ಮೈದಾನದ ಆಚೆಗೆ ಭರ್ಜರಿ ಸಿಕ್ಸ್​: ಚೆಂಡು ಕೊಡಲ್ಲವೆಂದು ಎತ್ತಿಕೊಂಡು ಹೋದ ಯುವಕ..!

ಮೈದಾನದ ಆಚೆಗೆ ಭರ್ಜರಿ ಸಿಕ್ಸ್​: ಚೆಂಡು ಕೊಡಲ್ಲವೆಂದು ಎತ್ತಿಕೊಂಡು ಹೋದ ಯುವಕ..!

ಝಾಹಿರ್ ಯೂಸುಫ್
|

Updated on: Jul 30, 2024 | 11:09 AM

TNPL 2024: ತಮಿಳುನಾಡು ಪ್ರೀಮಿಯರ್ ಲೀಗ್​ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯುತ್ತವೆ. ಈ ತಂಡಗಳಲ್ಲಿ ಈ ಬಾರಿ ಲೈಕಾ ಕೋವೈ ಕಿಂಗ್ಸ್, ತಿರುಪ್ಪೂರ್ ತಮಿಳನ್ಸ್, ಚೆಪಾಕ್ ಸೂಪರ್ ಗಿಲ್ಲೀಸ್ ಮತ್ತು ದಿಂಡಿಗಲ್ ಡ್ರಾಗನ್ಸ್ ಟೀಮ್​ಗಳು ಪ್ಲೇಆಫ್ ಹಂತಕ್ಕೇರಿದೆ. ಅದರಂತೆ ಪ್ಲೇಆಫ್ ಹಂತದ ಪಂದ್ಯಗಳು ಜುಲೈ 30 ರಿಂದ ಶುರುವಾಗಲಿದೆ.

ಗಲ್ಲಿ ಕ್ರಿಕೆಟ್​ನಲ್ಲಿ ಚೆಂಡು ಮನೆಯೊಳಗೆ ಹೋದರೆ ಅಥವಾ ಮನೆ ಮೇಲೆ ಬಿದ್ದರೆ ಕೊಡಲ್ಲ ಎಂದೇಳುವುದನ್ನು ನೀವು ನೋಡಿರುತ್ತೀರಿ. ಇಂತಹದ್ದೇ ಒಂದು ತಮಾಷೆಯ ಘಟನೆ ತಮಿಳುನಾಡು ಪ್ರೀಮಿಯರ್ ಲೀಗ್ ವೇಳೆ ಕಂಡು ಬಂದಿದೆ. ಈ ಪಂದ್ಯದಲ್ಲಿ ಮಧುರೈ ಪ್ಯಾಂಥರ್ಸ್ ಮತ್ತು ಚೆಪಾಕ್ ಸೂಪರ್ ಗಿಲ್ಲೀಸ್ ತಂಡಗಳು ಮುಖಾಮುಖಿಯಾಗಿದ್ದವು. ದ್ವಿತೀಯ ಇನಿಂಗ್ಸ್​ನ 14ನೇ ಓವರ್​ನ 4ನೇ ಎಸೆತದಲ್ಲಿ ಚೆಪಾಕ್ ಸೂಪರ್ ಗಿಲ್ಲೀಸ್ ತಂಡದ ಎಡಗೈ ದಾಂಡಿಗ ಪ್ರದೋಶ್ ಪೌಲ್​ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಡೀಪ್ ಮಿಡ್ ವಿಕೆಟ್​ನತ್ತ ಸಾಗಿದ ಚೆಂಡು ಹೋಗಿ ಬಿದ್ದದ್ದು ಸ್ಟೇಡಿಯಂ ಪಕ್ಕದ ಗದ್ದೆಯ ಬಳಿ.

ಅತ್ತ ಗದ್ದೆಯ ಬಳಿ ರೆಸ್ಟ್ ತೆಗೆದುಕೊಳ್ಳುತ್ತಿದ್ದ ಯುವಕನಿಗೆ ಚೆಂಡು ಸಿಕ್ಕಿದೆ. ಈ ವೇಳೆ ಸ್ಟೇಡಿಯಂ ಬಳಿಯಿಂದ ಅನೇಕರು ಬಾಲ್​ಗಾಗಿ ಮನವಿ ಮಾಡಿದರೂ ಚೆಂಡು ಕೊಡುವುದಿಲ್ಲ ಎಂದು ತಿಳಿಸಿದ್ದಾನೆ. ಈ ಹಾಸ್ಯಮಯ ದೃಶ್ಯವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಲಾಗಿದ್ದು, ಇದೀಗ ಸ್ಟಾರ್ ಸ್ಪೋರ್ಟ್ಸ್ (ತಮಿಳು) ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳಿಂದ ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮಧುರೈ ಪ್ಯಾಂಥರ್ಸ್ ತಂಡವು 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 191 ರನ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆಪಾಕ್ ಸೂಪರ್ ಗಿಲ್ಲೀಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 182 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಮಧುರೈ ಪ್ಯಾಂಥರ್ಸ್ ತಂಡವು 9 ರನ್​ಗಳ ರೋಚಕ ಜಯ ಸಾಧಿಸಿದೆ.