ವಿರಾಟ್ ಕೊಹ್ಲಿಯ ಹಳೆಯ ನಿಯಮಗಳನ್ನು ಜಾರಿಗೊಳಿಸಲು ಮುಂದಾದ ಬಿಸಿಸಿಐ

Team India: ಟೀಮ್ ಇಂಡಿಯಾ ಆಟಗಾರರು ಪದೇ ಪದೇ ಫಿಟ್​ನೆಸ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಲು ಇದೀಗ ಬಿಸಿಸಿಐ ಹಳೆಯ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಈ ನಿಯಮದ ಪ್ರಕಾರ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ಫಿಟ್​ನೆಸ್ ಟೆಸ್ಟ್ ಪಾಸಾಗಲೇಬೇಕು. ಒಂದು ವೇಳೆ ಫಿಟ್​ನೆಸ್ ಟೆಸ್ಟ್​ನಲ್ಲಿ ಫೇಲ್ ಆದರೆ ತಂಡದಿಂದ ಹೊರಬೀಳಲಿದ್ದಾರೆ.

ವಿರಾಟ್ ಕೊಹ್ಲಿಯ ಹಳೆಯ ನಿಯಮಗಳನ್ನು ಜಾರಿಗೊಳಿಸಲು ಮುಂದಾದ ಬಿಸಿಸಿಐ
Yo Yo Test
Follow us
ಝಾಹಿರ್ ಯೂಸುಫ್
|

Updated on: Jan 16, 2025 | 3:08 PM

ಟೀಮ್ ಇಂಡಿಯಾ ಆಯ್ಕೆಗೆ ಇಷ್ಟು ದಿನ ಒಂದು ಲೆಕ್ಕ… ಇನ್ಮುಂದೆ ಮತ್ತೊಂದು ಲೆಕ್ಕ. ಏಕೆಂದರೆ ಬಿಸಿಸಿಐ ತನ್ನ ಹಳೆಯ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಯೋ-ಯೋ ಟೆಸ್ಟ್​ನಲ್ಲಿ ಪಾಸ್ ಆಗಲೇಬೇಕು. ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕರಾಗಿದ್ದ ವೇಳೆ ತಂಡದ ಆಯ್ಕೆಗೆ ಯೋ ಯೋ ಟೆಸ್ಟ್ ಕಡ್ಡಾಯ ಮಾಡಲಾಗಿತ್ತು. ಆದರೆ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಈ ನಿಯಮವನ್ನು ತೆಗೆದು ಹಾಕಲಾಯಿತು.

ಈ ನಿಯಮವನ್ನು ಕೈ ಬಿಟ್ಟ ಬಳಿಕ ಟೀಮ್ ಇಂಡಿಯಾದ ಹಲವು ಆಟಗಾರರು ಫಿಟ್​ನೆಸ್ ಸಮಸ್ಯೆಗೆ ಒಳಗಾಗಿದ್ದಾರೆ. ಅದು ರವೀಂದ್ರ ಜಡೇಜಾ ಆಗಿರಬಹುದು, ಇಲ್ಲ ಶುಭ್​ಮನ್ ಗಿಲ್ ಅಥವಾ ಮೊಹಮ್ಮದ್ ಶಮಿ ಇರಬಹುದು. ಇದೀಗ ಜಸ್​ಪ್ರೀತ್ ಬುಮ್ರಾ ಕೂಡ ಫಿಟ್​ನೆಸ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಹಾಗೆಯೇ ರೋಹಿತ್ ಶರ್ಮಾ ಸೇರಿದಂತೆ ಕೆಲ ಆಟಗಾರರ ಫಿಟ್​ನೆಸ್ ವಿಷಯದಲ್ಲಿ ಹಿಂದೆ ಉಳಿದಿದ್ದಾರೆ. ಇವೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐಮತ್ತೆ ಯೋ ಯೋ ಟೆಸ್ಟ್​ ಅನ್ನು ಪರಿಚಯಿಸಲು ಚಿಂತಿಸಿದೆ. ಈ ಮೂಲಕ ಟೀಮ್ ಇಂಡಿಯಾ ಆಟಗಾರರ ಫಿಟ್​ನೆಸ್ ಮೇಲೂ ಕೂಡ ನಿಗಾಯಿಡಲು ಬಿಸಿಸಿಐ ಚರ್ಚಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದಾಗ್ಯೂ ಈ ನಿಯಮ ಚಾಂಪಿಯನ್ಸ್ ಟ್ರೋಫಿ ತಂಡದ ಆಯ್ಕೆಗೆ ಅನ್ವಯವಾಗುವ ಸಾಧ್ಯತೆಯಿಲ್ಲ. ಏಕೆಂದರೆ ಐಸಿಸಿ ಟೂರ್ನಿಗೆ ಇನ್ನು ಕೇವಲ ಒಂದು ತಿಂಗಳು ಮಾತ್ರ ಉಳಿದಿದ್ದು, ಇಂತಹ ಸಂದರ್ಭದಲ್ಲಿ ಆಟಗಾರರ ಮೇಲೆ ಫಿಟ್​ನೆಸ್ ಟೆಸ್ಟ್​ ಒತ್ತಡ ಹೇರುವ ಸಾಧ್ಯತೆ ಇಲ್ಲ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಬಳಿಕ ಟೀಮ್ ಇಂಡಿಯಾ ಆಯ್ಕೆಗೆ ಯೋ ಯೋ ಟೆಸ್ಟ್ ಕಡ್ಡಾಯ ಮಾಡುವ ಸಾಧ್ಯತೆಯಿದೆ.

ಏನಿದು ಯೋ ಯೋ ಟೆಸ್ಟ್?

ಟೀಮ್ ಇಂಡಿಯಾ ಆಟಗಾರರ ಫಿಟ್​ನೆಸ್​ ಟೆಸ್ಟ್​ ಹಲವು ದೈಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಯೋ ಯೋ ಟೆಸ್ಟ್ ಪಾಸಾಗಲೇಬೇಕು. ಇಲ್ಲಿ ಕ್ರಮಬದ್ಧ ಹಾಗೂ ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಈ ಫಿಟ್‍ನೆಸ್ ಟೆಸ್ಟ್​ನಲ್ಲಿ 20 ಮೀಟರ್​ ಅಳತೆಯಲ್ಲಿ ಎರಡು ಕೋನಗಳನ್ನು ನೇರವಾಗಿ ಇರಿಸಲಾಗಿರುತ್ತದೆ. ಇಲ್ಲಿ ಆಟಗಾರನು ಓಟವನ್ನು ಆರಂಭಿಸಿ, ಎರಡು ಲೈನ್​​ಗಳಲ್ಲಿಟ್ಟಿರುವ ಕೋನಗಳ ಬೀಪ್ ಧ್ವನಿಯನ್ನು ಅನುಸರಿಸಿ ತನ್ನ ದೂರವನ್ನು ಕ್ರಮಿಸಬೇಕಾಗುತ್ತದೆ.

ಹಾಗೆಯೇ ಈ ಟೆಸ್ಟ್​ನಲ್ಲಿ 8.15 ನಿಮಿಷದೊಳಗೆ 2 ಕಿಲೋಮೀಟರ್ ಓಡಬೇಕಾಗುತ್ತದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಫೇಲ್ ಎಂದು ಪರಿಗಣಿಸಲಾಗುತ್ತದೆ.

ಇಲ್ಲಿ ಅಂಕಗಳು ತಂತ್ರಾಂಶ ಆಧಾರಿತವಾಗಿದ್ದು, ಹೀಗಾಗಿ ಯಾವುದೇ ಸುತ್ತಿನಲ್ಲಿ ಎಡವಿದರೂ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿಯೇ ಯೋ ಯೋ ಟೆಸ್ಟ್​ ಪಾಸಾಗುವುದು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಅಗ್ನಿ ಪರೀಕ್ಷೆ.

ಇದನ್ನೂ ಓದಿ: ಟೀಮ್ ಇಂಡಿಯಾ ಮಹಿಳೆಯರ ಅಬ್ಬರಕ್ಕೆ ಪುರುಷರ ದಾಖಲೆಯೇ ಉಡೀಸ್

ಇದೀಗ ಈ ನಿಯಮವನ್ನು ಮತ್ತೆ ಜಾರಿಗೊಳಿಸುವ ಮೂಲಕ ಬಿಸಿಸಿಐ ಆಟಗಾರರ ಫಿಟ್​ನೆಸ್ ಅನ್ನು ಹೆಚ್ಚಿಸಲು ಮುಂದಾಗಿದ್ದು, ಈ ಮೂಲಕ ಬಲಿಷ್ಠ ಟೀಮ್ ಇಂಡಿಯಾ ಕಟ್ಟುವ ಇರಾದೆಯಲ್ಲಿದೆ.