ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (Celebrity Cricket League) 2024 ರ ಟೇಬಲ್ ಟಾಪರ್ಗಳ ಕಾಳಗದಲ್ಲಿ ಚೆನ್ನೈ ರೈನೋಸ್ ತಂಡವನ್ನು 67 ರನ್ಗಳಿಂದ ಮಣಿಸಿದ ಕರ್ನಾಟಕ ಬುಲ್ಡೋಜರ್ಸ್ ತಂಡ (Chennai Rhinos vs Karnataka Bulldozers) ಲೀಗ್ನಲ್ಲಿ ಸತತ ಮೂರನೇ ಜಯ ದಾಖಲಿಸಿದೆ. ಲೀಗ್ನ ಮೊದಲ ಪಂದ್ಯದಲ್ಲಿ ಮುಂಬೈ ಹೀರೋಸ್ ತಂಡವನ್ನು ಮಣಿಸಿದ್ದ ಪ್ರದೀಪ್ ಪಡೆ, ತನ್ನ ಎರಡನೇ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು 30 ರನ್ಗಳಿಂದ ಮಣಿಸಿತ್ತು. ಇದೀಗ ನಡೆದ ಮೂರನೇ ಪಂದ್ಯದಲ್ಲಿ ಗೆಲುವಿಗೆ 202 ರನ್ ಟಾರ್ಗೆಟ್ ಪಡೆದಿದ್ದ ಚೆನ್ನೈ ರೈನೋಸ್ ತಂಡ ನಿಗದಿತ 10 ಓವರ್ಗಳಲ್ಲಿ 134 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಕರ್ನಾಟಕ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸಿದಲ್ಲದೆ, ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ಮೊದಲ 10 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 137 ರನ್ ಕಲೆಹಾಕಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ನಾಯಕ ಪ್ರದೀಪ್ ಹಾಗೂ ಕೃಷ್ಣ ಕೇವಲ 5 ಓವರ್ಗಳಲ್ಲಿ 90 ರನ್ ಕಲೆಹಾಕಿ ಉತ್ತಮ ಜೊತೆಯಾಟ ನೀಡಿತು. ಇದರಲ್ಲಿ ಪ್ರದೀಪ್ ಕೇವಲ 33 ಎಸೆತಗಳಲ್ಲಿ 65 ರನ್ ಕಲೆಹಾಕಿದರೆ, ಲೀಗ್ನಲ್ಲಿ ಸತತ ನಾಲ್ಕನೇ ಶತಕ ಸಿಡಿಸಿದ ಕೃಷ್ಣ ಕೇವಲ 24 ಎಸೆತಗಳಲ್ಲಿ 57 ರನ್ ಚಚ್ಚಿದರು.
ಈ ಗುರಿ ಬೆನ್ನಟ್ಟಿದ ಚೆನ್ನೈ ತಂಡ ಮೊದಲ 10 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು ಕೇವಲ 84 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಚೆನ್ನೈ ಪರ ವಿಕ್ರಾಂತ್ 19 ರನ್ ಬಾರಿಸಿ ಅತ್ಯಧಿಕ ಸ್ಕೋರರ್ ಎನಿಸಿಕೊಂಡರು. ರಮಣ ಹಾಗೂ ಅಜಯ್ ತಲಾ 12 ರನ್ ಬಾರಿಸಿದರು. ಉಳಿದಂತೆ ತಂಡದ ಯಾವುದೇ ಬ್ಯಾಟರ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಇತ್ತ ಕರ್ನಾಟಕ ಪರ ವೇಗಿಗಳಾದ ಕರಣ್ ಹಾಗೂ ಕಾರ್ತಿಕ್ ತಲಾ 3 ವಿಕೆಟ್ ಪಡೆದರೆ, ಸುನೀಲ್ ಹಾಗೂ ಚಂದನ್ ತಲಾ ಒಂದೊಂದು ವಿಕೆಟ್ ಪಡೆದರು. ಇದರಲ್ಲಿ ವಿಶೇಷತೆ ಎಂದರೆ ವೇಗಿ ಕರಣ್ ಈ ಸೀಸನ್ನ ಮೊದಲ ಹ್ಯಾಟ್ರಿಕ್ ಸಂಪಾಧಿಸಿದರು.
53 ರನ್ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ಕಾರ್ತಿಕ್ ಹಾಗೂ ರಾಜೀವ್ ಸ್ಫೋಟಕ ಆರಂಭ ನೀಡಿದರು. ಆರಂಭದಿಂದಲೂ ಬೌಂಡರಿಗಳ ಮಳೆಗರದ ರಾಜೀವ್ ಕೇವಲ 25 ಎಸೆತಗಳಲ್ಲಿ 63 ರನ್ ಕಲೆಹಾಕಿದರು. ಎರಡನೇ ಇನ್ನಿಂಗ್ಸ್ನಲ್ಲೂ ಅಬ್ಬರಿಸಿದ ಕೃಷ್ಣ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ತಂಡವನ್ನು 148 ರನ್ಗಳಿಗೆ ಕೊಂಡೊಯ್ಯುವಲ್ಲಿ ನೆರವಾದರು.
ಗೆಲುವಿಗೆ 202 ರನ್ಗಳ ಗುರಿ ಬೆನ್ನಟ್ಟಿದ ಚೆನ್ನೈ ರೈನೋಸ್ ತಂಡ ನಿಗದಿತ 10 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ಆರಂಭಿಕ ಅಜೇಯ 29 ಎಸೆತಗಳಲ್ಲಿ 71 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:32 pm, Sun, 3 March 24