AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನಾಯು ಸೆಳೆತದಿಂದ ಕೈ ತಪ್ಪಿದ ಐತಿಹಾಸಿಕ ದಾಖಲೆ..!

India vs England 1st ODI: ಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 47.5 ಓವರ್​ಗಳಲ್ಲಿ 258 ರನ್​ಗಳಿಸಿ ಸರ್ವಪತನ ಕಂಡಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 45.2 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 262 ರನ್​ಗಳಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಸ್ನಾಯು ಸೆಳೆತದಿಂದ ಕೈ ತಪ್ಪಿದ ಐತಿಹಾಸಿಕ ದಾಖಲೆ..!
Shubman Gill Image Credit source: AFP
ಝಾಹಿರ್ ಯೂಸುಫ್
|

Updated on: Jul 15, 2026 | 8:33 AM

Share

ಮೊಹಮ್ಮದ್ ಅಝರುದ್ದೀನ್, ಸೌರವ್ ಗಂಗೂಲಿ, ಎಂ.ಎಸ್. ಧೋನಿ ಅವರಿಂದ ಹಿಡಿದು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾವರೆಗೆ ಭಾರತದ ಹಲವು ಶ್ರೇಷ್ಠ ನಾಯಕರು ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಬ್ಯಾಟ್ ಬೀಸಿದ್ದಾರೆ. ಆದರೆ ಇವರಾರೂ ಮಾಡಲಾಗದ ಒಂದು ವಿಶಿಷ್ಟ ಸಾಧನೆ ಬರೆಯುವ ಸುವರ್ಣ ಅವಕಾಶ ಭಾರತದ ಯುವ ನಾಯಕ ಶುಭ್​ಮನ್ ಗಿಲ್ ಅವರಿಗೆ ಒದಗಿಬಂದಿತ್ತು. ಆದರೆ ದುರದೃಷ್ಟವಶಾತ್, ಇತಿಹಾಸದ ಹೊಸ್ತಿಲಲ್ಲಿ ಗಿಲ್ ಅವರಿಗೆ ‘ಸ್ನಾಯು’ ಕೈ ಕೊಟ್ಟಿತು.

ಸ್ನಾಯು ಸೆಳೆತದಿಂದ ಕೈ ತಪ್ಪಿದ ದಾಖಲೆ!

ಇಂಗ್ಲೆಂಡ್ ನೀಡಿದ 259 ರನ್‌ಗಳ ಸವಾಲನ್ನು ಬೆನ್ನಟ್ಟಿದ ಭಾರತಕ್ಕೆ ಶುಭ್​ಮನ್ ಗಿಲ್ ಆಸರೆಯಾಗಿ ನಿಂತರು. ಇಂಗ್ಲೆಂಡ್ ಬೌಲರ್‌ಗಳ ಲೈನ್ ಮತ್ತು ಲೆಂತ್ ಅರಿತು ಆಡಿದ ಗಿಲ್, ಮೈದಾನದ ಮೂಲೆ ಮೂಲೆಗೂ ಬೌಂಡರಿಗಳನ್ನು ಬಾರಿಸಿದರು. ಕೇವಲ 75 ಎಸೆತಗಳಲ್ಲಿ 11 ಆಕರ್ಷಕ ಬೌಂಡರಿ ಹಾಗೂ 1 ಅದ್ಭುತ ಸಿಕ್ಸರ್ ನೆರವಿನಿಂದ 80 ರನ್ ಗಳಿಸಿ ಶತಕದತ್ತ ಸಾಗುತ್ತಿದ್ದರು.

ಈ ಮೂಲಕ ಆಂಗ್ಲರ ನಾಡಿನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಶತಕ ಸಿಡಿಸಿದ ಮೊದಲ ಭಾರತೀಯ ನಾಯಕ ಎಂಬ ಐತಿಹಾಸಿಕ ಸಾಧನೆ ಮಾಡಲು ದಾಪುಗಾಲಿಟ್ಟಿದ್ದರು. ಈ ದಾಖಲೆ ಬರೆಯಲು ಕೇವಲ 20 ರನ್​ಗಳ ಅವಶ್ಯಕತೆಯಿದ್ದಾಗ ಶುಭ್​ಮನ್ ಗಿಲ್ ಸ್ನಾಯು ಸೆಳೆತಕ್ಕೆ ಒಳಗಾದರು.

ಪಂದ್ಯದ 26ನೇ ಓವರ್‌ನಲ್ಲಿ ಕವರ್ ಡ್ರೈವ್ ಒಂದನ್ನು ಹೊಡೆದ ತಕ್ಷಣ ಗಿಲ್ ತೀವ್ರವಾದ ನೋವಿನಿಂದ ಮೈದಾನದಲ್ಲೇ ಕುಸಿದುಬಿದ್ದರು. ಅವರ ಬಲಗಾಲಿನ ಸ್ನಾಯು ತೀವ್ರವಾಗಿ ಸೆಳೆತಕ್ಕೊಳಗಾಗಿತ್ತು. ವೈದ್ಯಕೀಯ ಸಿಬ್ಬಂದಿ ಬಂದು ಪ್ರಥಮ ಚಿಕಿತ್ಸೆ ನೀಡಿದರೂ ಗಿಲ್ ಅವರಿಗೆ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ. ನೋವಿನಿಂದ ನರಳುತ್ತಲೇ ಅವರು ‘ರಿಟೈರ್ಡ್ ಹರ್ಟ್’ ಆಗಿ ಮೈದಾನ ತೊರೆದರು.

ಗಿಲ್ ದುರಾದೃಷ್ಟ:

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಶತಕ ಬಾರಿಸಿದ ನಾಯಕನೇ ಇಲ್ಲ ಎಂಬ ಅಪರೂಪದ ಹಾಗೂ ನಿರಾಸೆಯ ದಾಖಲೆ ಹಾಗೇ ಉಳಿದುಕೊಂಡಿದೆ. ಗಿಲ್ ಈ ಅಪಕೀರ್ತಿಯನ್ನು ಅಳಿಸಿಹಾಕುವ ಸಂಪೂರ್ಣ ಲಯದಲ್ಲಿದ್ದರು.

ಇದೇ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಕಳೆದ ವರ್ಷ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಶುಭ್​ಮನ್ ಗಿಲ್ ಭರ್ಜರಿ 269 ರನ್ ಚಚ್ಚಿದ್ದರು. ಅದು ಇಂಗ್ಲೆಂಡ್ ನೆಲದಲ್ಲಿ ಭಾರತೀಯ ಟೆಸ್ಟ್ ನಾಯಕರೊಬ್ಬರು ಗಳಿಸಿದ ಅತ್ಯಧಿಕ ಸ್ಕೋರ್ ಆಗಿತ್ತು. ಅದೇ ಮೈದಾನದಲ್ಲಿ ಈಗ ಏಕದಿನ ಕ್ರಿಕೆಟ್ ಇತಿಹಾಸವನ್ನೂ ಬರೆಯಲು ಹೊರಟಿದ್ದ ಗಿಲ್ ದುರಾದೃಷ್ಟಕ್ಕೆ ಬಲಿಯಾಗಿದ್ದಾರೆ.

  • 1990 ರಲ್ಲಿ ಟೀಮ್ ಇಂಡಿಯಾ ನಾಯಕ ಮೊಹಮ್ಮದ್ ಅಝರುದ್ದೀನ್ ಇಂಗ್ಲೆಂಡ್​ನಲ್ಲಿ 73 ರನ್ ಬಾರಿಸಿದ್ದು ಆಂಗ್ಲರನಾಡಿನಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಮೂಡಿಬಂದ ಗರಿಷ್ಠ ಸ್ಕೋರ್ ಆಗಿತ್ತು.ಇದೀಗ ಈ ದಾಖಲೆಯನ್ನು ಶುಭ್​ಮನ್ ಗಿಲ್ ಮುರಿದಿದ್ದಾರೆ.
  • ಎಡ್ಜ್​ಬಾಸ್ಟನ್​ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶುಭ್​ಮನ್ ಗಿಲ್ ಅಜೇಯ 80 ರನ್ ಬಾರಿಸಿ, ಆಂಗ್ಲರ ನಾಡಿನಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್ ಗಳಿಸಿದ ಭಾರತೀಯ ಕ್ಯಾಪ್ಟನ್ ಎನಿಸಿಕೊಂಡಿದ್ದಾರೆ.​

ಇದನ್ನೂ ಓದಿ: ಗೆಲುವಿನ ಬೆನ್ನಲ್ಲೇ ವಿಶ್ವಕಪ್‌ ರಣತಂತ್ರ ಬಿಚ್ಚಿಟ್ಟ ಶುಭ್​ಮನ್ ಗಿಲ್

ಶುಭ್​ಮನ್ ಗಿಲ್ ತಮ್ಮ ಅದ್ಭುತ 80 ರನ್‌ಗಳ ಇನಿಂಗ್ಸ್ ಮೂಲಕ ಮೊಹಮ್ಮದ್ ಅಝರುದ್ದೀನ್ ಅವರ 36 ವರ್ಷಗಳ ಹಳೆಯ ದಾಖಲೆಯನ್ನು (73 ರನ್) ಮುರಿದು ಹೊಸ ಮೈಲಿಗಲ್ಲು ನೆಟ್ಟಿರಬಹುದು. ಆದರೆ, ಇಂಗ್ಲೆಂಡ್ ಮಣ್ಣಿನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತೀಯ ನಾಯಕನೊಬ್ಬ ಏಕದಿನ ಶತಕ ಬಾರಿಸುವ ‘ಕನಸು’ ಮಾತ್ರ ಇನ್ನು ಹಾಗೇ ಉಳಿದುಕೊಂಡಿದೆ. ಈ ಕನಸನ್ನು ಮುಂದಿನ ಪಂದ್ಯಗಳ ಮೂಲಕ ಶುಭ್​ಮನ್ ಗಿಲ್ ನನಸು ಮಾಡಲಿದ್ದಾರಾ ಕಾದು ನೋಡಬೇಕಿದೆ.

Follow Us