ನಾಯಕತ್ವ ವಹಿಸಿದ್ದಾರೆ. ಇದಕ್ಕೂ ಮೊದಲು ಪ್ಯಾಟ್ ಕಮಿನ್ಸ್ ಮತ್ತು ಟಿಮ್ ಸೌಥಿ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದರು.
ಪರ್ತ್ ಟೆಸ್ಟ್ ಜಸ್ಪ್ರೀತ್ ಬುಮ್ರಾಗೆ ಬಹಳ ಮಹತ್ವದ್ದಾಗಿದೆ. ಏಕೆಂದರೆ ಬುಮ್ರಾ, ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸುತ್ತಿರುವುದು ಇದು ಎರಡನೇ ಬಾರಿಗೆ. ಇದಕ್ಕೂ ಮುನ್ನ ಬುಮ್ರಾ 2022ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ನಾಯಕರಾಗಿದ್ದರು. ಈ ಪಂದ್ಯ ಇಂಗ್ಲೆಂಡ್‌ನಲ್ಲಿಯೇ ನಡೆದಿದ್ದು, ಭಾರತ ತಂಡವೂ ಸೋಲನುಭವಿಸಬೇಕಾಯಿತು. ಅಂದರೆ ಜಸ್ಪ್ರೀತ್ ಬುಮ್ರಾ ಈ ಬಾರಿ ನಾಯಕನಾಗಿ ಗೆಲುವಿನ ಖಾತೆ ತೆರೆಯುವ ನಿರೀಕ್ಷೆಯಲ್ಲಿದ್ದಾರೆ.
ಮತ್ತೊಂದೆಡೆ, ಬುಮ್ರಾಗಿಂತ ಪ್ಯಾಟ್ ಕಮಿನ್ಸ್ ಹೆಚ್ಚು ನಾಯಕತ್ವದ ಅನುಭವವನ್ನು ಹೊಂದಿದ್ದಾರೆ. ಅವರು ಇದುವರೆಗೆ 28 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ನಾಯಕರಾಗಿದ್ದಾರೆ. ಈ ಅವಧಿಯಲ್ಲಿ ಪ್ಯಾಟ್ ಕಮ್ಮಿನ್ಸ್ 17 ಪಂದ್ಯಗಳನ್ನು ಗೆದ್ದು 6 ಪಂದ್ಯಗಳಲ್ಲಿ ಸೋತಿದ್ದಾರೆ. ಉಳಿದಂತೆ 5 ಪಂದ್ಯಗಳು ಡ್ರಾಗೊಂಡಿವೆ. ಇದಲ್ಲದೆ, ಅವರು 62 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 269 ವಿಕೆಟ್ಗಳನ್ನು ಪಡೆದಿದ್ದಾರೆ. ಇತ್ತ ಬುಮ್ರಾ 40 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 173 ವಿಕೆಟ್ಗಳನ್ನು ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ