AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS: ಪರ್ತ್​ನಲ್ಲಿ ಮಳೆ, ಪಂದ್ಯಕ್ಕೆ ಅಡ್ಡಿ ಸಾಧ್ಯತೆ..! ಪಿಚ್ ಯಾರಿಗೆ ಹೆಚ್ಚು ಸಹಕಾರಿ?

IND vs AUS pitch, weather forecast: ಪರ್ತ್‌ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆಯ ಸಾಧ್ಯತೆಯಿದೆ. ಪರ್ತ್ ಪಿಚ್ ವೇಗದ ಬೌಲರ್‌ಗಳಿಗೆ ಅನುಕೂಲಕರವಾಗಿದೆ. ಭಾರತವು ಈ ಮೈದಾನದಲ್ಲಿ ಒಂದು ಪಂದ್ಯವನ್ನು ಆಡಿದ್ದು, ಆ ಪಂದ್ಯದಲ್ಲಿ ಸೋಲು ಕಂಡಿತ್ತು. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಭಾರತಕ್ಕೆ ಈ ಸರಣಿಯಲ್ಲಿ ಗೆಲುವು ಅತ್ಯಗತ್ಯ.

IND vs AUS: ಪರ್ತ್​ನಲ್ಲಿ ಮಳೆ, ಪಂದ್ಯಕ್ಕೆ ಅಡ್ಡಿ ಸಾಧ್ಯತೆ..! ಪಿಚ್ ಯಾರಿಗೆ ಹೆಚ್ಚು ಸಹಕಾರಿ?
ಪರ್ತ್​ ಟೆಸ್ಟ್
ಪೃಥ್ವಿಶಂಕರ
|

Updated on:Nov 21, 2024 | 8:32 PM

Share

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಐದು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯವು ನವೆಂಬರ್ 22 ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ. ಇತ್ತೀಚೆಗಷ್ಟೇ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 3-0 ಅಂತರದಿಂದ ಸರಣಿ ಸೋಲನುಭವಿಸಿತ್ತು. ಇದಾದ ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವುದು ಭಾರತ ತಂಡಕ್ಕೆ ಕೊಂಚ ಕಷ್ಟಕರವಾಗಿದೆ. ಹೀಗಾಗಿ ಟೀಂ ಇಂಡಿಯಾ ಸತತ ಮೂರನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ ಆಡಬೇಕಾದರೆ, ಆಸ್ಟ್ರೇಲಿಯಾ ವಿರುದ್ಧದ ಈ ಟೆಸ್ಟ್ ಸರಣಿಯನ್ನು 4-0 ಅಂತರದಿಂದ ಗೆದ್ದುಕೊಳ್ಳಲೇಬೇಕು. ಅದಕ್ಕೂ ಮುನ್ನ ಮೊದಲ ಟೆಸ್ಟ್ ಪಂದ್ಯ ನಡೆಯುವ ಪರ್ತ್​ನಲ್ಲಿ ಹವಾಮಾನ ಹೇಗಿರಲಿದೆ? ಜೊತೆಗೆ ಆಪ್ಟಸ್ ಕ್ರೀಡಾಂಗಣದ ಪಿಚ್ ಯಾರಿಗೆ ಹೆಚ್ಚು ನೆರವಾಗಲಿದೆ ಎಂಬುದನ್ನು ನೋಡೋಣ.

ಹವಾಮಾನ ವರದಿ

ಕಳೆದ ಕೆಲವು ದಿನಗಳಿಂದ ಪರ್ತ್‌ನಲ್ಲಿ ಮಳೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಟೆಸ್ಟ್ ಪಂದ್ಯದ ವೇಳೆಯೂ ತುಂತುರು ಮಳೆ ಬೀಳಬಹುದು. ಪಂದ್ಯದ ದಿನವಾದ ಶುಕ್ರವಾರದಂದು 20 ಪ್ರತಿಶತದಷ್ಟು ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ಪಂದ್ಯದ ಹಿಂದಿನ ದಿನದಂದು ಅಂದರೆ ಗುರುವಾರದಂದು ಮಧ್ಯಾಹ್ನದ ವೇಳೆಗೆ ಶೇ.20ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ತಡರಾತ್ರಿಯಲ್ಲಿ ಶೇ.58ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ರಾತ್ರಿ ವೇಳೆ ಮಳೆ ಸುರಿದರೆ ಮೊದಲ ದಿನದಾಟದ ಟಾಸ್ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಮಳೆಯಿಂದಾಗಿ, ಪಿಚ್‌ನಲ್ಲಿ ತೇವಾಂಶವಿರುವ ಕಾರಣ ಇದು ಬೌಲರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಇದೆ. ಉಳಿದಂತೆ ಪಂದ್ಯದ ಮೂರನೇ ದಿನವೂ ಶೇ.25ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಪರ್ತ್‌ ಪಿಚ್ ವರದಿ ಹೀಗಿದೆ

ಕ್ಯುರೇಟರ್ ಐಸಾಕ್ ಮೆಕ್‌ಡೊನಾಲ್ಡ್ ಪ್ರಕಾರ, ಆಪ್ಟಸ್‌ನಲ್ಲಿ ಯಾವುದೇ ಸಾಂಪ್ರದಾಯಿಕ ಪಿಚ್ ಇರುವುದಿಲ್ಲ. ಐದು ದಿನವೂ ಇಲ್ಲಿ ಹುಲ್ಲು ಇರಲಿದ್ದು, ಪಿಚ್‌ನಲ್ಲಿ ಬಿರುಕು ಮೂಡುವ ನಿರೀಕ್ಷೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಸ್ಪಿನ್ ಬೌಲರ್‌ಗಳಿಗೆ ಇಲ್ಲಿ ಹೆಚ್ಚಿನ ನೆರವು ಸಿಗುವುದಿಲ್ಲ ಎಂಬುದು ಖಚಿತವಾಗಿದೆ. ಆದಾಗ್ಯೂ, ಪಿಚ್‌ನಲ್ಲಿ ಖಂಡಿತವಾಗಿಯೂ ಬೌನ್ಸ್ ಇರಲಿದ್ದು, ಇದು ವೇಗದ ಬೌಲರ್‌ಗಳು ಹಾಗೂ ಬ್ಯಾಟ್ಸ್‌ಮನ್‌ಗಳಿಗೆ ನೆರವಾಗಲಿದೆ.

ಒಂದು ಪಂದ್ಯವನ್ನಾಡಿದೆ ಭಾರತ

ಆಪ್ಟಸ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಇದುವರೆಗೆ ಕೇವಲ ಒಂದು ಟೆಸ್ಟ್ ಪಂದ್ಯವನ್ನಾಡಿದೆ. 2018ರಲ್ಲಿ ನಡೆದ ಈ ಪಂದ್ಯದಲ್ಲಿ ಟೀಂ ಇಂಡಿಯಾ 146 ರನ್‌ಗಳಿಂದ ಸೋಲನುಭವಿಸಿತ್ತು. ಈ ಮೈದಾನದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದರಿಂದ, ನಾಳಿನ ಪಂದ್ಯದಲ್ಲೂ ಅವರ ಬ್ಯಾಟ್​ನಿಂದ ಶತಕ ಸಿಡಿಯಲಿ ಎಂಬುದು ಅಭಿಮಾನಿಗಳ ಅಶಯವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:29 pm, Thu, 21 November 24