10 ಸೆಕೆಂಡ್​ಗೆ 30 ಲಕ್ಷ..! ಭಾರತ- ಪಾಕ್ ಪಂದ್ಯದಿಂದ ಡಿಸ್ನಿ-ಸ್ಟಾರ್​ಗೆ ಕೋಟಿ ಕೋಟಿ ಆದಾಯ

|

Updated on: Oct 14, 2023 | 9:07 AM

India vs Pakistan, World Cup 2023: ಡಿಸ್ನಿ ಹಾಟ್ ಸ್ಟಾರ್ ಇಂದಿನ ಭಾರತ-ಪಾಕಿಸ್ತಾನ ಪಂದ್ಯದಿಂದ ಸಾಕಷ್ಟು ಆದಾಯ ಗಳಿಸುವ ಲೆಕ್ಕಾಚಾರದಲ್ಲಿದೆ. ಈ ಪಂದ್ಯದ ಸಂದರ್ಭದಲ್ಲಿ, ಡಿಸ್ನಿ-ಹಾಟ್ ಸ್ಟಾರ್ ಕೇವಲ ಜಾಹೀರಾತಿನ ಮೂಲಕವೇ 150 ಕೋಟಿಗೂ ಹೆಚ್ಚು ಆದಾಯ ಗಳಿಸಲಿದೆ.

10 ಸೆಕೆಂಡ್​ಗೆ 30 ಲಕ್ಷ..! ಭಾರತ- ಪಾಕ್ ಪಂದ್ಯದಿಂದ ಡಿಸ್ನಿ-ಸ್ಟಾರ್​ಗೆ ಕೋಟಿ ಕೋಟಿ ಆದಾಯ
ಭಾರತ- ಪಾಕಿಸ್ತಾನ
Follow us on

ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಕ್ಷಣ ಸನಿಹವಾಗಿದೆ. ವಿಶ್ವಕಪ್‌ನ (ICC World Cup 2023) ಕೇಂದ್ರ ಬಿಂದುವಾದ ಭಾರತ-ಪಾಕಿಸ್ತಾನ (India vs Pakistan) ತಂಡಗಳ ಕ್ರಿಕೆಟ್ ಕದನ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium in Ahmedabad) ಪಂದ್ಯ ನಡೆಯಲಿದೆ. ಈ ಪಂದ್ಯದ ರೋಚಕತೆಯನ್ನು ಅನುಭವಿಸಲು ಸುಮಾರು 1.50 ಲಕ್ಷ ಅಭಿಮಾನಿಗಳು ಮೈದಾನದಲ್ಲಿ ಉಪಸ್ಥಿತರಿರುತ್ತಾರೆ. ಈ ಪಂದ್ಯ ಕ್ರೀಡಾಂಗಣದಲ್ಲಿ ಮಾತ್ರವಲ್ಲ, ಟಿವಿ ಮುಂದೆ ಕುಳಿತ ಲಕ್ಷಾಂತರ ವೀಕ್ಷಕರಿಗೂ ಬಹಳ ಮುಖ್ಯವಾಗಿದೆ. ಒಂದೆಡೆ ತಮ್ಮ ನೆಚ್ಚಿನ ತಂಡ ಗೆಲ್ಲಬೇಕೆಂಬ ಕೂಗು ಕೋಟ್ಯಾಂತರ ಅಭಿಮಾನಿಗಳದ್ದಾಗಿದ್ದರೆ, ಇನ್ನೊಂದೆಡೆ ಈ ಹೈವೋಲ್ಟೇಜ್ ಕದನದ ಮೂಲಕ ಕೋಟಿ ಕೋಟಿ ಹಣ ಸಂಪಾದಿಸುವ ಇರಾದೆಯಲ್ಲಿ ಪ್ರಸಾರಕರಿದ್ದಾರೆ.

10 ಸೆಕೆಂಡ್​ಗೆ 25 ಲಕ್ಷ ರೂ. ಚಾರ್ಜ್

ಅದರಲ್ಲೂ ಈ ವಿಶ್ವಕಪ್​ನ ಡಿಜಿಟಲ್ ಪ್ರಸಾರದ ಹಕ್ಕನ್ನು ಪಡೆದುಕೊಂಡಿರುವ ಡಿಸ್ನಿ ಹಾಟ್ ಸ್ಟಾರ್ ಇಂದಿನ ಭಾರತ-ಪಾಕಿಸ್ತಾನ ಪಂದ್ಯದಿಂದ ಸಾಕಷ್ಟು ಆದಾಯ ಗಳಿಸುವ ಲೆಕ್ಕಾಚಾರದಲ್ಲಿದೆ. ಈ ಪಂದ್ಯದ ಸಂದರ್ಭದಲ್ಲಿ, ಡಿಸ್ನಿ-ಹಾಟ್ ಸ್ಟಾರ್ ಕೇವಲ ಜಾಹೀರಾತಿನ ಮೂಲಕವೇ 150 ಕೋಟಿಗೂ ಹೆಚ್ಚು ಆದಾಯ ಗಳಿಸಲಿದೆ. ಮಾಧ್ಯಮ ವರದಿಗಳ ಪ್ರಕಾರ, 2019 ರ ಏಕದಿನ ವಿಶ್ವಕಪ್‌ನಲ್ಲಿ ಭಾರತ- ಪಾಕ್ ಪಂದ್ಯಕ್ಕೆ ಡಿಸ್ನಿ-ಹಾಟ್ ಸ್ಟಾರ್ ಪ್ರತಿ 10 ಸೆಕೆಂಡ್‌ಗಳ ಜಾಹೀರಾತು ಸ್ಲಾಟ್‌ಗೆ 25 ಲಕ್ಷ ರೂ. ಚಾರ್ಜ್​ ಮಾಡಿತ್ತು. ಆ ಪಂದ್ಯದಲ್ಲಿ ಒಟ್ಟು 5500 ಸೆಕೆಂಡ್‌ಗಳ ಜಾಹೀರಾತು ಸ್ಲಾಟ್ ಇತ್ತು. ಡಿಸ್ನಿ ಹಾಟ್ ಸ್ಟಾರ್ ಜಾಹೀರಾತು ಸ್ಲಾಟ್‌ಗಳನ್ನು ಮಾರಾಟ ಮಾಡುವ ಮೂಲಕ 100 ಕೋಟಿಗೂ ಹೆಚ್ಚು ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿತ್ತು.

ಅದೇ ವಿಶ್ವಕಪ್‌ನಲ್ಲಿ, ಭಾರತ ಇತರ ತಂಡದೊಂದಿಗೆ ಕಣಕ್ಕಿಳಿದಾಗ, ಡಿಸ್ನಿ ಹಾಟ್ ಸ್ಟಾರ್ ಪ್ರತಿ 10 ಸೆಕೆಂಡಿಗೆ 16 ರಿಂದ 18 ಲಕ್ಷ ರೂ. ಚಾರ್ಜ್​ ವಿಧಿಸಿತ್ತು. ಇದರಿಂದ ತಿಳಿಯುವುದೇನೆಂದರೆ ವಿಶ್ವಕಪ್​ನಲ್ಲಿ ಉಳಿದ ತಂಡಗಳ ಮುಖಾಮುಖಿ ವೇಳೆ ಹರಿದು ಬರುವ ಲಾಭಕ್ಕಿಂತ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಹರಿದುಬರುವ ಲಾಭ ನಿರೀಕ್ಷೆಗೂ ಮೀರಿದ್ದಾಗಿದೆ.

150 ಕೋಟಿ ಅಥವಾ ಅದಕ್ಕಿಂತ ಹೆಚ್ಚು

ಈ ಬಾರಿ ಡಿಸ್ನಿ ಹಾಟ್‌ಸ್ಟಾರ್‌ನ ಆದಾಯವು 150 ಕೋಟಿ ಅಥವಾ ಅದಕ್ಕಿಂತ ಹೆಚ್ಚಿರಬಹುದು ಎಂದು ಊಹಿಸಲಾಗಿದೆ. ಪಾಕಿಸ್ತಾನ ವಿರುದ್ಧದ ಈ ಪಂದ್ಯದ ಲಾಭ ಪಡೆಯಲು ಡಿಸ್ನಿ ಸ್ಟಾರ್ ಇಂಡಿಯಾ ಜಾಹೀರಾತು ಸ್ಲಾಟ್ ದರಗಳನ್ನು ಹೆಚ್ಚಿಸುವುದಂತೂ ಖಚಿತ. ವರದಿಗಳ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ವೇಳೆ 10 ಸೆಕೆಂಡ್ ಜಾಹೀರಾತಿಗೆ 30 ರಿಂದ 35 ಲಕ್ಷ ರೂಪಾಯಿ ದರ ನಿಗದಿ ಮಾಡಬಹುದು ಎಂದು ವರದಿಯಾಗಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ