ಸಿಂಹಳೀಯರ ನಾಡಿಗೆ ಪ್ರವಾಸ ಬೆಳೆಸಿರುವ ಅಫ್ಘಾನಿಸ್ತಾನ ತಂಡ ಶ್ರೀಲಂಕಾ (Sri Lanka vs Afghanistan) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತ್ತು. ಆದರೀಗ ದ್ವಿತೀಯ ಏಕದಿನದಲ್ಲಿ ಸೋಲುಂಡಿದೆ. ಲಂಕಾ ಆಟಗಾರರ ಅಬ್ಬರದ ಬ್ಯಾಟಿಂಗ್ – ಬೌಲಿಂಗ್ಗೆ ತತ್ತರಿಸಿದ ಅಫ್ಘಾನ್ ತಂಡ ಹೀನಾಯ ಸೋಲು ಕಂಡಿದೆ. ಹಂಬನ್ತೊಟಾದ ಮಹಿಂದಾ ರಾಜಪಕ್ಸಾ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ (ODI Match) ಲಂಕಾ ಆಟಗಾರರು ಸಂಘಟಿತ ಪ್ರದರ್ಶನ ತೋರಿ 132 ರನ್‌ಗಳ ಜಯ ಸಾಧಿಸಿದರು. ಈ ಗೆಲುವಿನ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ 1-1 ಅಂಕಗಳ ಅಂತರದಿಂದ ಸಮಬಲದಲ್ಲಿದೆ.
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಉತ್ತಮ ಆರಂಭ ಪಡೆದುಕೊಂಡಿತು. ಓಪನರ್ಗಳಾದ ಪತುಮ್ ನಿಸ್ಸಂಕ (43) ಹಾಗೂ ಕರುಣಾರತ್ನೆ (52) ಮೊದಲು ವಿಕೆಟ್‌ಗೆ 82 ರನ್ ಕಲೆಹಾಕುವ ಮೂಲಕ ಅತ್ಯುತ್ತಮ ಅಡಿಪಾಯ ಹಾಕಿಕೊಟ್ಟರು. ನಂತರದಲ್ಲಿ ಬಂದ ಕುಸಲ್ ಮೆಂಡಿಸ್ ಸಹ ಜವಾಬ್ದಾರಿಯ ಆಟವಾಡಿದರು. ಅಫ್ಘನ್ ಬೌಲರ್‌ಗಳ ಬೆಂಡೆತ್ತಿದ ಕರುಣಾರತ್ನೆ 75 ಎಸೆತಗಳಲ್ಲಿ 7 ಫೋರ್, 1 ಸಿಕ್ಸ್ ಸಹಿತ 78 ರನ್ ಸಿಡಿಸಿದರು.
IPL 2024: ಮತ್ತೆ ಬದಲಾಗಲಿದೆಯಾ RCB ತಂಡದ ನಾಯಕತ್ವ..?
ಬಳಿಕ ಬಂದ ಸಮರವಿಕ್ರಮ (44), ಧನಂಜಯ ಡಿಸಿಲ್ವಾ (29), ನಾಯಕ ದಸನ್ ಶನಕ (23) ಹಾಗೂ ವನಿಂದು ಹಸರಂಗ (29) ಉಪಯುಕ್ತ ರನ್‌ಗಳಿಸಿದರು. ಪರಿಣಾಮ ಲಂಕಾ ಪಡೆ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 323 ರನ್ ಕಲೆಹಾಕಿತು. ಅಫ್ಘಾನಿಸ್ತಾನದ ಪರ ಫರೀದ್ ಅಹ್ಮದ್, ಮೊಹಮ್ಮದ್ ನಬಿ ತಲಾ 2 ವಿಕೆಟ್ ಪಡೆದರು.
ಕಠಿಣ ಟಾರ್ಗೆಟ್ ಬೆನ್ನಟ್ಟಿದ ಅಫ್ಘಾನಿಸ್ತಾನ ಬೌಲರ್‌ಗಳ ದಾಳಿಗೆ ಕುಸಿಯಿತು. ಪ್ರವಾಸಿ ತಂಡದ ಪರವಾಗಿ ಆರಂಭಿಕ ಬ್ಯಾಟರ್ ಇಬ್ರಾಹಿಂ ಜದ್ರಾನ್ (54) ಹಾಗೂ ನಾಯಕ ಹಸ್ಮತುಲ್ಲಾ ಶಹೀದಿ (57) ಅರ್ಧಶತಕದ ನಡುವೆಯೂ ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. 42.1 ಓವರ್‌ಗಳಲ್ಲಿ 191 ರನ್‌ಗಳಿಸಿ ಆಲೌಟ್ ಆಗುವ ಮೂಲಕ 132 ರನ್‌ಗಳ ಭಾರೀ ಅಂತರದ ಸೋಲು ಕಂಡಿತು. ಒಂದು ಹಂತದಲ್ಲಿ 143ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಅಫ್ಘಾನ್ ಪಡೆ 191 ರನ್‌ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಶ್ರೀಲಂಕಾ ಪರವಾಗಿ ವನಿಂದು ಹಸರಂಗ ಹಾಗೂ ಧನಂಜಯ ಡಿಸಿಲ್ವ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಎರಡು ವಿಕೆಟ್ ದುಶ್ಮಂತ ಚಮೀರ ಪಾಲಾದರೆ ಮಥೀಶ ತೀಕ್ಷಣ ಹಾಗೂ ನಾಯಕ ದಾಸುನ್ ಶನಕಗೆ ಒಂದು ವಿಕೆಟ್ ದೊರೆಯಿತು. ಇದೀಗ 1-1 ಅಂತರದಲ್ಲಿ ಸರಣಿ ಸಮಬಲ ಸಾಧಿಸಿರುವುದರಿಂದ ಜೂನ್ 7 ರಂದು ನಡೆಯಲಿರುವ ಕೊನೆಯ ಏಕದಿನ ಪಂದ್ಯ ರೋಚಕತೆ ಸೃಷ್ಟಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ