VHT 2025-26: ಸತತ 5ನೇ ಶತಕ ಸಿಡಿಸಿದ ಸಿಎಸ್​ಕೆ ಕೈಬಿಟ್ಟ ಆಟಗಾರ

Dhruv Shorey's Record: ಧ್ರುವ್ ಶೋರೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಐದನೇ ಶತಕ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ. ಹೈದರಾಬಾದ್ ವಿರುದ್ಧ 109 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟ ಅವರು, ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರರಾಗಿದ್ದಾರೆ. ಐಪಿಎಲ್‌ನಲ್ಲಿ ಅವಕಾಶ ವಂಚಿತರಾಗಿದ್ದರೂ, ಲಿಸ್ಟ್ ಎ, ಪ್ರಥಮ ದರ್ಜೆ ಹಾಗೂ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದಾರೆ.

VHT 2025-26: ಸತತ 5ನೇ ಶತಕ ಸಿಡಿಸಿದ ಸಿಎಸ್​ಕೆ ಕೈಬಿಟ್ಟ ಆಟಗಾರ
Dhruv Shorey

Updated on: Dec 26, 2025 | 8:31 PM

ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ಎರಡನೇ ಪಂದ್ಯ ಇಂದು ನಡೆಯಿತು. ಮೊದಲ ಪಂದ್ಯದಂದು ಮೊದಲ ದಿನವೇ ಬರೋಬ್ಬರಿ 21 ಶತಕಗಳು ದಾಖಲಾಗಿದ್ದವು. ಇದೀಗ ಎರಡನೇ ದಿನದಲ್ಲೂ ಹಲವು ಆಟಗಾರರು ಶತಕದ ಸಾಧನೆ ಮಾಡಿದರು. ಅವರಲ್ಲಿ ಒಬ್ಬರು ಧ್ರುವ್ ಶೋರೆ. ಈ ಟೂರ್ನಿಯಲ್ಲಿ ವಿದರ್ಭ ತಂಡದ ಪರ ಆಡುತ್ತಿರುವ ಧ್ರುವ್ ಶೋರೆ (Dhruv Shorey) ರಾಜ್‌ಕೋಟ್‌ನಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೇವಲ 77 ಎಸೆತಗಳಲ್ಲಿ ಅಜೇಯ 109 ರನ್ ಬಾರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಶೋರೆ ಶತಕದ ನೆರವಿನಿಂದ ವಿದರ್ಭ, ಹೈದರಾಬಾದ್ ತಂಡವನ್ನು 89 ರನ್‌ಗಳಿಂದ ಸೋಲಿಸಿದರೆ, ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಧ್ರುವ್ ಶೋರೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು. ಈ ಅಜೇಯ ಶತಕದೊಂದಿಗೆ ಧ್ರುವ್ ಶೋರೆ ಏಕದಿನ ಕ್ರಿಕೆಟ್‌ನಲ್ಲಿ ಸತತ ಐದನೇ ಶತಕ ಬಾರಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಧ್ರುವ್ ಶೋರೆ ಪರಾಕ್ರಮ

ಕಳೆದ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿಯ ಕೊನೆಯ ಮೂರು ಪಂದ್ಯಗಳಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದ ಶೋರೆ, ಇದೀಗ ಈ ಆವೃತ್ತಿಯ ಮೊದಲ ಎರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದಾರೆ. ಶೋರೆ ಕಳೆದ ಐದು ಇನ್ನಿಂಗ್ಸ್​ಗಳಲ್ಲಿ ಕ್ರಮವಾಗಿ 110, 114, 118, 136, ಮತ್ತು 109 ರನ್​ಗಳ ಇನ್ನಿಂಗ್ಸ್‌ ಆಡಿದ್ದಾರೆ. ಈ ಮೂಲಕ ಸತತ ಐದು ಏಕದಿನ ಶತಕಗಳನ್ನು ಸಿಡಿಸಿದ ಎರಡನೇ ಭಾರತೀಯ ಎನಿಸಿಕೊಂಡಿದ್ದಾರೆ. ಶೋರೆಗಿಂತ ಮೊದಲು ತಮಿಳುನಾಡಿನ ಬ್ಯಾಟ್ಸ್‌ಮನ್ ನಾರಾಯಣ್ ಜಗದೀಶನ್ 2022-23ರ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ್ದರು. ಸತತ ಐದು ಶತಕಗಳೊಂದಿಗೆ ಧ್ರುವ್ ಶೋರೆ, ಕುಮಾರ್ ಸಂಗಕ್ಕಾರ, ಅಲ್ವಿರೊ ಪೀಟರ್ಸನ್, ದೇವದತ್ ಪಡಿಕ್ಕಲ್ ಮತ್ತು ಕರುಣ್ ನಾಯರ್ ಅವರನ್ನು ಹಿಂದಿಕ್ಕಿದ್ದಾರೆ. ಮುಂದಿನ ಪಂದ್ಯದಲ್ಲಿ ಶೋರೆ ಮತ್ತೊಂದು ಶತಕ ಗಳಿಸಿದರೆ, ಏಕದಿನ ಕ್ರಿಕೆಟ್‌ನಲ್ಲಿ ಸತತ ಆರು ಶತಕಗಳನ್ನು ಗಳಿಸಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಸೃಷ್ಟಿಸಲಿದ್ದಾರೆ.

ಕೇವಲ 2 ಪಂದ್ಯಗಳಲ್ಲಿ ಅವಕಾಶ ನೀಡಿದ್ದ ಸಿಎಸ್​ಕೆ

2018 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದ ಧ್ರುವ್ ಶೋರೆ ಅವರನ್ನು ಸಿಎಸ್​ಕೆ ಖರೀದಿ ಮಾಡಿತ್ತು. ಆದರೆ ಆ ಆವೃತ್ತಿಯಲ್ಲಿ ಅವರಿಗೆ ಕೇವಲ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತು. ಮುಂದಿನ ಆವೃತ್ತಿಯಲ್ಲೂ ಕೇವಲ ಒಂದು ಪಂದ್ಯವನ್ನು ಆಡಿದ್ದ ಧ್ರುವ್ ಶೋರೆ ಅವರನ್ನು ಆ ನಂತರ ಸಿಎಸ್‌ಕೆ ತಂಡದಿಂದ ಬಿಡುಗಡೆ ಮಾಡಿತ್ತು. ಆ ಬಳಿಕ ಯಾವ ತಂಡವೂ ಧ್ರುವ್ ಶೋರೆ ಅವರನ್ನು ಖರೀದಿಸಿ ಆಡುವ ಅವಕಾಶ ಮಾಡಿಕೊಟ್ಟಿಲ್ಲ.

ಆದಾಗ್ಯೂ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರೆಸಿರುವ ಧ್ರುವ್ ಶೋರೆ ಏಳು ಶತಕಗಳು ಸೇರಿದಂತೆ 2,848 ರನ್ ಗಳಿಸಿದ್ದಾರೆ. ಹಾಗೆಯೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 15 ಶತಕಗಳನ್ನು ಬಾರಿಸಿರುವ ಶೋರೆ, ಸುಮಾರು 5,500 ರನ್‌ಗಳನ್ನು ಕಲೆಹಾಕಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿಯೂ ತಮ್ಮ ಛಾಪೂ ಮೂಡಿಸಿರುವ ಅವರು 1,236 ರನ್‌ ಸಿಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ