Prithvi Shaw: ವಿದೇಶದಲ್ಲಿ ಅಬ್ಬರಿಸಿದ ಪೃಥ್ವಿ ಶಾ

Prithvi Shaw: ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಪೃಥ್ವಿ ಶಾ ಕಳೆದೊಂದು ವರ್ಷದಿಂದ ಇಂಗ್ಲೆಂಡ್​ನ ಕೌಂಟಿ ಕ್ರಿಕೆಟ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಸೀಸನ್​ ಒನ್ ಡೇ ಕಪ್​ನಲ್ಲಿ ಕಾಣಿಸಿಕೊಂಡಿದ್ದ ಪೃಥ್ವಿ ನಾರ್ಥಾಂಪ್ಟನ್‌ಶೈರ್ ಪರ 4 ಪಂದ್ಯಗಳನ್ನಾಡಿದ್ದರು. ಈ ವೇಳೆ 1 ದ್ವಿಶತಕ ಹಾಗೂ 1 ಶತಕದೊಂದಿಗೆ ಅಬ್ಬರಿಸಿದ್ದರು. ಆದರೆ ಆ ಬಳಿಕ ಗಾಯಗೊಂಡ ಕಾರಣ ಟೂರ್ನಿಯಿಂದ ಹೊರಗುಳಿದಿದ್ದರು. ಇದೀಗ ಮತ್ತೆ ಒನ್​ ಡೇ ಕಪ್​ ಮೂಲಕ ಹಿಂತಿರುಗಿರುವ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

Prithvi Shaw: ವಿದೇಶದಲ್ಲಿ ಅಬ್ಬರಿಸಿದ ಪೃಥ್ವಿ ಶಾ
Prithvi Shaw
Follow us
ಝಾಹಿರ್ ಯೂಸುಫ್
|

Updated on: Jul 30, 2024 | 9:42 AM

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಒನ್​ ಡೇ ಕಪ್ ಟೂರ್ನಿಯಲ್ಲಿ ಪೃಥ್ವಿ ಶಾ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಕಣಕ್ಕಿಳಿದ ಯುವ ದಾಂಡಿಗ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮಿಡ್ಲ್​ಸೆಕ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ನಾರ್ಥಾಂಪ್ಟನ್​ಶೈರ್ ತಂಡದ ನಾಯಕ ಲೆವಿಸ್ ಮೆಕ್‌ಮಾನಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಪೃಥ್ವಿ ಶಾ ನಾರ್ಥಾಂಪ್ಟನ್​ಶೈರ್ ತಂಡಕ್ಕೆ ಸ್ಪೋಟಕ ಆರಂಭ ಒದಗಿಸುವಲ್ಲಿ ಯಶಸ್ವಿಯಾದರು.

ಮೊದಲ ಓವರ್​ನಿಂದಲೇ ಆಕ್ರಮಣಕಾರಿ ಬ್ಯಾಟಿಂಗ್​ಗೆ ಒತ್ತು ನೀಡಿದ್ದ ಪೃಥ್ವಿ ಫೋರ್​ಗಳ ಸುರಿಮಳೆಗೈದರು. ಈ ಮೂಲಕ 58 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ 76 ರನ್​ ಚಚ್ಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಗಸ್ ಮಿಲ್ಲರ್ 68 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 73 ರನ್ ಬಾರಿಸಿದರು.

ಮಿಲ್ಲರ್ ಹಾಗೂ ಪೃಥ್ವಿ ಶಾ ಅವರ ಈ ಸ್ಪೋಟಕ ಅರ್ಧಶತಕಗಳ ನೆರವಿನಿಂದ ನಾರ್ಥಾಂಪ್ಟನ್​ಶೈರ್ ತಂಡವು 50 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 317 ರನ್ ಕಲೆಹಾಕಿತು.

ಗೆದ್ದು ಬೀಗಿದ ಮಿಡ್ಲ್​ಸೆಕ್ಸ್:

318 ರನ್​ಗಳ ಗುರಿಯನ್ನು ಬೆನ್ನತ್ತಿದ ಮಿಡ್ಲ್​ಸೆಕ್ಸ್​ ಪರ ಆರಂಭಿಕ ಜೋ ಕ್ರಾಕ್ನೆಲ್ 49 ರನ್ ಬಾರಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಥನ್ ಫೆರ್ನಾಂಡಿಸ್ 83 ರನ್​ಗಳ ಕೊಡುಗೆ ನೀಡಿದರು.

ಆದರೆ ಪಂದ್ಯದ ಚಿತ್ರಣ ಬದಲಿಸಿದ್ದು ನಾಯಕ ಮಾರ್ಕ್ ಸ್ಟೋನ್‌ಮನ್. ಒಂದು ಹಂತದಲ್ಲಿ ನಾರ್ಥಾಂಪ್ಟನ್​ಶೈರ್ ಪರ ವಾಲಿದ್ದ ಪಂದ್ಯವನ್ನು ಸ್ಟೋನ್​ಮನ್ ಭರ್ಜರಿ ಬ್ಯಾಟಿಂಗ್​ ಮೂಲಕ ಮಿಡ್ಲ್​ಸೆಕ್ಸ್​ನತ್ತ ವಾಲುವಂತೆ ಮಾಡಿದರು.

78 ಎಸೆತಗಳನ್ನು ಎದುರಿಸಿದ ಮಾರ್ಕ್​​ ಸ್ಟೋನ್​ಮನ್ 1 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 83 ರನ್ ಚಚ್ಚಿದರು. ಈ ಮೂಲಕ ಮಿಡ್ಲ್​ಸೆಕ್ಸ್ ತಂಡವು 48.1 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 319 ರನ್​ ಕಲೆಹಾಕುವ ಮೂಲಕ ಭರ್ಜರಿ ಜಯ ಸಾಧಿಸಿತು.

ಮಿಡ್ಲ್​ಸೆಕ್ಸ್ ಪ್ಲೇಯಿಂಗ್ 11: ನಾಥನ್ ಫೆರ್ನಾಂಡಿಸ್ , ಜೋ ಕ್ರಾಕ್ನೆಲ್ , ಸ್ಯಾಮ್ ರಾಬ್ಸನ್ , ಮಾರ್ಕ್ ಸ್ಟೋನ್ಮನ್ (ನಾಯಕ) , ಜ್ಯಾಕ್ ಡೇವಿಸ್ (ವಿಕೆಟ್ ಕೀಪರ್) , ಮಾರ್ಟಿನ್ ಆಂಡರ್ಸನ್ , ಲ್ಯೂಕ್ ಹೋಲ್ಮನ್ , ಜೋಶ್ ಡಿ ಕೈರ್ಸ್ , ಹೆನ್ರಿ ಬ್ರೂಕ್ಸ್ , ಇಶಾನ್ ಕೌಶಲ್ , ನೋವಾ ಕಾರ್ನ್ವೆಲ್.

ಇದನ್ನೂ ಓದಿ: Suryakumar Yadav: ಸೂರ್ಯಕುಮಾರ್ ಯಾದವ್ ಅಬ್ಬರಕ್ಕೆ ಮ್ಯಾಕ್ಸ್​ವೆಲ್ ವಿಶ್ವ ದಾಖಲೆ ಉಡೀಸ್

ನಾರ್ಥಾಂಪ್ಟನ್​ಶೈರ್ ಪ್ಲೇಯಿಂಗ್ 11: ಪೃಥ್ವಿ ಶಾ , ಎಮಿಲಿಯೊ ಗೇ , ರಿಕಾರ್ಡೊ ವಾಸ್ಕೊನ್ಸೆಲೋಸ್ , ಜಾರ್ಜ್ ಬಾರ್ಟ್ಲೆಟ್ , ಸೈಫ್ ಜೈಬ್ , ಲೆವಿಸ್ ಮೆಕ್​ಮಾನಸ್ (ನಾಯಕ) , ಗಸ್ ಮಿಲ್ಲರ್ , ಜಸ್ಟಿನ್ ಬ್ರಾಡ್ , ಜೇಮ್ಸ್ ಸೇಲ್ಸ್ , ಮೈಕೆಲ್ ಫಿನಾನ್ , ರಾಫೆಲ್ ವೆಥರಾಲ್.