ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಸೌತ್ ಆಫ್ರಿಕಾ ತಂಡದ ಸ್ಟಾರ್ ಆಟಗಾರ ಡೇವಿಡ್ ಮಿಲ್ಲರ್ (David Miller) ನಿವೃತ್ತಿ ಘೋಷಿಸಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಇದೀಗ ಈ ಸುದ್ದಿಗೆ ಖುದ್ದು ಮಿಲ್ಲರ್ ಅವರೇ ಸ್ಪಷ್ಟನೆ ನೀದಿದ್ದು, ನಾನು ಟಿ20 ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿಲ್ಲ ಎಂದು ತಿಳಿಸಿದ್ದಾರೆ.
ಈ ಬಾರಿಯ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ 21 ರನ್ ಬಾರಿಸಿದ್ದರು. ಅದರಲ್ಲೂ ಪಂದ್ಯವನ್ನು ಕೊನೆಯ ಓವರ್ ತನಕ ಕೊಂಡೊಯ್ದಿದ್ದ ಮಿಲ್ಲರ್ 20ನೇ ಓವರ್ನ ಮೊದಲ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾಗಿದ್ದರು.
ಇತ್ತ ಡೇವಿಡ್ ಮಿಲ್ಲರ್ ವಿಕೆಟ್ ಸಿಗುತ್ತಿದ್ದಂತೆ ಭಾರತ ತಂಡದ ಗೆಲುವು ಖಚಿತವಾಗಿತ್ತು. ಅದರಂತೆ ಟೀಮ್ ಇಂಡಿಯಾ ಫೈನಲ್ ಪಂದ್ಯವನ್ನು ಕೇವಲ 7 ರನ್ಗಳಿಂದ ಗೆದ್ದು ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತ್ತು. ಇದರ ಬೆನ್ನಲ್ಲೇ ಫೈನಲ್ ಸೋಲಿನ ನೋವಿನಲ್ಲಿ ಡೇವಿಡ್ ಮಿಲ್ಲರ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆಂಬ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.
ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಿಲ್ಲರ್, ಎಲ್ಲವೂ ಸುಳ್ಳು ಸುದ್ದಿ ಅಷ್ಟೇ. ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾಗಿಲ್ಲ. ಸೌತ್ ಆಫ್ರಿಕಾ ಪರ ಮತ್ತೆ ಕಣಕ್ಕಿಳಿಯಲಿದ್ದೇವೆ. ಅತ್ಯುತ್ತಮವಾದದ್ದು ಇನ್ನೂ ಬರಬೇಕಿದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಕಿಲ್ಲರ್ ಮಿಲ್ಲರ್ ಖ್ಯಾತಿಯ ಡೇವಿಡ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮುಂದುವರೆಯುವುದು ಖಚಿತವಾಗಿದೆ. ಅಲ್ಲದೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಸೌತ್ ಆಫ್ರಿಕಾ ಪರ ಕಣಕ್ಕಿಳಿಯುವ ಸಾಧ್ಯತೆಯಿದೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಮುಂದಿನ ವರ್ಷ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದ್ದು, ಈ ಟೂರ್ನಿಯಲ್ಲಿ ಸೌತ್ ಆಫ್ರಿಕಾ ಸೇರಿದಂತೆ ಒಟ್ಟು 8 ತಂಡಗಳು ಕಣಕ್ಕಿಳಿಯಲಿದೆ. ಅಲ್ಲದೆ ಈ ಟೂರ್ನಿಯ ಬಳಿಕ ರೋಹಿತ್ ಶರ್ಮಾ, ಡೇವಿಡ್ ಮಿಲ್ಲರ್ ಸೇರಿದಂತೆ ಬಹುತೇಕ ಹಿರಿಯ ಆಟಗಾರರು ಏಕದಿನ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆಯಿದೆ.
ಸೌತ್ ಆಫ್ರಿಕಾ ಪರ 125 ಟಿ20 ಪಂದ್ಯಗಳನ್ನಾಡಿರುವ 35 ವರ್ಷದ ಡೇವಿಡ್ ಮಿಲ್ಲರ್ 109 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 1734 ಎಸೆತಗಳನ್ನು ಎದುರಿಸಿ 2439 ರನ್ ಕಲೆಹಾಕಿದ್ದಾರೆ. ಇದರ ನಡುವೆ 2 ಭರ್ಜರಿ ಶತಕ ಹಾಗೂ 7 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಇದನ್ನೂ ಓದಿ: T20 World Cup 2024: ಟೀಮ್ ಇಂಡಿಯಾ ಪರ ಒಂದೇ ಒಂದು ಪಂದ್ಯವಾಡದ ಮೂವರು ಆಟಗಾರರು..!
ಹಾಗೆಯೇ 173 ಏಕದಿನ ಪಂದ್ಯಗಳನ್ನಾಡಿರುವ ಮಿಲ್ಲರ್ 4315 ಎಸೆತಗಳನ್ನು ಎದುರಿಸಿ 4458 ರನ್ ಕಲೆಹಾಕಿದ್ದಾರೆ. ಈ ವೇಳೆ 24 ಅರ್ಧಶತಕ ಮತ್ತು 6 ಶತಕಗಳನ್ನು ಸಿಡಿಸಿದ್ದಾರೆ.
Published On - 7:31 am, Wed, 3 July 24