Deodhar Trophy 2023: 11 ಭರ್ಜರಿ ಸಿಕ್ಸರ್​ ಸಹಿತ ಸಿಡಿಲಬ್ಬರದ ಶತಕ ಸಿಡಿಸಿದ ರಿಯಾನ್ ಪರಾಗ್..!

|

Updated on: Jul 29, 2023 | 8:35 AM

Riyan Parag: ಇನ್ನು ತಮ್ಮ ಇನ್ನಿಂಗ್ಸ್​ನಲ್ಲಿ 102 ಎಸೆತಗಳನ್ನು ಎದುರಿಸಿದ ಪರಾಗ್ 5 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್​ಗಳ ನೆರವಿನಿಂದ 131 ರನ್ ಸಿಡಿಸಿದರು.

Deodhar Trophy 2023: 11 ಭರ್ಜರಿ ಸಿಕ್ಸರ್​ ಸಹಿತ ಸಿಡಿಲಬ್ಬರದ ಶತಕ ಸಿಡಿಸಿದ ರಿಯಾನ್ ಪರಾಗ್..!
ರಿಯಾನ್ ಪರಾಗ್
Follow us on

ಪುದುಚೇರಿಯ ಸಿಎಪಿ ಮೈದಾನ 3 ರಲ್ಲಿ ಶುಕ್ರವಾರ ನಡೆದ ದೇವಧರ್ ಟ್ರೋಫಿ 2023 ರ (Deodhar Trophy 2023) ಏಳನೇ ಪಂದ್ಯದಲ್ಲಿ ಉತ್ತರ ವಲಯ ತಂಡವನ್ನು ಪೂರ್ವ ವಲಯ ತಂಡ (East Zone vs North Zone) 88 ರನ್‌ಗಳಿಂದ ಮಣಿಸಿದೆ. ಪೂರ್ವ ವಲಯ ತಂಡದ ಪರ ಒನ್ ಮ್ಯಾನ್ ಶೋ ಪ್ರದರ್ಶನ ನೀಡಿದ ರಿಯಾನ್ ಪರಾಗ್ (Riyan Parag), ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್​ಗೆ ಇಳಿದು 84 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದರೆ, ಆ ಬಳಿಕ ಬೌಲಿಂಗ್​​ನಲ್ಲೂ ಅಬ್ಬರಿಸಿದ ಈ ಆಲ್ ರೌಂಡರ್ 4 ವಿಕೆಟ್ ಉರುಳಿಸುವುದರೊಂದಿಗೆ ಉತ್ತರ ವಲಯ ತಂಡದ ಬ್ಯಾಟಿಂಗ್ ಬೆನ್ನೇಲುಬನ್ನು ಮುರಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೂರ್ವ ವಲಯ ತಂಡ ರಿಯಾನ್ ಪರಾಗ್ ಅವರ ಶತಕದ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 337 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಉತ್ತರ ವಲಯ ತಂಡ 46ನೇ ಓವರ್​ ಒಳಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು 249 ರನ್​ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

ಟಾಪ್ ಆರ್ಡರ್ ಅಟ್ಟರ್ ಫ್ಲಾಪ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಪೂರ್ವ ವಲಯ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಅಗ್ರ ಕ್ರಮಾಂಕ ಉತ್ತಮ ಆಟ ಪ್ರದರ್ಶಿಸುವಲ್ಲಿ ವಿಫಲವಾಯಿತು. ಆರಂಭಿಕರಾದ ಅಭಿಮನ್ಯು ಈಶ್ವರನ್ 10 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಮತೊಬ್ಬ ಆರಂಭಿಕ ಉತ್ಕರ್ಷ್​ ಸಿಂಗ್ ಸಹ 11 ರನ್​ಗಳಿಗೆ ಸುಸ್ತಾದರು. 3ನೇ ಕ್ರಮಾಂಕದಲ್ಲಿ ಬಂದ ವಿರಾಟ್ ಸಿಂಗ್ 3 ಹಾಗೂ ಸುಭ್ರಾಂಶು ಸೇನಾಪತಿ 13 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರೆ, ನಾಯಕ ಸೌರಭ್ ತಿವಾರಿ ಕೂಡ 16 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರು.

ದೇವಧರ್ ಟ್ರೋಫಿ ರಿಟರ್ನ್​; 2023-24ರ ದೇಶಿಯ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ

ದ್ವಿಶತಕದ ಜೊತೆಯಾಟ

ಹೀಗಾಗಿ ತಂಡ 57 ರನ್​ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಬ್ಯಾಟಿಂಗ್​ಗೆ ಇಳಿದ ರಿಯಾನ್ ಪರಾಗ್, ಉತ್ತರ ವಲಯ ತಂಡದ ಬೌಲರ್​ಗಳನ್ನು ಚೆಂಡಾಡಿದರು. ಹಾಗೆಯೇ ಕುಮಾರ್ ಕುಶಾಗ್ರ ಜೊತೆಗೆ ದ್ವಿಶತಕದ ಜೊತೆಯಾಟವನ್ನು ಹಂಚಿಕೊಂಡರು. 57 ರನ್​ಗಳಿಂದ ತಂಡದ ಇನ್ನಿಂಗ್ಸ್ ಮುನ್ನಡೆಸಿದ ಈ ಜೋಡಿ 6ನೇ ವಿಕೆಟ್ ವೇಳೆಗೆ ತಂಡದ ಮೊತ್ತವನ್ನು 292 ರನ್​ಗಳಿಗೆ ಕೊಂಡೊಯ್ದರು.

ಪರಾಗ್ ಸ್ಫೋಟಕ ಶತಕ

ಇನ್ನು ತಮ್ಮ ಇನ್ನಿಂಗ್ಸ್​ನಲ್ಲಿ 102 ಎಸೆತಗಳನ್ನು ಎದುರಿಸಿದ ಪರಾಗ್ 5 ಬೌಂಡರಿ ಹಾಗೂ 11 ಭರ್ಜರಿ ಸಿಕ್ಸರ್​ಗಳ ನೆರವಿನಿಂದ 131 ರನ್ ಸಿಡಿಸಿದರು. ಇವರಲ್ಲದೆ ಕುಮಾರ್ ಕುಶಾಗ್ರಾ ಕೂಡ 98 ರನ್​ಗಳ ಕೊಡುಗೆ ನೀಡುವುದರೊಂದಿಗೆ ಕೇವಲ 2 ರನ್​ಗಳಿಂದ ಶತಕ ವಂಚಿತರಾದರು. ಈ ಜೋಡಿಯ ಆರನೇ ವಿಕೆಟ್‌ಗೆ 235 ರನ್‌ಗಳ ದಾಖಲೆಯ ಜೊತೆಯಾಟದಿಂದಾಗಿ ಪೂರ್ವ ವಲಯ ತಂಡ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 337 ರನ್‌ ಕಲೆಹಾಕಿತು.

ಉತ್ತರ ವಲಯಕ್ಕೆ 338 ರನ್‌ಗಳ ಸವಾಲು

338 ರನ್‌ಗಳ ಗುರಿ ಬೆನ್ನಟ್ಟಿದ ಉತ್ತರ ವಲಯಕ್ಕೆ ಇಲ್ಲಿಯೂ ರಿಯಾನ್ ಪರಾಗ್ ದುಸ್ವಪ್ನವಾಗಿ ಕಾಡಿದರು. ಉತ್ತರ ವಲಯ ತಂಡದಿಂದ ಸಾಘೀಕ ಹೋರಾಟ ಕಂಡು ಬಂದಿತ್ತಾದರೂ, ಯಾರೂ ಕೂಡ ಗೆಲುವಿನ ಇನ್ನಿಂಗ್ಸ್ ಆಡಲಿಲ್ಲ. ಆರಂಭಿಕ ಅಭಿಷೇಕ್ ಶರ್ಮಾ 44 ರನ್ ಬಾರಿಸಿದರೆ, 3ನೇ ಕ್ರಮಾಂಕದಲ್ಲಿ ಬಂದ ಹಿಮಾನ್ಶು ರಾಣಾ 40 ರನ್​ಗಳ ಕೊಡುಗೆ ನೀಡಿದರು. ತಂಡದ ಪರ ಅರ್ಧಶತಕದ ಇನ್ನಿಂಗ್ಸ್ ಆಡಿದ ಮಂದೀಪ್ ಸಿಂಗ್​ ಗೆಲುವಿಗಾಗಿ ಹೋರಾಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಇನ್ನು ಪೂರ್ವ ಪಲಯದ ಪರ ಬೌಲಿಂಗ್​ನಲ್ಲಿ ಮಿಂಚಿದ ರಿಯಾನ್ ತಮ್ಮ 10 ಓವರ್‌ಗಳಲ್ಲಿ ಕೇವಲ 57 ರನ್‌ ನೀಡಿ 4 ಪ್ರಮುಖ ವಿಕೆಟ್‌ಗಳನ್ನು ಪಡೆದರು. ಹಿಮಾಂಶು ರಾಣಾ, ಮನ್‌ದೀಪ್ ಸಿಂಗ್, ಶುಭಂ ರೋಹಿಲಾ ಮತ್ತು ಸಂದೀಪ್ ಶರ್ಮಾ ವಿಕೆಟ್ ಉರುಳಿಸುವಲ್ಲಿ ಪರಾಗ್ ಯಶಸ್ವಿಯಾದರು.

ಉತ್ತರ ವಲಯ ತಂಡ: ನಿತೀಶ್ ರಾಣಾ (ನಾಯಕ), ಅಭಿಷೇಕ್ ಶರ್ಮಾ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಹಿಮಾಂಶು ರಾಣಾ, ಮಂದೀಪ್ ಸಿಂಗ್, ನಿಶಾಂತ್ ಸಿಂಧು, ಶುಭಂ ರೋಹಿಲ್ಲಾ, ಹರ್ಷಿತ್ ರಾಣಾ, ಮಯಾಂಕ್ ಮಾರ್ಕಾಂಡೆ, ಸಂದೀಪ್ ಶರ್ಮಾ ಮತ್ತು ಮಯಾಂಕ್ ಯಾದವ್.

ಪೂರ್ವ ವಲಯ ತಂಡ: ಸೌರಭ್ ತಿವಾರಿ (ನಾಯಕ), ಅಭಿಮನ್ಯು ಈಶ್ವರನ್, ಉತ್ಕರ್ಷ್ ಸಿಂಗ್, ರಿಯಾನ್ ಪರಾಗ್, ವಿರಾಟ್ ಸಿಂಗ್, ಸುಬ್ರಾನ್ಶು ಸೇನಾಪತಿ, ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಮುಖ್ತಾರ್ ಹುಸೇನ್, ಆಕಾಶ್ ದೀಪ್ ಮತ್ತು ಮಣಿಶಂಕರ್ ಮುರಾಸಿಂಗ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:33 am, Sat, 29 July 23