
ಪಾಕಿಸ್ತಾನ ಹಾಗೂ ದುಬೈನ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ 8 ತಂಡಗಳು ಭಾಗವಹಿಸುತ್ತಿರುವುದು ನಿಮಗೆಲ್ಲ ಗೊತ್ತಿರುವ ಸಂಗತಿಯೆ. ಈ 8 ತಂಡಗಳನ್ನು ತಲಾ 4 ತಂಡಗಳಾಗಿ ವಿಂಗಡಿಸಿ 2 ಗುಂಪುಗಳನ್ನಾಗಿ ಮಾಡಲಾಗಿದೆ. ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್, ಬಾಂಗ್ಲಾದೇಶ ತಂಡಗಳಿದ್ದರೆ, ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ತಂಡಗಳಿವೆ. ಎ ಗುಂಪಿನಲ್ಲಿ ಈಗಾಗಲೇ ಎಲ್ಲಾ ತಂಡಗಳು ತಲಾ ಎರಡೆರಡು ಪಂದ್ಯಗಳನ್ನಾಡುವ ಮೂಲಕ ಸೆಮಿಫೈನಲ್ ಲೆಕ್ಕಾಚಾರವನ್ನು ಅಂತಿಮಗೊಳಿಸಿಕೊಂಡಿವೆ. ಆದರೆ ಬಿ ಗುಂಪಿನಲ್ಲಿ ಮಾತ್ರ ಇದುವರೆಗೆ ಯಾವ ತಂಡವೂ ಸೆಮಿಫೈನಲ್ಗೇರಿಲ್ಲ. ಹೀಗಾಗಿ ಬಿ ಗುಂಪಿನಲ್ಲಿ ಯಾವ ತಂಡ ಸೆಮೀಸ್ಗೇರುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
ಸೆಮಿಫೈನಲ್ ಸುತ್ತಿಗೆ ಪ್ರಬಲ ಸ್ಪರ್ಧಿಗಳಾಗಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಚಾಂಪಿಯನ್ಸ್ ಟ್ರೋಫಿ 2025 ರ ಏಳನೇ ಪಂದ್ಯ ಇಂದು ರಾವಲ್ಪಿಂಡಿ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ನಿಗದಿಯಂತೆ ಈ ಎರಡು ತಂಡಗಳ ಪಂದ್ಯದ ಟಾಸ್ 2 ಗಂಟೆಗೆ ನಡೆದು, ಆಟ 2:30 ಕ್ಕೆ ಆರಂಭವಾಗಬೇಕಿತ್ತು. ಆದರೆ ರಾವಲ್ಪಿಂಡಿಯಲ್ಲಿ ಮಳೆಯಾಗುತ್ತಿರುವ ಕಾರಣ ಇದುವರೆಗೂ ಟಾಸ್ ಕೂಡ ನಡೆಸಲಾಗಿಲ್ಲ. ಇದು ಉಭಯ ತಂಡಗಳಲ್ಲಿ ಆತಂಕ ಮನೆ ಮಾಡುವಂತೆ ಮಾಡಿದೆ.
Rain has delayed the toss in the upcoming #AUSvSA clash in Rawalpindi 🌧#ChampionsTrophy
Live updates ➡ https://t.co/yT4F7I2FDh pic.twitter.com/QOpDWQ3W12
— ICC (@ICC) February 25, 2025
ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಎರಡೂ ತಂಡಗಳು ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಈ ಸೂಪರ್‌ಹಿಟ್ ಪಂದ್ಯ ಆರಂಭವಾಗುವ ಮುನ್ನ, ಮಳೆಯಿಂದಾಗಿ ಟಾಸ್ ನಡೆಯಲು ಸಾಧ್ಯವಾಗದ ಕಾರಣ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಈ ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಗೆದ್ದು, ಈ ಪಂದ್ಯಕ್ಕೆ ಕಾಲಿಡುತ್ತಿವೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲುವ ತಂಡಕ್ಕೆ ಸೆಮಿಫೈನಲ್ ಟಿಕೆಟ್ ಸಿಗಲಿದೆ. ಆದರೆ ಮಳೆಯಿಂದಾಗಿ ಪಂದ್ಯ ಇನ್ನು ಆರಂಭವಾಗಿಲ್ಲ.
ಒಂದು ವೇಳೆ ಮಳೆಯಿಂದ ಪಂದ್ಯ ನಡೆಯದೆ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ಸಿಗಲಿದೆ. ಇದು ಎರಡೂ ತಂಡಗಳ ಸೆಮಿಫೈನಲ್ ಲೆಕ್ಕಾಚಾರವನ್ನು ಹಾಳು ಮಾಡಲಿದೆ. ಈ ಎರಡೂ ತಂಡಗಳು ಸೆಮೀಸ್ಗೇರಬೇಕೆಂದರೆ ಮುಂದಿನ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿರುತ್ತವೆ. ಹೀಗಾಗಿ ಈ ಪಂದ್ಯ ನಡೆಯಲಿ ಎಂಬುದು ಉಭಯ ತಂಡಗಳ ಬೇಡಿಕೆಯಾಗಿದೆ.
ಆಸ್ಟ್ರೇಲಿಯಾ: ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ತನ್ವೀರ್ ಸಂಘ, ಮ್ಯಾಥ್ಯೂ ಶಾರ್ಟ್, ಆಡಮ್ ಜಂಪಾ.
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ಟೋನಿ ಡಿ ಜೋರ್ಜಿ, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಲುಂಗಿ ಎನ್‌ಗಿಡಿ, ಕಗಿಸೊ ರಬಾಡ, ರಯಾನ್ ರಿಕಲ್ಟನ್, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್, ರಾಸ್ಸಿ ವ್ಯಾನ್ ಡೆರ್ ಡಸೆನ್, ಕಾರ್ಬಿನ್ ಬಾಷ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Tue, 25 February 25