ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಈ ಸರಣಿಗೆ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಆಯ್ಕೆಯಾಗಿಲ್ಲ. ಆದರೆ ಇದೀಗ ಇದೇ ಸರಣಿಯ ಮೂಲಕ ಪೂಜಾರ ಹೊಸ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಅದು ಕೂಡ ಕಾಮೆಂಟೇಟರ್ ಆಗಿ ಎಂಬುದು ವಿಶೇಷ.
ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಚೇತೇಶ್ವರ ಪೂಜಾರ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಲ್ಲಿ ಚೇತೇಶ್ವರ ಪೂಜಾರ ಹಿಂದಿ ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯೊಂದಿಗೆ ಪೂಜಾರ ಕಾಮೆಂಟೇಟರ್ ಆಗಿ ಹೊಸ ಇನಿಂಗ್ಸ್ ಆರಂಭಿಸಲಿದ್ದಾರೆ.
2018-19 ರಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ ಭರ್ಜರಿ ಪ್ರದರ್ಶನ ನೀಡಿದ್ದರು. ಈ ವೇಳೆ ಏಳು ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದ ಪೂಜಾರ 74.42 ಸರಾಸರಿಯಲ್ಲಿ 521 ರನ್ಗಳಿಸಿದ್ದರು. ಇದರಲ್ಲಿ ಮೂರು ಶತಕ ಮತ್ತು ಒಂದು ಅರ್ಧ ಶತಕ ಸೇರಿದೆ. ಚೇತೇಶ್ವರ ಪೂಜಾರ ಅವರ ಈ ಭರ್ಜರಿ ಪ್ರದರ್ಶನದ ಫಲವಾಗಿ ಟೀಮ್ ಇಂಡಿಯಾ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.
ಇನ್ನು 2020-21ರ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಚೇತೇಶ್ವರ ಪೂಜಾರ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. 8 ಇನಿಂಗ್ಸ್ ಆಡಿದ್ದ ಪೂಜಾರ ಮೂರು ಅರ್ಧಶತಕಗಳೊಂದಿಗೆ ಒಟ್ಟು 271 ರನ್ ಕಲೆಹಾಕಿದ್ದರು. ಈ ಮೂಲಕ ಭಾರತ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನೂ ಓದಿ: IPL 2025: RCB ಟಾರ್ಗೆಟ್ ಲಿಸ್ಟ್ನಲ್ಲಿ ಇಬ್ಬರು ಮಾಜಿ ಆಟಗಾರರು
ಇದಾದ ಬಳಿಕ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದ ಚೇತೇಶ್ವರ ಪೂಜಾರ ದೇಶೀಯ ಅಂಗಳದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕಂಬ್ಯಾಕ್ ಪ್ರಯತ್ನ ಮಾಡಿದ್ದರು. ಆದರೆ ಟೀಮ್ ಇಂಡಿಯಾದ ಭವಿಷ್ಯದ ದೃಷ್ಟಿಯಿಂದ 36 ವರ್ಷದ ಚೇತೇಶ್ವರ ಪೂಜಾರ ಅವರನ್ನು ತಂಡದ ಆಯ್ಕೆಯಿಂದ ಹೊರಗಿಡಲಾಗಿದೆ.
ಅದರಂತೆ ಇದೀಗ ಭಾರತ ತಂಡದಲ್ಲಿ ಯುವ ಆಟಗಾರರಾಗಿ ಸರ್ಫರಾಝ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ಧ್ರುವ್ ಜುರೇಲ್, ಹರ್ಷಿತ್ ರಾಣಾ ಕಾಣಿಸಿಕೊಂಡಿದ್ದಾರೆ.
ತಂಡಗಳು | ದಿನಾಂಕ | ಸಮಯ | ಸ್ಥಳ |
1ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 22 ನವೆಂಬರ್ 2024 | 7:50 AM | ಪರ್ತ್ |
2ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ (D/N) | ಶುಕ್ರವಾರ, 6 ಡಿಸೆಂಬರ್ 2024 | 9:30 AM | ಅಡಿಲೇಡ್ |
3ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶನಿವಾರ, 14 ಡಿಸೆಂಬರ್ 2024 | 5:50 AM | ಬ್ರಿಸ್ಬೇನ್ |
4ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಗುರುವಾರ, 26 ಡಿಸೆಂಬರ್ 2024 | 5 AM | ಮೆಲ್ಬೋರ್ನ್ |
5ನೇ ಟೆಸ್ಟ್, ಆಸ್ಟ್ರೇಲಿಯಾ vs ಭಾರತ | ಶುಕ್ರವಾರ, 3 ಜನವರಿ 2025 | 5 AM | ಸಿಡ್ನಿ |