IPL 2022: ಇಂಡಿಯನ್ ಪ್ರೀಮಿಯರ್ ಲೀಗ್ನ 22ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 23 ರನ್ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ ತಂಡವು 216 ರನ್ಗಳನ್ನು ಕಲೆಹಾಕಿತು. ಈ ದೊಡ್ಡ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ ಅಂತಿಮವಾಗಿ 193 ರನ್ಗಳಿಸಲಷ್ಟೇ ಶಕ್ತರಾದರು. ವಿಶೇಷ ಎಂದರೆ ಆರ್ಸಿಬಿ ತಂಡದಕ್ಕೆ 216 ರನ್ಗಳ ಟಾರ್ಗೆಟ್ ನೀಡುವ ಸಿಎಸ್ಕೆ ತಂಡವು ಆರ್ಸಿಬಿ ತಂಡದ ದಾಖಲೆಯೊಂದನ್ನು ಸರಿಗಟ್ಟಿದೆ. ಹೌದು, ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ 200 ರನ್ ಬಾರಿಸಿದ ದಾಖಲೆ ಆರ್ಸಿಬಿ ಹೆಸರಿನಲ್ಲಿತ್ತು. ಇದೀಗ ಈ ದಾಖಲೆಯನ್ನು ಸಿಎಸ್ಕೆ ತಂಡ ಸರಿಗಟ್ಟಿದೆ. ಆರ್ಸಿಬಿ ತಂಡವು ಐಪಿಎಲ್ನಲ್ಲಿ 21 ಬಾರಿ 200ಕ್ಕಿಂತ ಹೆಚ್ಚಿನ ರನ್ ಕಲೆಹಾಕಿದೆ. ಇದೀಗ ಸಿಎಸ್ಕೆ ಕೂಡ 21 ಬಾರಿ 200 ಕ್ಕೂ ಅಧಿಕ ರನ್ಗಳಿಸಿದೆ. ಈ ಮೂಲಕ ಆರ್ಸಿಬಿ ತಂಡದ ವಿಶೇಷ ದಾಖಲೆಯನ್ನು ಸರಿಗಟ್ಟಿದ್ದಾರೆ.
ಒಂದು ವೇಳೆ ಆರ್ಸಿಬಿ ತಂಡವು ಸಿಎಸ್ಕೆ ವಿರುದ್ದ ಗೆದ್ದಿದ್ದರೆ ಈ ದಾಖಲೆ ಮತ್ತೆ ಆರ್ಸಿಬಿ ಪಾಲಾಗುತ್ತಿತ್ತು. ಇದೀಗ ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ 200 ರನ್ ಬಾರಿಸಿದ ದಾಖಲೆಯನ್ನು ಸಿಎಸ್ಕೆ ಹಾಗೂ ಆರ್ಸಿಬಿ ಹಂಚಿಕೊಂಡಿದೆ. ಹೀಗಾಗಿ ಈ ಬಾರಿ ಯಾವ ತಂಡ ಅತೀ ಹೆಚ್ಚು 200+ ರನ್ಗಳಿಸಲಿದೆ ಆ ತಂಡದ ಹೆಸರಿಗೆ ಹೊಸ ದಾಖಲೆ ನಿರ್ಮಾಣವಾಗಲಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು. ಆರಂಭದಲ್ಲಿ ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಬೌಲರ್ಗಳು ಬೌಲಿಂಗ್ ಮಾಡಿದ್ದರು. ಆದರೆ 10 ಓವರ್ಗಳ ಬಳಿಕ ಎಲ್ಲವೂ ಬದಲಾಯಿತು. ಸಿಎಸ್ಕೆ ತಂಡದ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಹಾಗೂ ಆಲ್ರೌಂಡರ್ ಶಿವಂ ದುಬೆ ಅಬ್ಬರಿಸಲಾರಂಭಿಸಿದರು. ಇತ್ತ ನಾಯಕ ಫಾಫ್ ಡುಪ್ಲೆಸಿಸ್ ಬೌಲರ್ಗಳನ್ನು ಬದಲಿಸಿದರೂ ಫಲಿತಾಂಶ ಮಾತ್ರ ಒಂದೇ ಆಗಿತ್ತು. ಪರಿಣಾಮ ಮೂರನೇ ವಿಕೆಟ್ಗೆ ಶಿವಂ ದುಬೆ ಹಾಗೂ ರಾಬಿನ್ ಉತ್ತಪ್ಪ ಜೋಡಿ 165 ರನ್ಗಳ ಜೊತೆಯಾಟವಾಡಿದರು.
ಈ ವೇಳೆ 50 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 4 ಫೋರ್ನೊಂದಿಗೆ 88 ರನ್ ಬಾರಿಸಿದ್ದ ರಾಬಿನ್ ಉತ್ತಪ್ಪ ಔಟಾದರು. ಆದರೆ ದುಬೆಯ ಆರ್ಭಟ ಮಾತ್ರ ಮುಂದುವರೆದಿತ್ತು. ಕೊನೆಯ ಓವರ್ವರೆಗೂ ಬ್ಯಾಟ್ ಬೀಸಿದ ದುಬೆ 8 ಸಿಕ್ಸ್ ಹಾಗೂ 5 ಬೌಂಡರಿಯೊಂದಿಗೆ ಕೇವಲ 45 ಎಸೆತಗಳಲ್ಲಿ ಅಜೇಯ 95 ರನ್ಗಳಿಸಿತ್ತು. ಅಲ್ಲಿಗೆ ಸಿಎಸ್ಕೆ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 216 ಕ್ಕೆ ಬಂದು ನಿಂತಿತು.
217 ರನ್ಗಳ ಟಾರ್ಗೆಟ್ ನೀಡಿದ ಸಿಎಸ್ಕೆ ಗೆಲುವಿನ ವಿಶ್ವಾಸದಲ್ಲೇ ಮೈದಾನಕ್ಕಿಳಿಯಿತು. ಮೂರನೇ ಓವರ್ನಲ್ಲಿ ಫಾಫ್ ಡುಪ್ಲೆಸಿಸ್, 5ನೇ ಓವರ್ನಲ್ಲಿ ವಿರಾಟ್ ಕೊಹ್ಲಿ ಹಾಗೂ 6ನೇ ಓವರ್ನಲ್ಲಿ ಅನೂಜ್ ರಾವತ್ ವಿಕೆಟ್ ಪಡೆಯುವ ಮೂಲಕ ಸಿಎಸ್ಕೆ ಪವರ್ಪ್ಲೇನಲ್ಲೇ ಆರ್ಸಿಬಿಗೆ ಆಘಾತ ನೀಡಿದರು. ಅಷ್ಟೇ ಅಲ್ಲದೆ ಪವರ್ಪ್ಲೇನಲ್ಲಿ ನೀಡಿದ್ದು ಕೇವಲ 42 ರನ್ ಮಾತ್ರ. ಇನ್ನು 11 ಎಸೆತಗಳಲ್ಲಿ 26 ರನ್ ಬಾರಿಸಿ ಗ್ಲೆನ್ ಮ್ಯಾಕ್ಸ್ವೆಲ್ ಕೂಡ ಔಟಾಗಿದ್ದರು. ಈ ಹಂತದಲ್ಲಿ ಜೊತೆಗೂಡಿದ ಶಹಬಾಜ್ ಅಹ್ಮದ್ ಹಾಗೂ ಸುಯಶ್ ಪ್ರಭುದೇಸಾಯಿ ಅರ್ಧಶತಕದ ಜೊತೆಯಾಟವಾಡಿದರು. ಅದರಲ್ಲೂ ಚೊಚ್ಚಲ ಪಂದ್ಯವಾಡಿದ ಸುಯಶ್ 18 ಎಸೆತಗಳಲ್ಲಿ 34 ರನ್ ಬಾರಿಸುವ ಮೂಲಕ ತಮ್ಮ ಪಾತ್ರ ನಿರ್ವಹಿಸಿದ್ದರು. ಮತ್ತೊಂದೆಡೆ 27 ಎಸೆತಗಳಲ್ಲಿ 41 ರನ್ ಬಾರಿಸಿ ಶಹಬಾಜ್ ಕೂಡ ಅಬ್ಬರಿಸಿದರು.
ಈ ಇಬ್ಬರ ವಿಕೆಟ್ ಬೀಳುತ್ತಿದ್ದಂತೆ ಸಿಎಸ್ಕೆ ತಂಡವು ಮೇಲುಗೈ ಸಾಧಿಸಿತು. ಇದರ ಬೆನ್ನಲ್ಲೇ ವನಿಂದು ಹಸರಂಗ ಹಾಗೂ ಆಕಾಶ್ ದೀಪ್ ಬಂದ ವೇಗದಲ್ಲೇ ವಿಕೆಟ್ ಕೈಚೆಲ್ಲಿ ಹಿಂತಿರುಗಿದರು. ಈ ವೇಳೆ ಆರ್ಸಿಬಿ ತಂಡದ ಸ್ಕೋರ್ 8 ವಿಕೆಟ್ ನಷ್ಟಕ್ಕೆ 146 ರನ್. ಈ ಹಂತದಲ್ಲಿ ದಿನೇಶ್ ಕಾರ್ತಿಕ್ ಅಬ್ಬರಿಸಿದರು. ಕೇವಲ 13 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 34 ರನ್ ಬಾರಿಸಿದರು. ಆದರೆ ಬ್ರಾವೊ ಅವರ ಮ್ಯಾಜಿಕ್ ಬಾಲ್ಗೆ ಭರ್ಜರಿ ಉತ್ತರ ನೀಡಲು ಹೋದ ಡಿಕೆಗೆ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ಔಟಾದರು. ಅಂತಿಮವಾಗಿ ಆರ್ಸಿಬಿ ತಂಡವು 9 ವಿಕೆಟ್ ನಷ್ಟಕ್ಕೆ 193 ರನ್ಗಳಿಸಿ 23 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?