IND vs SL: ಕೊಲಂಬೊ ಟೆಸ್ಟ್; ಮಳೆಯಿಂದ ಆಟ ಸ್ಥಗಿತ, ಶತಕದ ಸನಿದಲ್ಲಿ ಜುರೇಲ್

India Dominates Day 2 of Colombo Test: ಕೊಲಂಬೊ ಟೆಸ್ಟ್‌ನ ಎರಡನೇ ದಿನ ಭಾರತ ಉತ್ತಮ ಪ್ರದರ್ಶನ ನೀಡಿದೆ. ಪಂತ್ ಮತ್ತು ಜುರೇಲ್ ಶತಕದ ಜೊತೆಯಾಟ ನಿರ್ಮಿಸಿ ತಂಡವನ್ನು 475/8ಕ್ಕೆ ಕೊಂಡೊಯ್ದರು. ಪಂತ್ ಅರ್ಧಶತಕ ಗಳಿಸಿದರೆ, ಜುರೇಲ್ ಶತಕದ ಅಂಚಿನಲ್ಲಿದ್ದಾರೆ. ದುರದೃಷ್ಟವಶಾತ್, ಮಳೆಯಿಂದಾಗಿ ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಭಾರತದ ಬ್ಯಾಟಿಂಗ್ ಪ್ರಾಬಲ್ಯ ಮುಂದುವರೆಯಿತು.

IND vs SL: ಕೊಲಂಬೊ ಟೆಸ್ಟ್; ಮಳೆಯಿಂದ ಆಟ ಸ್ಥಗಿತ, ಶತಕದ ಸನಿದಲ್ಲಿ ಜುರೇಲ್
Ind Vs Sl

Updated on: Aug 24, 2026 | 3:06 PM

ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ (Team India) ಎರಡನೇ ದಿನವೂ ಅಮೋಘ ಪ್ರದರ್ಶನ ನೀಡಿದೆ. ಮೊದಲ ದಿನದಂದು 5 ವಿಕೆಟ್‌ಗಳನ್ನು ಕಳೆದುಕೊಂಡು 300 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಎರಡನೇ ದಿನದಂದು ಇಲ್ಲಿಂದ ತನ್ನ ಇನ್ನಿಂಗ್ಸ್ ಮುಂದುವರೆಸಿತು. ಮೊದಲ ಸೆಷನ್​ ಆರಂಭದಲ್ಲೇ ವಿಕೆಟ್ ಪತನವಾದರೂ ಆ ಬಳಿಕ ಜೊತೆಯಾದ ಪಂತ್ (Rishabh Pant) ಹಾಗೂ ಜುರೇಲ್ (Dhruv Jurel) ಶತಕದ ಜೊತೆಯಾಟ ನಿರ್ಮಿಸಿದರು. ಹೀಗಾಗಿ ತಂಡದ ಮೊತ್ತ 400 ರನ್​ಗಳ ಗಡಿ ದಾಟಿತು. ಪಂತ್ ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದರೆ, ಜುರೇಲ್ ಮಾತ್ರ ಶತಕದ ಸಮೀಪಕ್ಕೆ ಬಂದಿದ್ದಾರೆ. ಆದರೆ ಜುರೇಲ್ ಶತಕಕ್ಕೆ ಮಳೆ ಅಡ್ಡಿಪಡಿಸಿದೆ. ಹೀಗಾಗಿ ಆಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಳೆಯಿಂದ ಆಟ ನಿಂತಾಗ ಟೀಂ ಇಂಡಿಯಾ 8 ವಿಕೆಟ್‌ಗಳನ್ನು ಕಳೆದುಕೊಂಡು 475 ರನ್ ಕಲೆಹಾಕಿದೆ.

ಪಂತ್- ಜುರೇಲ್ ಜೊತೆಯಾಟ

ಎರಡನೇ ದಿನದಾಟದ ಮೊದಲ ಸೆಷನ್​ನ ಆರಂಭದಲ್ಲೇ ಯುವ ಆಟಗಾರ ಸರಾಂಶ್ ಜೈನ್ 6 ರನ್​ಗಳಿಗೆ ಔಟಾದರು. ಹೀಗಾಗಿ ಗಾಯದಿಂದಾಗಿ ಮೊದಲ ದಿನ ಅರ್ಧಕ್ಕೆ ಬ್ಯಾಟಿಂಗ್‌ ನಿಲ್ಲಿಸಿದ್ದ ರಿಷಭ್ ಪಂತ್ ಬ್ಯಾಟಿಂಗ್​ಗೆ ಬಂದರು. ಪಂತ್​ಗೆ ಸಾಥ್ ನೀಡಿದ ಜುರೇಲ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇಬ್ಬರು ಅರ್ಧಶತಕ ಬಾರಿಸುವುದರೊಂದಿಗೆ ತಂಡವನ್ನು 400 ರನ್​ಗಳ ಗಡಿ ದಾಟಿಸಿದರು. ಹೀಗಾಗಿ ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 6 ವಿಕೆಟ್‌ ಕಳೆದುಕೊಂಡು 419 ರನ್ ಕಲೆಹಾಕಿತು. ರಿಷಭ್ ಪಂತ್ 63 ರನ್‌ ಮತ್ತು ಧ್ರುವ್ ಜುರೆಲ್ 59 ರನ್‌ ಬಾರಿಸಿ ಅಜೇಯರಾಗಿ ಉಳಿದಿದ್ದಲ್ಲದೆ 112 ರನ್‌ಗಳ ಜೊತೆಯಾಟವನ್ನು ನಿರ್ಮಿಸಿದ್ದರು.

IND vs SL: ಐದು ಟೆಸ್ಟ್ ಅಥವಾ ಅಜೀವ ನಿಷೇಧ..! ಸಂಕಷ್ಟದಲ್ಲಿ ಜೈಸ್ವಾಲ್

63 ರನ್ ಬಾರಿಸಿ ಪಂತ್ ಔಟ್

ಎರಡನೇ ಸೆಷನ್ ಆರಂಭದಲ್ಲೇ ತಂಡ ತನ್ನ 7ನೇ ವಿಕೆಟ್ ಕಳೆದುಕೊಂಡಿತು. ರಿಷಭ್ ಪಂತ್ ಮೊದಲ ಎಸೆತದಲ್ಲೇ ಔಟಾದರು. ಮಾನವ್ ಸುತಾರ್ ಕೂಡ 18 ರನ್​ಗಳ ಕಾಣಿಕೆ ನೀಡಿ ಪೆವಿಲಿಯನ್ ಸೇರಿಕೊಂಡರು. ಆದಾಗ್ಯೂ ಒಂದು ತುದಿಯಲ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟುತ್ತಿದ್ದ ಜುರೇಲ್​ಗೆ ಸಿರಾಜ್ ಸಾಥ್ ನೀಡಿದರು. ಮಳೆಯಿಂದ ಪಂದ್ಯ ಸ್ಥಗಿತಗೊಳ್ಳುವುದಕ್ಕೂ ಮುನ್ನ ಸಿರಾಜ್ 17 ಎಸೆತಗಳನ್ನು ಎದುರಿಸಿ ಖಾತೆ ಕೂಡ ತೆರೆದಿರಲಿಲ್ಲ. ಇತ್ತ ಜುರೇಲ್ 155 ಎಸೆತಗಳಲ್ಲಿ 95 ರನ್ ಬಾರಿಸಿ ಶತಕದ ಸಮೀಪದಲ್ಲಿದ್ದಾರೆ. ಮಳೆಯಿಂದಾಗಿ ಅಂಪೈರ್​ಗಳು ಚಹಾ ವಿರಾಮವನ್ನು ಘೋಷಿಸಿದರು. ಹೀಗಾಗಿ ಎರಡನೇ ಸೆಷನ್​ ಬೇಗನೇ ಅಂತ್ಯವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:35 pm, Mon, 24 August 26

Loading...
Unable to load recommendations.
Follow Us