ICC World Cup Qualifiers 2023: ಶತಕ ಸಿಡಿಸಿದ ಕಿಂಗ್: ವೆಸ್ಟ್ ಇಂಡೀಸ್ಗೆ ಭರ್ಜರಿ ಜಯ
ODI World Cup 2023: ಈ ಬಾರಿಯ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಸತತ 3 ಪಂದ್ಯಗಳಲ್ಲಿ ಸೋಲನುಭವಿಸಿದೆ.
ICC World Cup Qualifiers 2023: ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ (West Indies) ತಂಡವು ಭರ್ಜರಿ ಜಯ ಸಾಧಿಸಿದೆ. ಒಮಾನ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ನಾಯಕ ಶಾಯ್ ಹೋಪ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಒಮಾನ್ ತಂಡಕ್ಕೆ ಕಶ್ಯಪ್ ಪ್ರಜಾಪತಿ (31) ಉತ್ತಮ ಆರಂಭ ಒದಗಿಸಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದಿರಲಿಲ್ಲ.
ದಿಢೀರ್ ಕುಸಿತಕ್ಕೆ ಒಳಗಾಗಿದ್ದ ಒಮಾನ್ ತಂಡಕ್ಕೆ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶೊಯೇಬ್ ಖಾನ್ ಆಸರೆಯಾದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಶೊಯೇಬ್ ವಿಂಡೀಸ್ ಬೌಲರ್ಗಳನ್ನು ದಿಟ್ಟತನದಿಂದಲೇ ಎದುರಿಸಿದರು. ಪರಿಣಾಮ 1 ಸಿಕ್ಸ್ ಹಾಗೂ 5 ಫೋರ್ನೊಂದಿಗೆ 54 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಇನ್ನು 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸೂರಜ್ ಕುಮಾರ್ ಅಜೇಯ 53 ರನ್ ಬಾರಿಸಿದರು. ಪರಿಣಾಮ ನಿಗದಿತ 50 ಓವರ್ಗಳಲ್ಲಿ ಒಮಾನ್ ತಂಡವು 9 ವಿಕೆಟ್ ಕಳೆದುಕೊಂಡು 221 ರನ್ ಕಲೆಹಾಕಿತು.
222 ರನ್ಗಳ ಸುಲಭ ಗುರಿ ಪಡೆದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಟಗಾರ ಬ್ರಾಂಡನ್ ಕಿಂಗ್ ಸ್ಪೋಟಕ ಆರಂಭ ಒದಗಿಸಿದ್ದರು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕಿಂಗ್ ಮೈದಾನದ ಮೂಲೆ ಮೂಲೆಗೆ ಫೋರ್ ಬಾರಿಸಿದರು.
ಅಲ್ಲದೆ 104 ಎಸೆತಗಳಲ್ಲಿ 15 ಫೋರ್ಗಳೊಂದಿಗೆ ಬ್ರಾಂಡನ್ ಕಿಂಗ್ ಭರ್ಜರಿ ಶತಕ ಸಿಡಿಸಿದರು. ಇನ್ನು ನಾಯಕ ಶಾಯ್ ಹೋಪ್ ಅಜೇಯ 63 ರನ್ ಬಾರಿಸುವ ಮೂಲಕ 39.4 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿಸಿದರು. ಇದರೊಂದಿಗೆ ವೆಸ್ಟ್ ಇಂಡೀಸ್ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಏಕದಿನ ವಿಶ್ವಕಪ್ಗಿಲ್ಲ ವೆಸ್ಟ್ ಇಂಡೀಸ್:
ಈ ಬಾರಿಯ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಸತತ 3 ಪಂದ್ಯಗಳಲ್ಲಿ ಸೋಲನುಭವಿಸಿದೆ. ಈ ಸೋಲುಗಳೊಂದಿಗೆ ವೆಸ್ಟ್ ಇಂಡೀಸ್ ತಂಡವು ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಮೊದಲ ಬಾರಿಗೆ ಅರ್ಹತಾ ಸುತ್ತಿನಿಂದಲೇ ಹೊರಬಿದ್ದಂತಾಗಿದೆ. ಹೀಗಾಗಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ತಂಡ ಕಾಣಿಸಿಕೊಳ್ಳುವುದಿಲ್ಲ.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ಗೆ ಆಯ್ಕೆಯಾಗುವ 10ನೇ ತಂಡ ಯಾವುದು?
ಇನ್ನು ಏಕದಿನ ವಿಶ್ವಕಪ್ಗೆ ಅರ್ಹತಾ ಸುತ್ತಿನ ಮೂಲಕ ಶ್ರೀಲಂಕಾ ತಂಡವು 9ನೇ ತಂಡವಾಗಿ ಎಂಟ್ರಿ ಕೊಟ್ಟಿದೆ. ಇನ್ನು 10ನೇ ತಂಡವಾಗಿ ಅರ್ಹತೆ ಪಡೆಯಲು ಸ್ಕಾಟ್ಲ್ಯಾಂಡ್ ಹಾಗೂ ನೆದರ್ಲ್ಯಾಂಡ್ಸ್ ನಡುವೆ ಪೈಪೋಟಿ ಇದ್ದು, ಈ ಪಂದ್ಯದಲ್ಲಿ ಸ್ಕಾಟ್ಲ್ಯಾಂಡ್ ಗೆದ್ದರೆ ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ನೆದರ್ಲ್ಯಾಂಡ್ಸ್ ತಂಡ ಜಯ ಸಾಧಿಸಿದರೆ, ಸ್ಕಾಟ್ಲ್ಯಾಂಡ್ಗಿಂತ ಉತ್ತಮ ನೆಟ್ ರನ್ ರೇಟ್ ಹೊಂದಿದ್ದರೆ ಮಾತ್ರ ಅರ್ಹತೆ ಪಡೆಯಲಿದೆ.