Deodhar Trophy 2023: ದೇವಧರ್ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಮಯಾಂಕ್ ಪಡೆ..!

|

Updated on: Jul 29, 2023 | 10:09 AM

Deodhar Trophy 2023: ಈಶಾನ್ಯ ವಲಯ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿದ ಮಯಾಂಕ್ ಅಗರ್ವಾಲ್ ನೇತೃತ್ವದ ದಕ್ಷಿಣ ವಲಯ ತಂಡ ಲೀಗ್​​ನಲ್ಲಿ ಹ್ಯಾಟ್ರಿಕ್ ಗೆಲುವನ್ನು ದಾಖಲಿಸಿದೆ.

Deodhar Trophy 2023: ದೇವಧರ್ ಟ್ರೋಫಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ ಮಯಾಂಕ್ ಪಡೆ..!
ದಕ್ಷಿಣ ವಲಯ ತಂಡ
Follow us on

ಪುದುಚೇರಿಯಲ್ಲಿ ನಡೆದ ದೇವಧರ್ ಟ್ರೋಫಿಯ (Deodhar Trophy 2023) ಒಂಬತ್ತನೇ ಪಂದ್ಯದಲ್ಲಿ ಈಶಾನ್ಯ ವಲಯ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿದ ಮಯಾಂಕ್ ಅಗರ್ವಾಲ್ (Mayank Agarwal) ನೇತೃತ್ವದ ದಕ್ಷಿಣ ವಲಯ ತಂಡ (South Zone beat North East Zone) ಲೀಗ್​​ನಲ್ಲಿ ಹ್ಯಾಟ್ರಿಕ್ ಗೆಲುವನ್ನು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಈಶಾರನ್ಯ ವಲಯ ತಂಡ, ದಕ್ಷಿಣ ವಲಯ ತಂಡದ ಬೌಲರ್​ಗಳ ದಾಳಿಗೆ ತತ್ತರಿಸಿ, ಕೇವಲ 136 ರನ್​ಗಳಿಗೆ ಆಲೌಟ್ ಆಯಿತು. ಈ ಸಾಧಾರಣ ಗುರಿ ಬೆನ್ನಟ್ಟಿದ ದಕ್ಷಿಣ ವಲಯ ತಂಡ ಆರಂಭಿಕರಾದ ರೋಹನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಅವರ 95 ರನ್‌ಗಳ ಜೊತೆಯಾಟದಿಂದಾಗಿ ಕೇವಲ 1 ವಿಕೆಟ್‌ ಕಳೆದುಕೊಂಡು, 19.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು.

ಈಶಾನ್ಯ ವಲಯದ ಕಳಪೆ ಬ್ಯಾಟಿಂಗ್

ಈ ಪಂದ್ಯದಲ್ಲಿ ಈಶಾನ್ಯ ವಲಯ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದಕ್ಷಿಣ ವಲಯದ ಬೌಲಿಂಗ್ ಮುಂದೆ ಈಶಾನ್ಯ ತಂಡದ ಬ್ಯಾಟಿಂಗ್ ಕುಸಿತ ಕಂಡಿತು. ಹೀಗಾಗಿ ಈಶಾನ್ಯ ವಲಯದ ಪರ ನಾಲ್ವರು ಆಟಗಾರರು ಮಾತ್ರ ಎರಡಂಕಿ ತಲುಪುವಲ್ಲಿ ಯಶಸ್ವಿಯಾದರು. ತಂಡದ ಪರ ಫಿರೋಯಿಜಮ್ ಜೋತಿನ್ 40 ರನ್ ಬಾರಿಸಿದರೆ, ನಾಯಕ ಲ್ಯಾಂಗ್ಲೋನ್ಯಾಂಬಾ ಕೇಶಂಗ್ಬಾಮ್ 23, ಅಭಿಷೇಕ್ ಕುಮಾರ್ 15 ಮತ್ತು ರೆಕ್ಸ್ ಸಿಂಗ್ 14 ರನ್ ಕಲೆಹಾಕಿದರು. ಈ ನಾಲ್ವರನ್ನು ಹೊರತುಪಡಿಸಿ ಉಳಿದ 5 ಮಂದಿ ಎರಡಂಕಿ ತಲುಪಲು ಸಾಧ್ಯವಾಗಲಿಲ್ಲ.

Deodhar Trophy 2023: 11 ಭರ್ಜರಿ ಸಿಕ್ಸರ್​ ಸಹಿತ ಸಿಡಿಲಬ್ಬರದ ಶತಕ ಸಿಡಿಸಿದ ರಿಯಾನ್ ಪರಾಗ್..!

ಇನ್ನು ದಕ್ಷಿಣ ವಲಯದ ಪರ ಬೌಲಿಂಗ್​ನಲ್ಲಿ ಮಿಂಚಿದ ಸಾಯಿ ಕಿಶೋರ್ 3 ವಿಕೆಟ್ ಪಡೆದರೆ, ವಿದ್ವತ್ ಕಾವೇರಪ್ಪ ಕೂಡ 3 ಬ್ಯಾಟ್ಸ್‌ಮನ್‌ಗಳನ್ನು ವಾಪಸ್ ಕಳುಹಿಸಿದರು. ಅರ್ಜುನ್ ತೆಂಡೂಲ್ಕರ್, ವೈಶಾಕ್ ವಿಜಯಕುಮಾರ್, ವಾಷಿಂಗ್ಟನ್ ಸುಂದರ್ ಮತ್ತು ರೋಹಿತ್ ರಾಯುಡು ತಲಾ 1 ವಿಕೆಟ್ ಪಡೆದರು.

ದಕ್ಷಿಣ ವಲಯಕ್ಕೆ 9 ವಿಕೆಟ್ ಜಯ

ಈ ಅಲ್ಪ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ವಲಯ ತಂಡದ ಮೂವರು ಆರಂಭಿಕರು ಗೆಲುವಿನ ಇನ್ನಿಂಗ್ಸ್ ಆಡಿದರು. ಇದರಲ್ಲಿ ಆರಂಭಿಕರಾದ ರೋಹನ್ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಇಬ್ಬರೂ ಮೊದಲ ವಿಕೆಟ್‌ಗೆ 95 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ವೇಳೆ ಮಯಾಂಕ್ 46 ಎಸೆತಗಳಲ್ಲಿ 3 ಬೌಂಡರಿ ಸಹಿತ 32 ರನ್ ಗಳಿಸಿ ಔಟಾದರೆ, ನಂತರ ರೋಹನ್ ಮತ್ತು ಎನ್ ಜಗದೀಸನ್ ಅಜೇಯ 42 ರನ್‌ಗಳ ಜೊತೆಯಾಟ ನೀಡಿ ದಕ್ಷಿಣ ವಲಯಕ್ಕೆ ಜಯ ತಂದುಕೊಟ್ಟರು. ರೋಹನ್ 58 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ ಔಟಾಗದೆ 87 ರನ್ ಬಾರಿಸಿದರೆ, ಜಗದೀಶನ್ 15 ರನ್ ಗಳಿಸಿ ಅಜೇಯರಾಗಿ ಉಳಿದರು. ಈಶಾನ್ಯ ವಲಯ ಪರ ಇಮ್ಲಿವಾಟಿ ಲೆಮಟೂರ್ ಏಕೈಕ ವಿಕೆಟ್ ಪಡೆದರು.

ದಕ್ಷಿಣ ವಲಯಕ್ಕೆ ಹ್ಯಾಟ್ರಿಕ್ ಗೆಲುವು

ಈ ಗೆಲುವಿನೊಂದಿಗೆ ದಕ್ಷಿಣ ವಲಯ ತಂಡ ಹ್ಯಾಟ್ರಿಕ್ ಸಾಧನೆ ಮಾಡಿತು. ಜುಲೈ 24 ರಂದು ಉತ್ತರ ವಲಯ ತಂಡವನ್ನು 185 ರನ್‌ಗಳಿಂದ ಸೋಲಿಸಿದ್ದ, ದಕ್ಷಿಣ ವಲಯ ಆ ನಂತರ ಜುಲೈ 26 ರಂದು ಪಶ್ಚಿಮ ವಲಯ ತಂಡವನ್ನು 12 ರನ್‌ಗಳಿಂದ ಸೋಲಿಸಿತು. ಇದೀಗ ಈಶಾನ್ಯ ವಲಯದ ವಿರುದ್ಧ 9 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ