ಮೈದಾನದಲ್ಲೇ ಕುಸಿದು ಬಿದ್ದು ಪ್ರಾಣ ಚೆಲ್ಲಿದ ಕ್ಯಾಪಿಟಲ್ಸ್ ತಂಡದ ಕೋಚ್

BPL Tragedy: 2025-26ರ ಬಿಪಿಎಲ್ ಪಂದ್ಯಕ್ಕೂ ಮುನ್ನ ಢಾಕಾ ಕ್ಯಾಪಿಟಲ್ಸ್ ಸಹಾಯಕ ಕೋಚ್ ಮಹಬೂಬ್ ಅಲಿ ಝಾಕಿ ಸಿಲ್ಹೆಟ್ ಕ್ರೀಡಾಂಗಣದಲ್ಲಿ ಹೃದಯಾಘಾತದಿಂದ ಕುಸಿದು ನಿಧನರಾಗಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಅವರನ್ನು ಉಳಿಸಲಾಗಲಿಲ್ಲ. ಇದು ಬಾಂಗ್ಲಾದೇಶ ಕ್ರಿಕೆಟ್ ಜಗತ್ತಿಗೆ ಆಘಾತ ತಂದಿದೆ. ಝಾಕಿ ಅವರು ಬಾಂಗ್ಲಾ ಅಂಡರ್-19 ವಿಶ್ವಕಪ್ ವಿಜೇತ ತಂಡದ ತರಬೇತುದಾರರ ಭಾಗವಾಗಿದ್ದರು.

ಮೈದಾನದಲ್ಲೇ ಕುಸಿದು ಬಿದ್ದು ಪ್ರಾಣ ಚೆಲ್ಲಿದ ಕ್ಯಾಪಿಟಲ್ಸ್ ತಂಡದ ಕೋಚ್
Mahbub Ali Zaki

Updated on: Dec 27, 2025 | 7:53 PM

2025-26ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನ (BPL) ಮೂರನೇ ಪಂದ್ಯ ಢಾಕಾ ಕ್ಯಾಪಿಟಲ್ಸ್ ಹಾಗೂ ರಾಜ್‌ಶಾಹಿ ರಾಯಲ್ಸ್ ನಡುವೆ ಸಿಲ್ಹೆಟ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನವೇ ಮೈದಾನದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಮೈದಾನದಲ್ಲಿ ಪಂದ್ಯ ಪೂರ್ವ ತಯಾರಿ ನಡೆಸುತ್ತಿದ್ದಾಗ ಢಾಕಾ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮಹಬೂಬ್ ಅಲಿ ಝಾಕಿ (Mahbub Ali Zaki) ಹಠಾತ್ತನೆ ಅಸ್ವಸ್ಥರಾಗಿ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಅವರನ್ನು ಉಳಿಸಲಾಗಲಿಲ್ಲ.

ಢಾಕಾ ಕ್ಯಾಪಿಟಲ್ಸ್ ಕೋಚ್‌ಗೆ ಹೃದಯಾಘಾತ ​

ಹೃದಯಾಘಾತದಿಂದ ಮೆಹಬೂಬ್ ಅಲಿ ಝಾಕಿ ಮೈದಾನದಲ್ಲಿಯೇ ಹಠಾತ್ತನೆ ಕುಸಿದು ಬಿದ್ದರು. ಝಾಕಿ ಅವರನ್ನು ತಕ್ಷಣವೇ ಸಿಪಿಆರ್ ನೀಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದ ಫ್ರಾಂಚೈಸಿ ಝಾಕಿ ಅವರು ಪ್ರಸ್ತುತ ಐಸಿಯುನಲ್ಲಿದ್ದಾರೆ ಎಂದಿತ್ತು . ತಂಡವು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಝಾಕಿ ಅಭ್ಯಾಸದ ಸಮಯದಲ್ಲಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಕುಸಿದು ಬಿದ್ದರು. ಅವರಿಗೆ ತಕ್ಷಣ ಮೈದಾನದಲ್ಲಿ ವೈದ್ಯಕೀಯ ನೆರವು ನೀಡಲಾಯಿತು. ಸಿಪಿಆರ್ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆಯ ಬಳಿಕ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದಿತ್ತು. ಆದಾಗ್ಯೂ, ಸ್ವಲ್ಪ ಸಮಯದ ನಂತರ, ಫ್ರಾಂಚೈಸಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ, ‘ಮೆಹಬೂಬ್ ಅಲಿ ಝಾಕಿ ನಿಧನರಾಗಿದ್ದಾರೆ ಎಂಬ ಪೋಸ್ಟ್ ಅನ್ನು ಹಂಚಿಕೊಂಡಿದೆ.

ಢಾಕಾ ಕ್ಯಾಪಿಟಲ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ‘ಢಾಕಾ ಕ್ಯಾಪಿಟಲ್ಸ್ ಕುಟುಂಬದ ಪ್ರೀತಿಯ ಸಹಾಯಕ ತರಬೇತುದಾರ ಹೃದಯ ಕಾಯಿಲೆಯಿಂದ ನಿಧನರಾಗಿದ್ದಾರೆ ಎಂದು ತಿಳಿಸಲು ನಮಗೆ ತುಂಬಾ ದುಃಖವಾಗುತ್ತಿದೆ . ಈ ಸರಿಪಡಿಸಲಾಗದ ನಷ್ಟದಿಂದ ನಾವು ತುಂಬಾ ದುಃಖಿತರಾಗಿದ್ದೇವೆ . ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ನಮ್ಮ ಹೃತ್ಪೂರ್ವಕ ಸಂತಾಪಗಳು’ ಎಂದು ಬರೆದುಕೊಂಡಿದೆ.

ಬಾಂಗ್ಲಾದೇಶ ಕ್ರಿಕೆಟ್‌ಗೆ ಮಹತ್ವದ ಕೊಡುಗೆ

ಮಹಬೂಬ್ ಅಲಿ ಝಾಕಿ ಬಾಂಗ್ಲಾದೇಶ ಕ್ರಿಕೆಟ್‌ನ ದೀರ್ಘಕಾಲೀನ ಸದಸ್ಯರಾಗಿದ್ದರು ಮತ್ತು ಹಲವಾರು ಆಟಗಾರರಿಗೆ ಮಾರ್ಗದರ್ಶಕರಾಗಿದ್ದರು . ಈ ಘಟನೆಯು ಇಡೀ ತಂಡ ಮತ್ತು ಕ್ರಿಕೆಟ್ ಜಗತ್ತನ್ನು ಆಘಾತಗೊಳಿಸಿದೆ. ಅವರು 2020 ರ ಐಸಿಸಿ ಅಂಡರ್-19 ವಿಶ್ವಕಪ್ ಗೆದ್ದ ಬಾಂಗ್ಲಾದೇಶ ತಂಡದ ತರಬೇತುದಾರರ ಭಾಗವಾಗಿದ್ದರು, ಇದು ಬಾಂಗ್ಲಾದೇಶದ ಮೊದಲ ಮತ್ತು ಏಕೈಕ ಐಸಿಸಿ ಟ್ರೋಫಿಯಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ