ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಪತ್ನಿ ಧನಶ್ರೀ ವರ್ಮಾ ಅವರಿಂದ ಚಹಲ್ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಸೆಲೆಬ್ರಿಟಿ ದಂಪತಿಗಳು ಬೇರ್ಪಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದಾಗ್ಯೂ ಈ ಬಗ್ಗೆ ಚಹಲ್ ಆಗಲಿ, ಧನಶ್ರೀ ವರ್ಮಾ ಅವರಾಗಲಿ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಈ ವದಂತಿಯು ಮಹತ್ವ ಪಡೆದುಕೊಳ್ಳುತ್ತಿದ್ದಂತೆ ಧನಶ್ರೀ ವರ್ಮಾ ಮೌನ ಮುರಿದಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಟ್ರೋಲ್ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಊಹಾಪೋಹಗಳ ನಡುವೆ, ಜನವರಿ 8 ರಂದು, ಧನಶ್ರೀ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ನನಗೆ ಮತ್ತು ನನ್ನ ಕುಟುಂಬಕ್ಕೆ ಕಳೆದ ಕೆಲ ದಿನಗಳು ತುಂಬಾ ಕಠಿಣ ದಿನಗಳಾಗಿವೆ. ಆಧಾರರಹಿತ ಬರವಣಿಗೆ, ಸತ್ಯ-ಪರಿಶೋಧವಿಲ್ಲದ ಬರಹಗಳು ಮತ್ತು ದ್ವೇಷವನ್ನು ಹರಡುವ ಟ್ರೋಲ್‌ಗಳಿಂದ ನನ್ನ ಗೌರವವನ್ನು ಕೊಲ್ಲುವ ಪ್ರಯತ್ನ ಮಾಡುತ್ತಿದ್ದಾರೆ.
ಈ ಹೆಸರುಗಳಿಸಲು ಮತ್ತು ಖ್ಯಾತಿಯನ್ನು ಪಡೆಯಲು ನಾನು ಹಲವು ವರ್ಷಗಳಿಂದ ಶ್ರಮಿಸಿದ್ದೇನೆ. ನನ್ನ ಮೌನ ನನ್ನ ದೌರ್ಬಲ್ಯವಲ್ಲ. ಅದು ನನ್ನ ಶಕ್ತಿ. ನಕಾರಾತ್ಮಕತೆಯು ಆನ್‌ಲೈನ್‌ನಲ್ಲಿ ಸುಲಭವಾಗಿ ಹರಡುತ್ತದೆ. ಇದು ಇತರರನ್ನು ಮೇಲಕ್ಕೆತ್ತಲು ಧೈರ್ಯ ನೀಡುತ್ತದೆ.
ನಾನು ನನ್ನ ಸತ್ಯದ ಮೇಲೆ ಕೇಂದ್ರೀಕರಿಸಲು ಮತ್ತು ನನ್ನ ಮೌಲ್ಯಗಳನ್ನು ಹಿಡಿದಿಟ್ಟುಕೊಂಡು ಮುಂದುವರಿಯುವುದನ್ನು ಆಯ್ಕೆ ಮಾಡುತ್ತೇನೆ. ಯಾವುದೇ ಪುರಾವೆಗಳಿಲ್ಲದಿದ್ದರೂ ಸತ್ಯವು ಅದರ ಸ್ಥಾನದಲ್ಲಿ ದೃಢವಾಗಿ ನಿಂತಿದೆ. ಓಂ ನಮಃ ಶಿವಾಯ… ಎಂದು ಧನಶ್ರೀ ವರ್ಮಾ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಬೆನ್ನಲ್ಲೇ ಮತ್ತೆ ಧನಶ್ರೀ ವರ್ಮಾ ಹಾಗೂ ಯುಜ್ವೇಂದ್ರ ಚಹಲ್ ನಡುವಣ ಸಂಬಂಧದ ಬಗ್ಗೆ ಮತ್ತೆ ಪ್ರಶ್ನೆಗಳು ಎದ್ದಿವೆ. ಏಕೆಂದರೆ ಕಳೆದ ಕೆಲ ದಿನಗಳಿಂದ ಡೈವೋರ್ಸ್ ಸುದ್ದಿಗಳು ಹರಿದಾಡುತ್ತಿದ್ದರೂ, ಧನಶ್ರೀ ವರ್ಮಾ ಈ ಬಗ್ಗೆ ತಮ್ಮ ಪೋಸ್ಟ್ನಲ್ಲಿ ಸ್ಪಷ್ಟನೆ ನೀಡಿಲ್ಲ.
ಅಲ್ಲದೆ ಯುಜ್ವೇಂದ್ರ ಚಹಲ್ ಅವರ ಹೆಸರನ್ನು ಸಹ ಪ್ರಸ್ತಾಪಿಸಿಲ್ಲ. ಹೀಗಾಗಿಯೇ ಸೆಲೆಬ್ರಿಟಿ ದಂಪತಿಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಗಳು ಮತ್ತೆ ಮುನ್ನಲೆಗೆ ಬಂದಿದೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾದ ಟಾಪ್ ಆರ್ಡರ್ ಕನ್ಫರ್ಮ್
ಅಂದಹಾಗೆ ಯುಜ್ವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ 2020 ರಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ನಾಲ್ಕು ವರ್ಷಗಳ ವೈಯುಕ್ತಿಕ ಜೀವನದ ಬಳಿಕ ಇಬ್ಬರು ಬೇರ್ಪಡುತ್ತಿದ್ದಾರೆ ಎಂಬ ಗುಲ್ಲೆದ್ದಿದೆ.