ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಫುಟ್ಬಾಲ್ ಆಟಗಾರ ಸುನಿಲ್ ಛೆಟ್ರಿ ಅವರು ಶನಿವಾರದಂದು, ಉನ್ನತ ಮಟ್ಟದಲ್ಲಿ ಇಷ್ಟು ದೀರ್ಘಕಾಲ ಆಡಿದ್ದಕ್ಕಾಗಿ ದೇಶದ ಉನ್ನತ ಕ್ರೀಡಾ ಗೌರವವನ್ನು ಪಡೆದುಕೊಂಡಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಭಾರತೀಯ ನಾಯಕ ಛೆಟ್ರಿ 2002 ರಲ್ಲಿ ಮೋಹನ್ ಬಗಾನ್ ಕ್ಲಬ್‌ನೊಂದಿಗೆ ತಮ್ಮ ವೃತ್ತಿಪರ ವೃತ್ತಿಜೀವನವನ್ನು ಪ್ರಾರಂಭಿಸಿದರು. 2005 ರಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪ್ರವೇಶ ಮಾಡಿದರು. 37 ವರ್ಷ ವಯಸ್ಸಿನ ಆಟಗಾರ ಶನಿವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಖೇಲ್ ರತ್ನ ಪ್ರಶಸ್ತಿಯನ್ನು ಸ್ವೀಕರಿಸಿದರು. ಖೇಲ್ ರತ್ನ ಪ್ರಶಸ್ತಿ ಬರಲು ಪ್ರಮುಖ ಕಾರಣವೆಂದರೆ ನಾನು 19 ವರ್ಷಗಳಿಂದ ಆಡುತ್ತಿದ್ದೇನೆ ಎಂಬುದೆ ಕಾರಣ ಎಂದು ಛೆಟ್ರಿ ಹೇಳಿದ್ದಾರೆ. ಇದಕ್ಕಾಗಿ ನಾನು ಪ್ರತಿಯೊಬ್ಬ ಮಸಾಜ್, ಫಿಸಿಯೋ ಮತ್ತು ವೈದ್ಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ‘ಸೂಪರ್‌ಸ್ಟಾರ್’ ಆದ ನಿಮ್ಮೆಲ್ಲರಿಂದಲೇ ನಾನು ಮೈದಾನದಲ್ಲಿ ಆಡಲು ಸಾಧ್ಯವಾಯಿತು ಎಂದು ಅಭಿಮಾನಿಗಳನ್ನು ಹೊಗಳಿದ್ದಾರೆ.
ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (ಎಐಎಫ್‌ಎಫ್) ಹೊರಡಿಸಿದ ಹೇಳಿಕೆಯ ಪ್ರಕಾರ, ನನಗೆ ಸಾಧ್ಯವಿಲ್ಲ ಎಂದು ನಾನು ಭಾವಿಸಿದ ಸಂದರ್ಭಗಳಿವೆ, ಆದರೆ ನೀವು ಅದನ್ನು ನನಗೆ ಸಾಧ್ಯವಾಗಿಸಿದ್ದೀರಿ ಎಂದು ಮನಬಿಚ್ಚಿ ಮಾತನಾಡಿದ್ದಾರೆ. ಛೆಟ್ರಿ ಅವರು ಆಡಿದ ಕ್ಲಬ್‌ಗಳಿಗೆ ಮತ್ತು ಅವರ ತಂಡದ ಸದಸ್ಯರು, ಅಭಿಮಾನಿಗಳು ಮತ್ತು ಕ್ಲಬ್‌ಗಳು ಮತ್ತು ರಾಷ್ಟ್ರೀಯ ತಂಡದಿಂದ ಅವರ ಕುಟುಂಬಕ್ಕೆ ಧನ್ಯವಾದ ಹೇಳಿದರು.
ನೀವು ನನ್ನೊಂದಿಗೆ ಕನಸು ಕಂಡಿದ್ದೀರಿ
ಇಷ್ಟು ವರ್ಷಗಳ ಕಾಲ ನನ್ನೊಂದಿಗೆ ಎಲ್ಲವನ್ನೂ ಸಹಿಸಿಕೊಂಡಿದ್ದೀರಿ, ನನ್ನೊಂದಿಗೆ ಸಂತೋಷಪಡುತ್ತೀರಿ, ನನ್ನ ಏರಿಳಿತಗಳಲ್ಲಿ ನೀವು ಯಾವಾಗಲೂ ನನ್ನೊಂದಿಗೆ ಇದ್ದೀರಿ. ನೀವು ನನ್ನೊಂದಿಗೆ ಕನಸು ಕಂಡಿದ್ದೀರಿ. ಹೀಗಾಗಿ ನಾನು ಈ ಪ್ರಶಸ್ತಿಯನ್ನು ಎಲ್ಲರಿಗೂ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ. ಛೆಟ್ರಿ ದೇಶಕ್ಕಾಗಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಮತ್ತು ಅತಿ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. 125 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 80 ಗೋಲುಗಳನ್ನು ಗಳಿಸಿರುವ ಅವರು ಸಕ್ರಿಯ ಆಟಗಾರರಲ್ಲಿ ಗೋಲುಗಳ ಸಂಖ್ಯೆಯಲ್ಲಿ ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿಗೆ ಸಮಾನರಾಗಿದ್ದಾರೆ.
ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿಯನ್ನು ಪಡೆದ ಕೆಲವೇ ಭಾರತೀಯ ಫುಟ್ಬಾಲ್ ಆಟಗಾರರಲ್ಲಿ ಇವರು ಒಬ್ಬರು. ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಅವರು ಖೇಲ್ ರತ್ನ ಪ್ರಶಸ್ತಿ ಪಡೆದ ಛೆಟ್ರಿ ಅವರನ್ನು ಅಭಿನಂದಿಸಿದ್ದಾರೆ. ಪ್ರಶಸ್ತಿ ಬಗ್ಗೆ ಮಾತನಾಡಿದ ಪಟೇಲ್, ಇದಕ್ಕೆ ಸುನಿಲ್‌ಗಿಂತ ಹೆಚ್ಚು ಅರ್ಹರು ಯಾರೂ ಇಲ್ಲ. ಅವರು ಭಾರತೀಯ ಫುಟ್‌ಬಾಲ್‌ಗೆ ಧ್ವಜಧಾರಿ ಮತ್ತು ಮಾದರಿಯಾಗಿದ್ದಾರೆ. ತಮ್ಮ ದೇಶಕ್ಕಾಗಿ ಮತ್ತು ಅವರ ಎಲ್ಲಾ ಕ್ಲಬ್‌ಗಳಿಗಾಗಿ ಹಲವಾರು ಸಾಧನೆಗಳನ್ನು ಸಾಧಿಸಿದ್ದಾರೆ. ಅವರ ಭವಿಷ್ಯಕ್ಕೆ ಶುಭ ಹಾರೈಸುತ್ತೇನೆ ಎಂದರು. ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ಕೂಡ ಅಭಿನಂದಿಸಿದ್ದಾರೆ.