Rishabh Pant: ಐಪಿಎಲ್​ಗೂ ಮುನ್ನ ಹೊಸ ತಂಡ ಸೇರಿಕೊಂಡ ರಿಷಬ್ ಪಂತ್..!

|

Updated on: Aug 03, 2024 | 6:17 PM

Delhi Premier League 2024: ಈ ಪಂದ್ಯಾವಳಿಯು ಆಗಸ್ಟ್ 17 ರಿಂದ ಸೆಪ್ಟೆಂಬರ್ 9 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಟೀಮ್ ಇಂಡಿಯಾ ಯಾವುದೇ ಸರಣಿಯನ್ನು ಹೊಂದಿಲ್ಲ. ಈ ಟೂರ್ನಿಯ ಮೊದಲ ಸೀಸನ್‌ನಲ್ಲಿ ಪಂತ್ ಭಾಗವಹಿಸಲಿದ್ದಾರೆ ಎಂದು ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಕೂಡ ತಿಳಿಸಿದ್ದಾರೆ.

Rishabh Pant: ಐಪಿಎಲ್​ಗೂ ಮುನ್ನ ಹೊಸ ತಂಡ ಸೇರಿಕೊಂಡ ರಿಷಬ್ ಪಂತ್..!
ರಿಷಬ್ ಪಂತ್
Follow us on

ಸದ್ಯ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಚರ್ಚೆಯ ಕೇಂದ್ರಬಿಂದುವಾಗಿದ್ದಾರೆ. ಒಂದೆಡೆ ಟಿ20 ಮತ್ತು ಏಕದಿನ ಮಾದರಿಗಳಿಗೆ ಟೀಂ ಇಂಡಿಯಾದಲ್ಲಿ ಅವರ ಆಯ್ಕೆಯ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಇನ್ನೊಂದೆಡೆ ಮುಂದಿನ ವರ್ಷದ ಐಪಿಎಲ್​ನಿಂದ ಅವರು ಬೇರೆ ತಂಡದಲ್ಲಿ ಆಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಪ್ರಸ್ತುತ ರಿಷಬ್ ಪಂತ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕರಾಗಿದ್ದಾರೆ. ಆದರೆ ಮುಂದಿನ ಸೀಸನ್‌ನಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್‌ ಪರ ಆಡಬಹುದು ಎಂದು ಹೇಳಲಾಗುತ್ತಿದೆ. ಈ ಎಲ್ಲಾ ವದಂತಿಗಳಿಗೆ ಕೆಲವೇ ತಿಂಗಳುಗಳಲ್ಲಿ ಉತ್ತರ ಸಿಗಲಿದೆ. ಆದರೆ ಸದ್ಯಕ್ಕೆ ಮಾತ್ರ ಪಂತ್ ಹೊಸ ತಂಡದ ಪರ ಕಣಕ್ಕಿಳಿಯುವುದು ಖಚಿತವಾಗಿದೆ.

ಹೊಸ ತಂಡ ಸೇರಿಕೊಂಡ ರಿಷಬ್ ಪಂತ್

ಐಪಿಎಲ್ ಮಾದರಿಯಲ್ಲಿ, ಕಳೆದ ಕೆಲವು ವರ್ಷಗಳಿಂದ ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಟಿ20 ಲೀಗ್‌ನ ಯಶಸ್ಸಿನ ನಂತರ, ಅಂತಿಮವಾಗಿ ದೆಹಲಿ ಅಸೋಸಿಯೇಷನ್ ​​(ಡಿಡಿಸಿಎ) ಸಹ ತನ್ನದೇ ಆದ ಟಿ20 ಲೀಗ್ ಅನ್ನು ಪ್ರಾರಂಭಿಸುತ್ತಿದೆ. ಈ ತಿಂಗಳು ಪ್ರಾರಂಭವಾಗಲಿರುವ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಒಟ್ಟು 6 ಫ್ರಾಂಚೈಸಿಗಳನ್ನು ಖರೀದಿಸಲಾಗಿದೆ. ಈ ಲೀಗ್​ನಲ್ಲಿ ದೆಹಲಿಯಿಂದ ಬರುವ ಅನೇಕ ಅಂತರರಾಷ್ಟ್ರೀಯ ಮತ್ತು ದೇಶೀಯ ಆಟಗಾರರು ಆಡುವುದನ್ನು ಕಾಣಬಹುದು. ಅದರಂತೆ ರಿಷಬ್ ಪಂತ್ ಕೂಡ ದೆಹಲಿ ಆಟಗಾರನಾಗಿದ್ದು, ಅವರು ಕೂಡ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಇವರಲ್ಲದೆ ಅನುಭವಿ ವೇಗಿಗಳಾದ ಇಶಾಂತ್ ಶರ್ಮಾ ಮತ್ತು ನವದೀಪ್ ಸೈನಿ ಕೂಡ ಈ ಲೀಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪುರಾನಿ ಡೆಲ್ಲಿ-6 ತಂಡ ಸೇರಿದ ಪಂತ್

ಶುಕ್ರವಾರ, ಆಗಸ್ಟ್ 2 ರಂದು ಆಟಗಾರರ ಆಯ್ಕೆಗಾಗಿ ಡಿಡಿಸಿಎ ಹರಾಜಿನ ಬದಲಿಗೆ ಡ್ರಾಫ್ಟ್ ಅನ್ನು ಆಯೋಜಿಸಿತ್ತು. ಇದರಲ್ಲಿ ಪ್ರತಿ ತಂಡಕ್ಕೆ ಒಬ್ಬೊಬ್ಬರಾಗಿ ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ದೊರೆಯಿತು. ರಿಷಬ್ ಪಂತ್ ಸರದಿ ಬಂದಾಗ ಪುರಾನಿ ಡೆಲ್ಲಿ-6 ತಂಡ ರಿಷಬ್ ಪಂತ್​ರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಪಂತ್ ಮಾತ್ರವಲ್ಲದೆ ಈ ಫ್ರಾಂಚೈಸಿ ಇಶಾಂತ್ ಶರ್ಮಾ ಅವರನ್ನೂ ಆಯ್ಕೆ ಮಾಡಿದ್ದು ತಂಡದ ಬಲ ಹೆಚ್ಚಿಸಿದೆ. ಉಳಿದಂತೆ ಐಪಿಎಲ್ ಮೂಲಕ ಛಾಪು ಮೂಡಿಸಿದ್ದ ಯುವ ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ಹಾಗೂ ಆಲ್ ರೌಂಡರ್ ಆಯುಷ್ ಬಡೋನಿ ಅವರನ್ನು ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡ ಆಯ್ಕೆ ಮಾಡಿದೆ.

ರಿಷಬ್ ಪಂತ್ ಆಡ್ತಾರಾ?

ರಿಷಬ್ ಪಂತ್ ನಿಜವಾಗಿಯೂ ಈ ಟೂರ್ನಿಯಲ್ಲಿ ಭಾಗವಹಿಸುತ್ತಾರಾ ಎಂಬುದು ಈಗ ಪ್ರಶ್ನೆಯಾಗಿದೆ. ಉತ್ತರ – ಹೌದು. ಈ ಪಂದ್ಯಾವಳಿಯು ಆಗಸ್ಟ್ 17 ರಿಂದ ಸೆಪ್ಟೆಂಬರ್ 9 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಟೀಮ್ ಇಂಡಿಯಾ ಯಾವುದೇ ಸರಣಿಯನ್ನು ಹೊಂದಿಲ್ಲ. ಈ ಟೂರ್ನಿಯ ಮೊದಲ ಸೀಸನ್‌ನಲ್ಲಿ ಪಂತ್ ಭಾಗವಹಿಸಲಿದ್ದಾರೆ ಎಂದು ಡಿಡಿಸಿಎ ಅಧ್ಯಕ್ಷ ರೋಹನ್ ಜೇಟ್ಲಿ ಕೂಡ ತಿಳಿಸಿದ್ದಾರೆ. ಈ ಕುರಿತು ಪಂತ್ ಜತೆ ಮಾತನಾಡಿದ್ದು, ಸ್ಟಾರ್ ವಿಕೆಟ್ ಕೀಪರ್ ಆಗಿ ಲೀಗ್​ನಲ್ಲಿ ಆಡುವುದಾಗಿ ಭರವಸೆ ನೀಡಿರುವುದಾಗಿ ಜೇಟ್ಲಿ ಹೇಳಿದ್ದಾರೆ. ಪಂತ್ ಮಾತ್ರವಲ್ಲ, ಇಶಾಂತ್, ಸೈನಿ, ರಾಣಾ ಅವರಂತಹ ಆಟಗಾರರೂ ಆಡಲಿದ್ದಾರೆ.

ಗಂಭೀರ್ ಸೂಚನೆ

ಇತ್ತೀಚೆಗೆ ಬಿಸಿಸಿಐ ಸಹ ಆಟಗಾರರನ್ನು ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದೆ. ಇದು ಬಿಸಿಸಿಐನ ದೇಶೀಯ ಪಂದ್ಯಾವಳಿಯಲ್ಲದಿದ್ದರೂ, ಇದು ಬಿಸಿಸಿಐನ ಮಾನ್ಯತೆ ಪಡೆದ ಲೀಗ್ ಆಗಿದೆ. ಅಲ್ಲದೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯ ಅಂತ್ಯದ ನಂತರ ಟೀಂ ಇಂಡಯಾ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಆಡಲಿದೆ. ಆದರೆ ಆ ಸರಣಿಗೆ ಸಾಕಷ್ಟು ಸಮಯವಿದೆ. ಹೀಗಾಗಿ ಆಟಗಾರರ ಫಿಟ್ನೆಸ್ ಮತ್ತು ಕೌಶಲ್ಯಗಳ ಮೇಲೆ ಕೆಲಸ ಮಾಡಬೇಕೆಂದು ಟೀಂ ಇಂಡಿಯಾದ ಹೊಸ ಕೋಚ್ ಗೌತಮ್ ಗಂಭೀರ್ ಸೂಚನೆ ನೀಡಿದ್ದಾರೆ. ಆದ್ದರಿಂದ ಪಂತ್ ಮತ್ತು ರಾಣಾ ಅವರಂತಹ ಆಟಗಾರರಿಗೆ ಈ ಲೀಗ್ ಮಹತ್ವದ್ದಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Sat, 3 August 24