
ಮಧ್ಯಪ್ರದೇಶ ತಂಡವು ಅದ್ಭುತ ಪ್ರದರ್ಶನ ನೀಡುವ ಮೂಲಕ ಕೂಚ್ ಬೆಹಾರ್ ಟ್ರೋಫಿ (Cooch Behar Trophy) ಫೈನಲ್ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಲ್ಸಾದ್‌ನ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪ್ರಶಸ್ತಿ ಪಂದ್ಯದಲ್ಲಿ ಗುಜರಾತ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸುವಲ್ಲಿ ಮಧ್ಯಪ್ರದೇಶ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 216 ರನ್ ಕಲೆಹಾಕಿತು. ಉತ್ತರವಾಗಿ ಮಧ್ಯಪ್ರದೇಶ ತಂಡವು 178 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಇತ್ತ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಗುಜರಾತ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 133 ರನ್‌ಗಳಿಗೆ ಆಲೌಟ್ ಆಯಿತು. ಅಂತಿಮವಾಗಿ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ ತಂಡವು 4 ವಿಕೆಟ್‌ಗಳಿಗೆ 176 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಮಧ್ಯಪ್ರದೇಶದ ಗೆಲುವಿನ ನಾಯಕ ಆಲ್‌ರೌಂಡರ್ ಯಶವರ್ಧನ್ ಸಿಂಗ್ ಚೌಹಾಣ್, ಪಂದ್ಯದಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದರು.
ಯಶವರ್ಧನ್ ಸಿಂಗ್ ಚೌಹಾಣ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಲ್ಲದೇ, ಸರಣಿಶ್ರೇಷ್ಠ ಪ್ರಶಸ್ತಿಗೂ ಪಾತ್ರರಾದರು. ಯಶವರ್ಧನ್ ಎಂಟು ಪಂದ್ಯಗಳಲ್ಲಿ 57 ವಿಕೆಟ್‌ಗಳನ್ನು ಕಬಳಿಸಿದರು, ಇದರಲ್ಲಿ ಐದು ಐದು ವಿಕೆಟ್‌ಗಳ ಸಾಧನೆಯೂ ಸೇರಿದೆ. ಇದಲ್ಲದೆ, ಅವರು ಎಂಟು ಪಂದ್ಯಗಳಲ್ಲಿ 42.31 ಸರಾಸರಿಯಲ್ಲಿ 550 ರನ್ ಕೂಡ ಕಲೆಹಾಕಿದರು ಇದರಲ್ಲಿ ಎರಡು ಅರ್ಧಶತಕಗಳು ಮತ್ತು ಒಂದು ಶತಕವೂ ಸೇರಿದೆ.
ಯಶವರ್ಧನ್ ಸಿಂಗ್ ಚಂಬಲ್ ಮೂಲದವರಾಗಿದ್ದು, ಮಧ್ಯಪ್ರದೇಶದ ಮುಂದಿನ ಸೂಪರ್ ಸ್ಟಾರ್ ಎಂದು ಹೇಳಲಾಗುತ್ತಿದೆ. 2023 ರಲ್ಲಿ, ಅವರು 15 ವರ್ಷದೊಳಗಿನವರ ಪಂದ್ಯದಲ್ಲಿ 39 ಬೌಂಡರಿ ಮತ್ತು ಆರು ಸಿಕ್ಸರ್‌ಗಳ ಸಹಿತ ತ್ರಿಶತಕ ಬಾರಿಸಿದ್ದರು. ಇದಲ್ಲದೆ, 13 ನೇ ವಯಸ್ಸಿನಲ್ಲಿ, ಅವರು ಇಂದೋರ್ ವಿರುದ್ಧ 391 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಇದು ಮಾತ್ರವಲ್ಲದೆ 425 ರನ್‌ಗಳ ಇನ್ನಿಂಗ್ಸ್‌ಗಳನ್ನು ಸಹ ಆಡಿದ್ದಾರೆ.
Madhya Pradesh beat Gujarat by 6 wickets to clinch their maiden Under-19 Cooch Behar 🏆 title. The star of the tournament for Madhya Pradesh was Chambal boy Yashwardhan Chouhanz who took 57 wickets & scored 550 runs in the Championship 👏 👏 👏 pic.twitter.com/cWbgNsJzY8
— Gaurav Gupta (@toi_gauravG) January 19, 2026
ಗುಜರಾತ್‌ನ ಮಲಯ್ ಶಾ ಕೂಚ್ ಬೆಹಾರ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು, 716 ರನ್ ಕಲೆಹಾಕಿದ್ದಾರೆ. ಈ ಆಟಗಾರ ಮೂರು ಶತಕಗಳು ಮತ್ತು ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಉತ್ತರಾಖಂಡದ ಆದಿತ್ಯ ನೈಥಾನಿ ಕೂಚ್ ಬೆಹಾರ್ ಟ್ರೋಫಿಯಲ್ಲಿ ಆರು ಇನ್ನಿಂಗ್ಸ್‌ಗಳಲ್ಲಿ ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ