
ಚಾಂಪಿಯನ್ಸ್ ಟ್ರೋಫಿಗೆ ಇಂದಿನಿಂದ ಅದ್ಧೂರಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಆದರೆ ಈ ಪಂದ್ಯಕ್ಕೂ ಮುನ್ನ ಎದ್ದಿದ್ದ ವಿವಾದಕ್ಕೆ ತೆರೆ ಎಳೆಯುವ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿಶ್ವ ಕ್ರಿಕೆಟ್ ಮುಂದೆ ಮುಜುಗರಕ್ಕೀಡಾಗುವುದರಿಂದ ಪಾರಾಗಿದೆ. ವಾಸ್ತವವಾಗಿ ಈ ಐಸಿಸಿ ಟೂರ್ನಿಗೆ ಆತಿಥ್ಯ ನೀಡುತ್ತಿರುವ ಕರಾಚಿ ಮತ್ತು ಲಾಹೋರ್ ಕ್ರೀಡಾಂಗಣಗಳಲ್ಲಿ ಪಿಸಿಬಿ 7 ತಂಡಗಳ ಧ್ವಜಗಳನ್ನು ಹಾರಿಸಿತ್ತು. ಆದರೆ ಇದರಲ್ಲಿ ಭಾರತದ ಧ್ವಜವನ್ನು ಹಾರಿಸಿರಲಿಲ್ಲ. ಇದರಿಂದ ಪಂದ್ಯಾವಳಿ ಆರಂಭಕ್ಕೂ ಮುನ್ನವೇ ವಿವಾದ ಎದ್ದಿತ್ತು. ಆದರೆ ಈಗ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ.
ಮೇಲೆ ಹೇಳಿದಂತೆ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು ಹಾರಿಸದ ಪಿಸಿಬಿ ನಡೆಗೆ ಭಾರತೀಯರು ಆಕ್ರೋಶ ಹೊರಹಾಕಿದ್ದರು. ಇದಾದ ನಂತರ ಪಿಸಿಬಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಟೀಕಿಸಲಾಗಿತ್ತು. ಭಾರತ ತಂಡವು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಆಡುತ್ತಿಲ್ಲವಾದ್ದರಿಂದ ಪಿಸಿಬಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಲಾಗಿತ್ತು. ಆದರೆ ಈಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
The Indian flag has been placed at the National Bank Stadium, Karachi ahead of the #ChampionsTrophy2025 #Cricket | #Pakistan | #Karachi | #India pic.twitter.com/hmfszXaulW
— Khel Shel (@khelshel) February 19, 2025
ಇದೀಗ ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು ಹಾರಿಸಲಾಗಿದೆಯಾದರೂ, ಈ ಮೊದಲು ಕರಾಚಿಯಲ್ಲಿ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಲಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿತ್ತು.
ವಾಸ್ತವವಾಗಿ ಈ ಹಿಂದೆ ಗಡಾಫಿ ಕ್ರೀಡಾಂಗಣದಲ್ಲಿ ಭಾರತದ ಧ್ವಜ ಹಾರಿಸದಿರುವ ಬಗ್ಗೆ ಗದ್ದಲ ಉಂಟಾದಾಗ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಸ್ಪಷ್ಟೀಕರಣವನ್ನು ನೀಡಿತ್ತು. ಇದರ ಹಿಂದಿನ ಕಾರಣವನ್ನು ವಿವರಿಸಿದ ಪಾಕ್ ಮಾಧ್ಯಮ, ‘2025 ರ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳಲ್ಲಿ ಕೇವಲ ನಾಲ್ಕು ಧ್ವಜಗಳು ಮಾತ್ರ ಹಾರಿಸಬೇಕು ಎಂದು ಐಸಿಸಿ ಸೂಚಿಸಿತ್ತು. ಈ ನಾಲ್ಕು ಧ್ವಜಗಳಲ್ಲಿ ಒಂದು ಐಸಿಸಿಯದ್ದು, ಇನ್ನೊಂದು ಆತಿಥೇಯ ದೇಶದ್ದು ಹಾಗೂ ಉಳಿದ ಎರಡು ಧ್ವಜಗಳು ಯಾವ ತಂಡಗಳ ನಡುವೆ ಪಂದ್ಯ ನಡೆಯುತ್ತಿರುತ್ತದೊ ಆ ದೇಶಗಳದ್ದು ಎಂದು ಹೇಳಿಕೊಂಡಿತ್ತು. ಆದರೆ ಪಿಸಿಬಿಯ ಈ ಕಳಪೆ ವಿವರಣೆಯು ಇನ್ನಷ್ಟು ಗದ್ದಲವನ್ನು ಸೃಷ್ಟಿಸಿತ್ತು. ಏಕೆಂದರೆ ಕ್ರೀಡಾಂಗಣದಲ್ಲಿ 4 ಕ್ಕೂ ಹೆಚ್ಚು ಧ್ವಜಗಳನ್ನು ಹಾರಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ.
No Indian flag in Karachi: As only the Indian team faced security issues in Pakistan and refused to play Champions Trophy matches in Pakistan, the PCB removed the Indian flag from the Karachi stadium while keeping the flags of the other guest playing nations.
– Absolute Cinema,… pic.twitter.com/2zmcATn7iQ
— Nawaz 🇵🇰 (@Rnawaz31888) February 16, 2025
ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿತ್ತು. ಇದಾದ ನಂತರ ಐಸಿಸಿ, ಟೀಂ ಇಂಡಿಯಾದ ಎಲ್ಲಾ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಿತು. ಈ ಟೂರ್ನಿಯಲ್ಲಿ ಭಾರತ ತಂಡ ಫೆಬ್ರವರಿ 20 ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯ ಬಾಂಗ್ಲಾದೇಶ ವಿರುದ್ಧ ನಡೆಯಲಿದ್ದು ಇದರ ನಂತರ, ಭಾರತ ತಂಡವು ಫೆಬ್ರವರಿ 23 ರಂದು ಪಾಕಿಸ್ತಾನವನ್ನು ಎದುರಿಸಲಿದೆ. ಬಳಿಕ ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ