Prithvi Shaw: ಪೃಥ್ವಿ ಶಾ ಸಿಡಿಲಬ್ಬರದ ಬ್ಯಾಟಿಂಗ್: ಶತಕ ಜಸ್ಟ್ ಮಿಸ್
Prithvi Shaw: ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ಲೀಗ್ನಲ್ಲಿ ಪೃಥ್ವಿ ಶಾ ಮತ್ತೊಂದು ಅರ್ಧಶತಕ ಸಿಡಿಸಿದ್ದಾರೆ. ಮಿಡ್ಲ್ಸೆಕ್ಸ್ ವಿರುದ್ಧದ ಪಂದ್ಯದಲ್ಲಿ 58 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 76 ರನ್ ಚಚ್ಚಿದ್ದ ಪೃಥ್ವಿ, ಇದೀಗ ಡರ್ಹಾಮ್ ವಿರುದ್ಧ ಕೂಡ ಅಬ್ಬರಿಸಿದ್ದಾರೆ. ಈ ಬಾರಿ ಸ್ಪೋಟಕ ಇನಿಂಗ್ಸ್ ಆಡಿದ ಭಾರತೀಯ ಬ್ಯಾಟರ್ ಶತಕದ ಅಂಚಿನಲ್ಲಿ ಎಡವಿ ನಿರಾಸೆ ಮೂಡಿಸಿದರು.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಒನ್ ಡೇ ಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ಅಬ್ಬರ ಮುಂದುವರೆದಿದೆ. ಚೆಸ್ಟರ್-ಲೆ-ಸ್ಟ್ರೀಟ್ನ ರಿವರ್‌ಸೈಡ್ ಗ್ರೌಂಡ್ನಲ್ಲಿ ನಡೆದ ಡರ್ಹಾಮ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾರ್ಥಾಂಪ್ಟನ್‌ಶೈರ್ ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ನಾರ್ಥಾಂಪ್ಟನ್‌ಶೈರ್ ಪರ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಪೃಥ್ವಿ ಶಾ ಮೈದಾನದ ಮೂಲೆ ಮೂಲೆಗೂ ಫೋರ್ಗಳನ್ನು ಬಾರಿಸುವ ಮೂಲಕ ಡರ್ಹಾಮ್ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೇವಲ 70 ಎಸೆತಗಳಲ್ಲಿ ಪೃಥ್ವಿ ಬ್ಯಾಟ್ನಿಂದ 97 ರನ್ಗಳು ಮೂಡಿಬಂತು.
ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ಪೃಥ್ವಿ ಶಾ ಕ್ಯಾಚ್ ನೀಡಿದರು. ಇದರೊಂದಿಗೆ ಕೇವಲ 3 ರನ್ಗಳ ಅಂತರದಿಂದ ಶತಕ ವಂಚಿತರಾದರು. ಅಂತಿಮವಾಗಿ 71 ಎಸೆತಗಳನ್ನು ಎದುರಿಸಿದ ಪೃಥ್ವಿ ಶಾ 1 ಭರ್ಜರಿ ಸಿಕ್ಸ್ ಹಾಗೂ 16 ಫೋರ್ಗಳೊಂದಿಗೆ 97 ರನ್ ಸಿಡಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಶಾ ಅವರ ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಾರ್ಥಾಂಪ್ಟನ್‌ಶೈರ್ ತಂಡವು 49.2 ಓವರ್ಗಳಲ್ಲಿ 260 ರನ್ಗಳಿಸಿ ಆಲೌಟ್ ಆಯಿತು.
ಅಕರ್ಮನ್ ಸಿಡಿಲಬ್ಬರ:
261 ರನ್ಗಳ ಗುರಿ ಬೆನ್ನತ್ತಿದ ಡರ್ಹಾಮ್ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 26 ರನ್ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕಾಲಿನ್ ಅಕರ್ಮನ್ ಕಣಕ್ಕಿಳಿದರು. ಅಲ್ಲದೆ ಆಕರ್ಷಕ ಬ್ಯಾಟಿಂಗ್ನೊಂದಿಗೆ ಇನಿಂಗ್ಸ್ ಕಟ್ಟಿದ ಅಕರ್ಮನ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಡರ್ಹಾಮ್ ತಂಡದ ಮೊತ್ತ 100ರ ಗಡಿದಾಟುತ್ತಿದ್ದಂತೆ ಕಾಲಿನ್ ಅಕರ್ಮನ್ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ 94 ಎಸೆತಗಳಲ್ಲಿ ಶತಕ ಮೂಡಿಬಂತು. ಅಂತಿಮವಾಗಿ 106 ಎಸೆತಗಳಲ್ಲಿ 14 ಫೋರ್ ಹಾಗೂ 1 ಸಿಕ್ಸ್ನೊಂದಿಗೆ 108 ರನ್ ಬಾರಿಸಿ ಕಾಲಿನ್ ಅಕರ್ಮನ್ ಔಟಾದರು.
ಅಷ್ಟರಲ್ಲಾಗಲೇ ಡರ್ಹಾಮ್ ತಂಡವು ಗೆಲುವಿನತ್ತ ಮುಖ ಮಾಡಿತ್ತು. ಈ ಮೂಲಕ 48.1 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಡರ್ಹಾಮ್ ತಂಡವು 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ನಾರ್ಥಾಂಪ್ಟನ್‌ಶೈರ್ ಪ್ಲೇಯಿಂಗ್ 11: ಪೃಥ್ವಿ ಶಾ , ರಿಕಾರ್ಡೊ ವಾಸ್ಕೊನ್ಸೆಲೋಸ್ , ಜಾರ್ಜ್ ಬಾರ್ಟ್ಲೆಟ್ , ರಾಬ್ ಕಿಯೋಗ್ , ಸೈಫ್ ಜೈಬ್ , ಲೆವಿಸ್ ಮೆಕ್ ಮ್ಯಾನಸ್ (ನಾಯಕ) , ಗಸ್ ಮಿಲ್ಲರ್ , ಜಸ್ಟಿನ್ ಬ್ರಾಡ್ , ಜ್ಯಾಕ್ ವೈಟ್ , ಫ್ರೆಡ್ಡಿ ಹೆಲ್ಡ್ರೀಚ್ , ಬೆನ್ ಸ್ಯಾಂಡರ್ಸನ್.
ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾ ಅಬ್ಬರಕ್ಕೆ ವಾರ್ನರ್ ದಾಖಲೆ ಧೂಳೀಪಟ
ಡರ್ಹಾಮ್ ಪ್ಲೇಯಿಂಗ್ 11: ಅಲೆಕ್ಸ್ ಲೀಸ್ (ನಾಯಕ) , ಬೆನ್ ಮೆಕಿನ್ನಿ , ಬಾಸ್ ಡಿ ಲೀಡ್ , ಕಾಲಿನ್ ಅಕರ್ಮನ್ , ಮೈಕೆಲ್ ಜೋನ್ಸ್ , ಜಾರ್ಜ್ ಡ್ರಿಸ್ಸೆಲ್ , ಹೇಡನ್ ಮಸ್ಟರ್ಡ್ (ವಿಕೆಟ್ ಕೀಪರ್) , ಸ್ಕಾಟ್ ಬೋರ್ತ್ವಿಕ್ , ಪಾಲ್ ಕಾಫ್ಲಿನ್ , ಮಿಚೆಲ್ ಕಿಲೀನ್ , ಜೇಮ್ಸ್ ಮಿಂಟೋ.