9 ಶತಕ, 12 ಅರ್ಧಶತಕ, 2000 ರನ್ಸ್: 6 ವರ್ಷಗಳಿಂದ ಚಾನ್ಸ್ ಎದುರು ನೋಡುತ್ತಿರುವ ಕನ್ನಡಿಗ

|

Updated on: Jan 16, 2025 | 12:13 PM

Devdutt padikkal: ದೇವದತ್ ಪಡಿಕ್ಕಲ್ ಈಗಾಗಲೇ ಟೀಮ್ ಇಂಡಿಯಾ ಪರ ಟೆಸ್ಟ್ ಮತ್ತು ಟಿ20 ಪಂದ್ಯಗಳನ್ನಾಡಿದ್ದಾರೆ. ಆದರೆ ಅವರು ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವುದು ಲಿಸ್ಟ್ ಎ ಪಂದ್ಯಗಳಲ್ಲಿ ಎಂಬುದು ವಿಶೇಷ. ಇದಾಗ್ಯೂ ಭಾರತ ಏಕದಿನ ತಂಡದಲ್ಲಿ ದೇವದತ್ ಪಡಿಕ್ಕಲ್​ಗೆ ಈವರೆಗೆ ಚಾನ್ಸ್ ನೀಡಲಾಗಿಲ್ಲ.

9 ಶತಕ, 12 ಅರ್ಧಶತಕ, 2000 ರನ್ಸ್: 6 ವರ್ಷಗಳಿಂದ ಚಾನ್ಸ್ ಎದುರು ನೋಡುತ್ತಿರುವ ಕನ್ನಡಿಗ
Devdutt Padikkal
Follow us on

ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿ ಆರಂಭಕ್ಕೆ ಇನ್ನು ಕೇವಲ ತಿಂಗಳು ಮಾತ್ರ ಉಳಿದಿವೆ. ಇತ್ತ ದೇಶೀಯ ಅಂಗಳದಲ್ಲಿ ವಿಜಯ ಹಝಾರೆ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಕೆಲ ಆಟಗಾರರು ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನವನ್ನು ಎದುರು ನೋಡುತ್ತಿದ್ದಾರೆ. ಇವರಲ್ಲಿ ಕರ್ನಾಟಕದ ಯುವ ದಾಂಡಿಗ ದೇವದತ್ ಪಡಿಕ್ಕಲ್ ಕೂಡ ಒಬ್ಬರು.

ದೇವದತ್ ಪಡಿಕ್ಕಲ್ ಈ ಬಾರಿಯ ವಿಜಯ ಹಝಾರೆ ಟೂರ್ನಿಯಲ್ಲೂ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ನಂತರ, ಕರ್ನಾಟಕ ತಂಡವನ್ನು ಕೂಡಿಕೊಂಡ ಪಡಿಕ್ಕಲ್ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್​ನಲ್ಲಿ ಕಣಕ್ಕಿಳಿದಿದ್ದಾರೆ. ಈ ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ ಕರ್ನಾಟಕ ತಂಡ ಫೈನಲ್​ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಬ್ಯಾಕ್ ಟು ಬ್ಯಾಕ್ 50+ ಸ್ಕೋರ್:

ದೇವದತ್ ಪಡಿಕ್ಕಲ್ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಕರ್ನಾಟಕ ತಂಡವನ್ನು ಸೇರಿಕೊಂಡಿದ್ದರು. ಅದರಂತೆ ವಡೋದರ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕಣಕ್ಕಿಳಿದ ಪಡಿಕ್ಕಲ್ 102 ರನ್ ಬಾರಿಸಿ ಮಿಂಚಿದ್ದರು.

ಇನ್ನು ಸೆಮಿಫೈನಲ್ ಪಂದ್ಯದಲ್ಲೂ ಆರಂಭಿಕನಾಗಿ ಬ್ಯಾಟ್ ಬೀಸಿದ ಪಡಿಕ್ಕಲ್ 86 ರನ್ ಸಿಡಿಸಿ ಮಿಂಚಿದ್ದಾರೆ. ಈ ಭರ್ಜರಿ ಬ್ಯಾಟಿಂಗ್​ನೊಂದಿಗೆ ಕರ್ನಾಟಕ ತಂಡವನ್ನು ಫೈನಲ್​ಗೇರಿಸುವಲ್ಲಿ ಯುವ ದಾಂಡಿಗ ಯಶಸ್ವಿಯಾಗಿದ್ದಾರೆ.

ಅವಕಾಶಕ್ಕಾಗಿ ಕಾಯುತ್ತಿರುವ ಪಡಿಕ್ಕಲ್:

ದೇವದತ್ ಪಡಿಕ್ಕಲ್ ಏಕದಿನ ಕ್ರಿಕೆಟ್​ಗೆ ಹೇಳಿ ಮಾಡಿಸಿದ ಬ್ಯಾಟ್ಸ್​ಮನ್ ಎಂಬ ಮಾತುಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದಕ್ಕೆ ಸಾಕ್ಷಿ ಯುವ ದಾಂಡಿಗ ಲಿಸ್ಟ್​-ಎ ಕ್ರಿಕೆಟ್​ನಲ್ಲಿ ಕಲೆಹಾಕಿರುವ ರನ್​ಗಳ ರಾಶಿ.

2019 ರಲ್ಲಿ ಲಿಸ್ಟ್​-ಎ ಕ್ರಿಕೆಟ್​ಗೆ ಪದಾರ್ಪಣೆ ಮಾಡಿರುವ ದೇವದತ್ ಪಡಿಕ್ಕಲ್ ಈವರೆಗೆ 31 ಇನಿಂಗ್ಸ್ ಆಡಿದ್ದಾರೆ. ಈ ವೇಳೆಗೆ 9 ಶತಕ ಹಾಗೂ 12 ಅರ್ಧಶತಕಗಳನ್ನು ಬಾರಿಸಿದ್ದಾರೆ. ಅಂದರೆ 31 ಇನಿಂಗ್ಸ್​ಗಳಲ್ಲಿ ಪಡಿಕ್ಕಲ್ 21 ಬಾರಿ 50+ ಸ್ಕೋರ್​ ಗಳಿಸಿದ್ದಾರೆ.

ಹಾಗೆಯೇ 82.52 ಸರಾಸರಿಯಲ್ಲಿ ರನ್ ಗಳಿಸಿರುವ ದೇವದತ್ ಪಡಿಕ್ಕಲ್ ಈವರೆಗೆ 2063 ರನ್ ಕಲೆಹಾಕಿದ್ದಾರೆ. ಇಂತಹ ಭರ್ಜರಿ ಪ್ರದರ್ಶನದೊಂದಿಗೆ ದೇವದತ್ ಪಡಿಕ್ಕಲ್ ಕಳೆದ ಕೆಲ ವರ್ಷಗಳಿಂದ ಟೀಮ್ ಇಂಡಿಯಾದ ಬಾಗಿಲು ಬಡಿಯುತ್ತಿದ್ದಾರೆ. ಇದಾಗ್ಯೂ ಕಳೆದ 5 ವರ್ಷಗಳಿಂದ ಪಡಿಕ್ಕಲ್​ಗೆ ಏಕದಿನ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ ಎಂಬುದೇ ಅಚ್ಚರಿ.

ದೇಶೀಯ ಅಂಗಳದಲ್ಲಿ ಮಿಂಚಿಂಗ್:

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ದೇವದತ್ ಪಡಿಕ್ಕಲ್ ಮೊದಲ ಬಾರಿಗೆ ಬ್ಯಾಟ್ ಬೀಸಿದ್ದು 2018 ರಲ್ಲಿ. ಅಂದಿನಿಂದ ಈವರೆಗೆ 41 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು ಒಟ್ಟು 4664 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 6 ಶತಕ ಮತ್ತು 17 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾ ಮಹಿಳೆಯರ ಅಬ್ಬರಕ್ಕೆ ಪುರುಷರ ದಾಖಲೆಯೇ ಉಡೀಸ್

ಹಾಗೆಯೇ 2019 ರಲ್ಲಿ ತಮ್ಮ ಲಿಸ್ಟ್​-ಎ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿರುವ ಪದಿಕ್ಕಲ್ 32 ಪಂದ್ಯಗಳಲ್ಲಿ 31 ಇನಿಂಗ್ಸ್ ಆಡಿದ್ದು, ಈ ವೇಳೆ 91.20 ಸ್ಟ್ರೈಕ್ ರೇಟ್​ನಲ್ಲಿ ಒಟ್ಟು 2063 ರನ್ ಕಲೆಹಾಕಿದ್ದಾರೆ. ಅಲ್ಲದೆ 2021ರ ವಿಜಯ ಹಝಾರೆ ಟೂರ್ನಿಯಲ್ಲಿ ಸತತ 4 ಶತಕಗಳನ್ನು ಬಾರಿಸಿ ಮಿಂಚಿದ್ದರು. ಇದೀಗ ಭರ್ಜರಿ ಫಾರ್ಮ್​ನಲ್ಲಿರುವ ದೇವದತ್ ಪಡಿಕ್ಕಲ್ ಭಾರತ ಏಕದಿನ ತಂಡದಲ್ಲಿ ಅವಕಾಶವನ್ನು ಎದುರು ನೋಡುತ್ತಿದ್ದಾರೆ.

 

Published On - 12:11 pm, Thu, 16 January 25