ಸಚಿನ್ ಸಾರ್ವಕಾಲಿಕ ರನ್ ದಾಖಲೆ ಮುರಿಯಲಿದ್ದಾರಾ ಜೋ ರೂಟ್?
ಸಚಿನ್ ತೆಂಡೂಲ್ಕರ್ ಅವರ ಒಟ್ಟು ಟೆಸ್ಟ್ ರನ್‌ಗಳ ದಾಖಲೆಯನ್ನು ಮುರಿಯುವ ಮುನ್ನವೇ, ಜೋ ರೂಟ್ ಕ್ರಿಕೆಟ್ ದೇವರ ಮತ್ತೊಂದು ಅಪರೂಪದ ದಾಖಲೆಗೆ ಮುತ್ತಿಕ್ಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ್ದ ಸಚಿನ್ (68) ಅವರ ದಾಖಲೆಯನ್ನು ಮುರಿದು ಜೋ ರೂಟ್ (69) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಇತಿಹಾಸದೊಂದಿಗೆ ಇದೀಗ ರೂಟ್ ಮತ್ತೊಂದು ವಿಶ್ವ ದಾಖಲೆಯತ್ತ ಹೆಜ್ಜೆಯನ್ನಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ರನ್‌ಗಳ ಶಿಖರವನ್ನು ಏರುವುದು ಸುಲಭದ ಮಾತಲ್ಲ. ಆದರೆ, ಆಧುನಿಕ ಕ್ರಿಕೆಟ್‌ನ ಕ್ಲಾಸಿಕ್ ಬ್ಯಾಟರ್ ಜೋ ರೂಟ್ ಅವರಿಗೆ ರನ್ ಗಳಿಸುವುದು ಒಂದು ದಿನಚರಿಯಾಗಿಬಿಟ್ಟಿದೆ. ಅದಕ್ಕೆ ಸಾಕ್ಷಿ ಎಂಬಂತೆ, ಇದೀಗ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ವಿಶ್ವ ದಾಖಲೆಯತ್ತ ಹೆಜ್ಜೆಯನ್ನಿಟ್ಟಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಲು ರೂಟ್ ಇನ್ನೂ 1,643 ರನ್‌ಗಳನ್ನು ಕಲೆಹಾಕಬೇಕಿದೆ. ಹೀಗಾಗಿಯೇ, ಸಚಿನ್ ಅವರ ಈ ವಿಶ್ವ ದಾಖಲೆಯನ್ನು ಜೋ ರೂಟ್ ಅಳಿಸಿ ಹಾಕಲಿದ್ದಾರಾ ಎಂಬ ಕುತೂಹಲಕಾರಿ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಇದಕ್ಕೆ ಮುಖ್ಯ ಕಾರಣ ಜೋ ರೂಟ್ ಕಳೆದ ಐದು ವರ್ಷಗಳಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ತೋರುತ್ತಿರುವ ಅಪ್ರತಿಮ ಸ್ಥಿರತೆ. 2021ರ ನಂತರ ಅವರ ಬ್ಯಾಟಿಂಗ್ ಶೈಲಿ ಸಂಪೂರ್ಣ ಬದಲಾಗಿದ್ದು, ಅವರು ಪ್ರತಿ ಕ್ಯಾಲೆಂಡರ್ ವರ್ಷದಲ್ಲೂ ಸರಾಸರಿ 1,000ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸುತ್ತಾ ಮುನ್ನುಗ್ಗುತ್ತಿದ್ದಾರೆ.
ಹೀಗಾಗಿಯೇ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ತಮ್ಮ 24 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ನಿರ್ಮಿಸಿದ 15,921 ರನ್‌ಗಳ ದಾಖಲೆ ಇದೀಗ ಅಲುಗಾಡತೊಡಗಿದೆ. ಏಕೆಂದರೆ, ಈ ಸಾರ್ವಕಾಲಿಕ ಮಹಾನ್ ದಾಖಲೆಯನ್ನು ಮುರಿದು ಇತಿಹಾಸ ಬರೆಯುವ ಸುವರ್ಣ ಅವಕಾಶವೊಂದು ಜೋ ರೂಟ್ ಅವರ ಮುಂದಿದೆ.
ದಾಖಲೆ ಮುರಿಯಲಿದ್ದಾರಾ?
ಜೋ ರೂಟ್ ಅವರು ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ಟೆಸ್ಟ್ ರನ್ ದಾಖಲೆಯನ್ನು ಮುರಿಯುವುದು ಬಹುತೇಕ ನಿಶ್ಚಿತ ಎಂದು ಕ್ರಿಕೆಟ್ ವಿಶ್ಲೇಷಕರು ಬಲವಾಗಿ ನಂಬಿದ್ದಾರೆ. ಇದಕ್ಕೆ ಅವರು ಮುಂದಿಡುತ್ತಿರುವ ಪಾಯಿಂಟ್ಗಳು ಈ ಕೆಳಗಿನಂತಿವೆ.
ಸುದೀರ್ಘ ಟೆಸ್ಟ್ ವೇಳಾಪಟ್ಟಿ: ಇತರ ದೇಶಗಳಿಗೆ ಹೋಲಿಸಿದರೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವರ್ಷಕ್ಕೆ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಯೋಜಿಸುತ್ತದೆ. ಇಂಗ್ಲೆಂಡ್ ಪ್ರತಿ ವರ್ಷ ಸರಾಸರಿ 12 ರಿಂದ 14 ಟೆಸ್ಟ್ ಪಂದ್ಯಗಳನ್ನು ಆಡುತ್ತದೆ. ಮುಂಬರುವ ದಿನಗಳಲ್ಲಿ ಇಂಗ್ಲೆಂಡ್ ತಂಡವು ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ‘ಆ್ಯಶಸ್’ ಸರಣಿ ಸೇರಿದಂತೆ ಹಲವು ಮಹತ್ವದ ಸರಣಿಗಳನ್ನು ಆಡಲಿದ್ದು, ರೂಟ್ ಅವರಿಗೆ ರನ್ ಗಳಿಸಲು ಸಾಕಷ್ಟು ಅವಕಾಶಗಳಿವೆ.
ವಯಸ್ಸು ಮತ್ತು ಅತ್ಯುತ್ತಮ ಫಿಟ್‌ನೆಸ್: ಪ್ರಸ್ತುತ ಜೋ ರೂಟ್ ಅವರಿಗೆ 35 ವರ್ಷ ವಯಸ್ಸು. ಇಂಗ್ಲೆಂಡ್‌ನ ಮಾಜಿ ನಾಯಕ ಅಲಿಸ್ಟರ್ ಕುಕ್ 33ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಉದಾಹರಣೆ ಇದ್ದರೂ, ರೂಟ್ ಅವರ ಪ್ರಸ್ತುತ ಫಿಟ್‌ನೆಸ್ ನೋಡಿದರೆ ಅವರು ಕನಿಷ್ಠ ಇನ್ನು 2 ರಿಂದ 3 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡುವುದು ನಿಶ್ಚಿತ.
ಇತ್ತೀಚಿನ ವರ್ಷಗಳ ರನ್ ಬೇಟೆ: 2021ರ ನಂತರ ಜೋ ರೂಟ್ ಅವರ ಬ್ಯಾಟಿಂಗ್ ಶೈಲಿ ಸಂಪೂರ್ಣ ಬದಲಾಗಿದೆ. ಅವರು ಪ್ರತಿ ವರ್ಷ ಸರಾಸರಿ 1,000 ಕ್ಕೂ ಹೆಚ್ಚು ಟೆಸ್ಟ್ ರನ್ ಗಳಿಸುತ್ತಾ ಬಂದಿದ್ದಾರೆ. ಇದೇ ವೇಗದಲ್ಲಿ ಮುಂದುವರಿದರೆ, ಕೇವಲ 15 ರಿಂದ 18 ಟೆಸ್ಟ್ ಪಂದ್ಯಗಳಲ್ಲಿ ಅವರು ಸಚಿನ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.
ರೂಟ್ ಮುಂದಿರುವ ಸವಾಲುಗಳೇನು?
ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆ ಮುರಿಯುವುದು ಸುಲಭ ಎಂದು ಕಂಡರೂ ಜೋ ರೂಟ್ ಮುಂದೆ ಕೆಲವು ಪ್ರಮುಖ ಸವಾಲುಗಳಿವೆ…
ಗಾಯದ ಸಮಸ್ಯೆ: ವಯಸ್ಸಾಗುತ್ತಿದ್ದಂತೆ ಕ್ರೀಡಾಪಟುಗಳಲ್ಲಿ ಗಾಯದ ಸಮಸ್ಯೆಗಳು ಹೆಚ್ಚಾಗುತ್ತವೆ. ಜೋ ರೂಟ್ ಮುಂಬರುವ 2 ವರ್ಷಗಳ ಕಾಲ ಯಾವುದೇ ದೊಡ್ಡ ಗಾಯಗಳಿಲ್ಲದೆ ಫಿಟ್ ಆಗಿರಬೇಕಾಗುತ್ತದೆ.
ಫಾರ್ಮ್ ಕುಸಿತ: ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟರ್‌ಗೆ ಫಾರ್ಮ್ ಕುಸಿತ ಸಾಮಾನ್ಯ. ರೂಟ್ ಮುಂಬರುವ ಸರಣಿಗಳಲ್ಲಿ ಸತತವಾಗಿ ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾರೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಟೀಮ್ ಇಂಡಿಯಾ ಪಂದ್ಯಗಳ ಸಮಯ ಬದಲಾವಣೆ
ಅಂದರೆ, ಜೋ ರೂಟ್ ಮುಂಬರುವ ಎರಡು ವರ್ಷಗಳ ಕಾಲ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಇದೇ ಫಾರ್ಮ್‌ನೊಂದಿಗೆ ಮುಂದುವರಿದರೆ, ಅವರ ಬ್ಯಾಟ್‌ನಿಂದ ಬಾಕಿ ಇರುವ 1,643 ರನ್‌ಗಳು ಮೂಡಿಬರುವುದು ಕಷ್ಟವೇನಲ್ಲ. ಒಂದು ವೇಳೆ ಈ ರನ್‌ಗಳು ದಾಖಲಾದರೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ವಿಶ್ವ ದಾಖಲೆಯು ಜೋ ರೂಟ್ ಪಾಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ.




