Cheteshwar Pujara: 103 ಎಸೆತಗಳನ್ನು ಎದುರಿಸಿ 3 ಫೋರ್ ಬಾರಿಸಿದ ಚೇತೇಶ್ವರ ಪೂಜಾರ

| Updated By: ಝಾಹಿರ್ ಯೂಸುಫ್

Updated on: Jul 05, 2023 | 10:35 PM

Duleep Trophy 2023: ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಪಶ್ಚಿಮ ವಲಯ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ ರನ್​ಗಳಿಸಲು ಪರದಾಡಿದ್ದಾರೆ.

Cheteshwar Pujara: 103 ಎಸೆತಗಳನ್ನು ಎದುರಿಸಿ 3 ಫೋರ್ ಬಾರಿಸಿದ ಚೇತೇಶ್ವರ ಪೂಜಾರ
Cheteshwar Pujara
Follow us on

Duleep Trophy 2023: ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್​ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಮೊದಲ ಸೆಮಿಫೈನಲ್​ನಲ್ಲಿ ಚೇತೇಶ್ವರ ಪೂಜಾರ (Cheteshwar Pujara) ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಕೇಂದ್ರ ವಲಯ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಹಾಗೂ ಪ್ರಿಯಾಂಕ್ ಪಾಂಚಾಲ್ ಮೊದಲ ವಿಕೆಟ್​ಗೆ 43 ರನ್​ಗಳ ಜೊತೆಯಾಟವಾಡಿದ್ದರು.

ಈ ಹಂತದಲ್ಲಿ ಪೃಥ್ವಿ ಶಾ (26) ಔಟಾದರೆ, ಇದರ ಬೆನ್ನಲ್ಲೇ ಪ್ರಿಯಾಂಕ್ ಪಾಂಚಾಲ್ (13) ಕೂಡ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟಾರ್ ಆಟಗಾರ ಚೇತೇಶ್ವರ ಪೂಜಾರ ರನ್​ಗಳಿಸಲು ಪರದಾಡಿದರು. ಯುವ ಬೌಲರ್​ಗಳ ಮುಂದೆ ಪೂಜಾರ ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದರು.

ಒಂದೆಡೆ ಪೂಜಾರಾ ಡಿಫೆನ್ಸ್ ಆಟದತ್ತ ಗಮನಹರಿಸಿದ್ದರೆ, ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ (7), ಸರ್ಫರಾಝ್ ಖಾನ್ (0), ಹೆಟ್ ಪಟೇಲ್ (5) ವಿಕೆಟ್ ಒಪ್ಪಿಸಿದ್ದರು. ಇದಾಗ್ಯೂ ಬೌಲರ್​ಗಳ ಪರಾಕ್ರಮದ ಮುಂದೆ ತಮ್ಮ ಅನುಭವವನ್ನು ಧಾರೆಯೆರೆಯುವಲ್ಲಿ ಪೂಜಾರ ವಿಫಲರಾದರು. ಪರಿಣಾಮ ಕೇಂದ್ರ ವಲಯ ತಂಡದ ಬೌಲರ್​ಗಳು ಮೇಲುಗೈ ಸಾಧಿಸಿದರು.

ಇತ್ತ 103 ಎಸೆತಗಳನ್ನು ಎದುರಿಸಿದರೂ ಚೇತೇಶ್ವರ ಪೂಜಾರ ಬ್ಯಾಟ್​ನಿಂದ ಮೂಡಿಬಂದಿದ್ದು ಕೇವಲ 3 ಫೋರ್​ಗಳು ಮಾತ್ರ. ಅಲ್ಲದೆ 28 ರನ್​ಗಳಿಸಿ ಶಿವಂ ಮಾವಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಅತಿತ್ ಶೇಠ್ ಬಿರುಸಿನ ಬ್ಯಾಟಿಂಗ್​ ಪ್ರದರ್ಶಿಸಿದರು. 129 ಎಸೆತಗಳನ್ನು ಎದುರಿಸಿದ ಅತಿತ್ 1 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ನೊಂದಿಗೆ 74 ರನ್​ಗಳಿಸಿ ಔಟಾದರು.

ಅಂತಿಮವಾಗಿ ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಪಶ್ಚಿಮ ವಲಯ ತಂಡವು 8 ವಿಕೆಟ್ ಕಳೆದುಕೊಂಡು 216 ರನ್​ಗಳಿಸಿದೆ. ಕ್ರೀಸ್​ನಲ್ಲಿ ಚಿಂತನ್ ಗಜ (13) ಹಾಗೂ ಅರ್ಝಾನ್ ನಾಗ್ವಾಸ್ವಾಲ್ಲಾ (5) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕೇಂದ್ರ ವಲಯ ತಂಡದ ಪರ ನಾಯಕ ಶಿವಂ ಮಾವಿ 43 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಅವೇಶ್ ಖಾನ್, ಯಶ್ ಠಾಕೂರ್, ಸೌರಭ್ ಕುಮಾರ್ ಹಾಗೂ ಸರನ್ಶ್ ಜೈನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

ಪಶ್ಚಿಮ ವಲಯ ಪ್ಲೇಯಿಂಗ್ 11: ಪೃಥ್ವಿ ಶಾ , ಪ್ರಿಯಾಂಕ್ ಪಾಂಚಾಲ್ (ನಾಯಕ) , ಅರ್ಝಾನ್ ನಾಗವಾಸ್ವಾಲ್ಲಾ , ಚಿಂತನ್ ಗಜ , ಹೆತ್ ಪಟೇಲ್ (ವಿಕೆಟ್ ಕೀಪರ್) , ಅತಿತ್ ಶೇಠ್, ಸರ್ಫರಾಜ್ ಖಾನ್ , ಯುವರಾಜ್ ಸಿಂಗ್ ದೋಡಿಯಾ , ಸೂರ್ಯಕುಮಾರ್ ಯಾದವ್ , ಚೇತೇಶ್ವರ ಪೂಜಾರ , ಧರ್ಮೇಂದ್ರ ಸಿನ್ಹ್ ಜಡೇಜಾ.

ಕೇಂದ್ರ ವಲಯ ಪ್ಲೇಯಿಂಗ್ 11: ವಿವೇಕ್ ಸಿಂಗ್ , ಹಿಮಾಂಶು ಮಂತ್ರಿ , ಅಮನದೀಪ್ ಖರೆ , ಧ್ರುವ ಜುರೆಲ್ , ರಿಂಕು ಸಿಂಗ್ , ಉಪೇಂದ್ರ ಯಾದವ್ (ವಿಕೆಟ್ ಕೀಪರ್) , ಸರನ್ಶ್ ಜೈನ್ , ಸೌರಭ್ ಕುಮಾರ್ , ಶಿವಂ ಮಾವಿ (ನಾಯಕ) , ಅವೇಶ್ ಖಾನ್ , ಯಶ್ ಠಾಕೂರ್.