ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡುತ್ತಿರುವ ಟೀಂ ಇಂಡಿಯಾ, ಆ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಆಸೀಸ್ ಪ್ರವಾಸ ಮಾಡಲಿದೆ. ಈ ಸರಣಿ ಆರಂಭಕ್ಕೆ ಕೇವಲ 3 ವಾರಗಳು ಮಾತ್ರ ಉಳಿದಿವೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಮುಗಿದ ನಂತರ, ಟೀಂ ಇಂಡಿಯಾ ನವೆಂಬರ್ 5 ರ ನಂತರ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಲಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ನವೆಂಬರ್ 22 ರಿಂದ ಪರ್ತ್ನಲ್ಲಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಎ ತಂಡದ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆಡಬೇಕಿತ್ತು. ಆದರೆ ಇದೀಗ ಈ ಪಂದ್ಯವನ್ನು ಬಿಸಿಸಿಐ ರದ್ದುಗೊಳಿಸಿದೆ.
ವಾಸ್ತವವಾಗಿ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಮಾಡುವುದಕ್ಕೂ ಮುನ್ನವೇ ರುತುರಾಜ್ ಗಾಯಕ್ವಾಡ್ ನಾಯಕತ್ವದ ಭಾರತ ಎ ತಂಡ, ಆಸ್ಟ್ರೇಲಿಯಾ ಎ ತಂಡದ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ನಿರತವಾಗಿದೆ. ಈ ಪಂದ್ಯ ಮುಗಿದ ಬಳಿಕ ನವೆಂಬರ್ 15 ರಿಂದ 17 ರವರೆಗೆ ಭಾರತ ಎ ವಿರುದ್ಧ ಟೀಂ ಇಂಡಿಯಾ ಪರ್ತ್ನಲ್ಲಿ ಅಭ್ಯಾಸ ಪಂದ್ಯವನ್ನು ಆಡಬೇಕಿತ್ತು. ಮೊದಲ ಟೆಸ್ಟ್ ಪಂದ್ಯ ಇದೇ ಮೈದಾನದಲ್ಲಿ ನಡೆಯುವ ಕಾರಣದಿಂದಾಗಿ ಉತ್ತಮ ತಯಾರಿ ನಡೆಸಲು ಭಾರತ ತಂಡ ಮೊದಲು ತಮ್ಮ ತಮ್ಮಲ್ಲೇ ಪಂದ್ಯ ಆಡಲು ಯೋಜಿಸಿತ್ತು. ಆದರೀಗ ಈ ನಿರ್ಧಾರದಿಂದ ಬಿಸಿಸಿಐ ಹಿಂದೆ ಸರಿದಿದೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ಕಳಪೆ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈಗ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದೆ. ಇನ್ನು ರೋಹಿತ್ ಶರ್ಮಾ ಸೇರಿದಂತೆ ತಂಡದ ಎಲ್ಲ ಆಟಗಾರರು ಈ ಮೂರು ದಿನಗಳಲ್ಲಿ ನೆಟ್ಸ್ನಲ್ಲಿ ಬೆವರು ಹರಿಸಲಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನ ಭಾರತ ತಂಡ ಮಾಡಿದ್ದ ಎರಡೂ ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಅಭ್ಯಾಸ ಪಂದ್ಯಗಳನ್ನು ಆಡಿತ್ತು. 2018-19ರ ಪ್ರವಾಸದ ವೇಳೆ ಭಾರತ ತಂಡ ಕ್ರಿಕೆಟ್ ಆಸ್ಟ್ರೇಲಿಯಾ XI ವಿರುದ್ಧ 4 ದಿನಗಳ ಅಭ್ಯಾಸ ಪಂದ್ಯವನ್ನು ಆಡಿತ್ತು. ನಂತರ 2020-21ರ ಪ್ರವಾಸದಲ್ಲಿಯೂ ಆಸ್ಟ್ರೇಲಿಯಾ ಎ ವಿರುದ್ಧ 3 ದಿನಗಳ ಅಭ್ಯಾಸ ಪಂದ್ಯವನ್ನು ಆಡಿತ್ತು. ಇದಲ್ಲದೆ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋದಾಗ ಪ್ರಮುಖ ತಂಡ ಮತ್ತು ಭಾರತ ಎ ತಂಡಗಳು ತಮ್ಮ ನಡುವೆ ಅಭ್ಯಾಸ ಪಂದ್ಯವನ್ನು ಆಡಿದ್ದವು. ಆದರೀಗ ಈ ಪದ್ಧತಿಯನ್ನು ಮುರಿಯಲು ಬಿಸಿಸಿಐ ನಿರ್ಧರಿಸಿದೆ.
ಗೌತಮ್ ಗಂಭೀರ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರವಹಿಸಿಕೊಂಡ ಬಳಿಕ ತಂಡದ ಯೋಜನೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅದರಂತೆ ಇದೀಗ ಗಂಭೀರ್ ಪರ್ತ್ನಲ್ಲಿ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಕಾರಣವೂ ಇದ್ದು, ಪರ್ತ್ ಪಿಚ್‌ನಲ್ಲಿ ಸಾಕಷ್ಟು ಬೌನ್ಸ್ ಇದೆ. ಅಂತಹ ಪರಿಸ್ಥಿತಿಯಲ್ಲಿ, ಈ ಬೌನ್ಸ್ ಅನ್ನು ಅರ್ಥಮಾಡಿಕೊಳ್ಳಲು, ಬ್ಯಾಟ್ಸ್‌ಮನ್‌ಗಳು ಪಿಚ್‌ನಲ್ಲಿ ಸಾಧ್ಯವಾದಷ್ಟು ಸಮಯವನ್ನು ಕಳೆಯಬೇಕಾಗುತ್ತದೆ. ಅಭ್ಯಾಸ ಪಂದ್ಯದ ಆರಂಭದಲ್ಲಿ ಬ್ಯಾಟ್ಸ್‌ಮನ್‌ಗಳು ಔಟಾದರೆ, ಅವರು ಈ ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ, ಎಲ್ಲಾ ಬ್ಯಾಟ್ಸ್‌ಮನ್‌ಗಳು ಹೆಚ್ಚು ಬ್ಯಾಟಿಂಗ್ ಮಾಡಲು ನೆಟ್ ಸೆಷನ್‌ಗಳಲ್ಲಿ ಸಮಯ ಕಳೆಯಲು ನಿರ್ಧರಿಸಲಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Fri, 1 November 24