ಭಾರತ- ಆಫ್ರಿಕಾ ಟಿ20 ಪಂದ್ಯದ ಮೇಲೆ ಕೀಟಗಳ ದಾಳಿ; ಡಗೌಟ್​ಗೆ ಓಡಿದ ಪ್ಲೇಯರ್ಸ್​

|

Updated on: Nov 13, 2024 | 11:22 PM

India vs South Africa T20: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯ ಕೀಟಗಳ ಆಕ್ರಮಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಭಾರತ ನೀಡಿದ 220 ರನ್​ಗಳ ಗುರಿ ಬೆನ್ನಟ್ಟುವ ವೇಳೆ ಹಾರುವ ಕೀಟಗಳಿಂದ ಆಟಗಾರರಿಗೆ ತೊಂದರೆಯಾದ ಕಾರಣ ಅಂಪೈರ್‌ಗಳು ಪಂದ್ಯವನ್ನು ನಿಲ್ಲಿಸಿದರು.

ಭಾರತ- ಆಫ್ರಿಕಾ ಟಿ20 ಪಂದ್ಯದ ಮೇಲೆ ಕೀಟಗಳ ದಾಳಿ; ಡಗೌಟ್​ಗೆ ಓಡಿದ ಪ್ಲೇಯರ್ಸ್​
ಭಾರತ- ಆಫ್ರಿಕಾ
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯ ಸೆಂಚೂರಿಯನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ತಿಲಕ್ ವರ್ಮಾ ಅವರ 107 ರನ್​ಗಳ ಶತಕದ ಇನ್ನಿಂಗ್ಸ್ ಮತ್ತು ಅಭಿಷೇಕ್ ಶರ್ಮಾ ಅವರ ಅರ್ಧಶತಕದ ಆಧಾರದ ಮೇಲೆ ದಕ್ಷಿಣ ಆಫ್ರಿಕಾ ತಂಡಕ್ಕೆ 220 ರನ್‌ಗಳ ಗುರಿಯನ್ನು ನೀಡಿದೆ. ದಕ್ಷಿಣ ಆಫ್ರಿಕಾ ಕೂಡ ಈ ಬೃಹತ್ ಗುರಿಯನ್ನು ಬೆನ್ನಟ್ಟಿದ್ದು, ವಿರಳಾತಿವಿರಳ ಘಟನೆಯಿಂದಾಗಿ ಉಭಯ ತಂಡಗಳ ನಡುವಿನ ಈ ಪಂದ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಕೀಟಗಳ ದಾಳಿ

ಹೌದು… ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕೀಟಗಳು (flying ants) ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ನಿಲ್ಲಿಸಬೇಕಾಗಿದೆ. ಮೈದಾನದಲ್ಲಿ ಸಾಕಷ್ಟು ಹಾರುವ ಕೀಟಗಳಿದ್ದು, ಇದರಿಂದ ಎರಡೂ ತಂಡಗಳ ಆಟಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಹಾರುವ ಕೀಟಗಳಿಂದ ಮೊದಲ ಓವರ್​ನಲ್ಲೇ ಅರ್ಷದೀಪ್ ಸಿಂಗ್ ಬೌಲಿಂಗ್ ಮಾಡಲು ಕಷ್ಟಪಡಬೇಕಾಯಿತು. ಆದಾಗ್ಯೂ ಎರಡನೇ ಓವರ್ ಆರಂಭವಾಗುವ ಮುನ್ನ ಈ ಹಾರುವ ಕೀಟಗಳು ವಿಪರೀತ ಹೆಚ್ಚಾದ ಕಾರಣ ಅಂಪೈರ್​ಗಳು ಆಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದಾರೆ. ಹೀಗಾಗಿ ಆಟಗಾರರೆಲ್ಲರು ಮೈದಾನದಿಂದ ನಿರ್ಗಮಿಸಿದ್ದಾರೆ.

ಭಾರತದ ಇನ್ನಿಂಗ್ಸ್ ಹೀಗಿತ್ತು

ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭದಲ್ಲೇ ಸಂಜು ಸ್ಯಾಮ್ಸನ್ ವಿಕೆಟ್ ಕಳೆದುಕೊಂಡಿತು. ಸ್ಯಾಮ್ಸನ್ ಸತತ ಎರಡನೇ ಪಂದ್ಯದಲ್ಲೂ ಖಾತೆ ತೆರೆಯದೆ ಔಟಾದರು. ಆದಾಗ್ಯೂ, ಅಭಿಷೇಕ್ ಮತ್ತು ತಿಲಕ್ ಇದಾದ ನಂತರ ಇನ್ನಿಂಗ್ಸ್ ಕೈಗೆತ್ತಿಕೊಂಡು ಎರಡನೇ ವಿಕೆಟ್‌ಗೆ 107 ರನ್‌ಗಳ ಜೊತೆಯಾಟ ನಡೆಸಿದರು. ಅರ್ಧಶತಕ ಗಳಿಸಿದ ನಂತರ ಅಭಿಷೇಕ್ 25 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು. ಅಭಿಷೇಕ್ ಔಟಾದ ನಂತರ, ತಿಲಕ್ ಇನ್ನಿಂಗ್ಸ್ ಮುಂದುವರಿಸಿ ಮೊದಲು ಅರ್ಧಶತಕ ಗಳಿಸಿ ನಂತರ ಶತಕ ಗಳಿಸುವಲ್ಲಿಯೂ ಯಶಸ್ವಿಯಾದರು.

ತಿಲಕ್ 56 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ 7 ಸಿಕ್ಸರ್‌ಗಳ ನೆರವಿನಿಂದ 107 ರನ್ ಗಳಿಸಿ ಅಜೇಯರಾಗಿ ಪೆವಿಲಿಯನ್‌ಗೆ ಮರಳಿದರು. ಭಾರತದ ಪರ ನಾಯಕ ಸೂರ್ಯಕುಮಾರ್ ಯಾದವ್ ಒಂದು ರನ್, ಹಾರ್ದಿಕ್ ಪಾಂಡ್ಯ 18 ರನ್, ರಿಂಕು ಸಿಂಗ್ 8 ರನ್ ಮತ್ತು ರಮಣದೀಪ್ ಸಿಂಗ್ 15 ರನ್ ಕೊಡುಗೆ ನೀಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:18 pm, Wed, 13 November 24