ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಈ ಬಾರಿಯ ಐಪಿಎಲ್ನೊಂದಿಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್ ಸೀಸನ್-17 ರಲ್ಲಿ ಆರ್ಸಿಬಿ ಪರ ಕೊನೆಯ ಬಾರಿಗೆ ಕಣಕ್ಕಿಳಿಯುವ ಮೂಲಕ ಡಿಕೆ ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಹೀಗಾಗಿ ಇದು ಅವರ ಕೊನೆಯ ಐಪಿಎಲ್ ಸೀಸನ್ ಆಗಿರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
“ಈ 2024 ರ ಆವೃತ್ತಿಯು ದಿನೇಶ್ ಕಾರ್ತಿಕ್ ಅವರ ಕೊನೆಯ ಐಪಿಎಲ್ ಆಗಿರಲಿದೆ. ಈ ಬಾರಿಯ ಐಪಿಎಲ್ ನಂತರ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ನಿವೃತ್ತಿಯನ್ನು ನಿರ್ಧರಿಸುತ್ತಾರೆ” ಎಂದು BCCI ಮೂಲಗಳು ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ.
2022 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ದಿನೇಶ್ ಕಾರ್ತಿಕ್ ಭರ್ಜರಿ ಪ್ರದರ್ಶನ ನೀಡಿದ್ದರು. ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಡಿಕೆ 180 ಎಸೆತಗಳನ್ನು ಎದುರಿಸಿ ಒಟ್ಟು 330 ರನ್ ಕಲೆಹಾಕಿದ್ದರು. ಈ ಮೂಲಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿದ್ದರು.
ಆದರೆ ಐಪಿಎಲ್ 2023 ರಲ್ಲಿ ಆರ್ಸಿಬಿ ಪರ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಕಳೆದ ಸೀಸನ್ನಲ್ಲಿ 13 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ದಿನೇಶ್ ಕಾರ್ತಿಕ್ ಕಲೆಹಾಕಿದ್ದು ಕೇವಲ 140 ರನ್ಗಳು ಮಾತ್ರ.
ಇದನ್ನೂ ಓದಿ: IPL 2024: 10 ತಂಡಗಳ ನಾಯಕರುಗಳ ಪಟ್ಟಿ ಇಲ್ಲಿದೆ
ಇದಾಗ್ಯೂ ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಆರ್ಸಿಬಿ ತಂಡವು ದಿನೇಶ್ ಕಾರ್ತಿಕ್ ಅವರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಈ ಸಲ ಕೂಡ 38 ವರ್ಷದ ದಿನೇಶ್ ಕಾರ್ತಿಕ್ ಆರ್ಸಿಬಿ ಪರ ಕಣಕ್ಕಿಳಿಯಲಿದ್ದಾರೆ. ಅಲ್ಲದೆ ಈ ಐಪಿಎಲ್ನೊಂದಿಗೆ ಡಿಕೆ ವಿದಾಯ ಹೇಳಲಿದ್ದಾರಾ ಕಾದು ನೋಡಬೇಕಿದೆ.