
ಭಾರತದ ಕ್ರಿಕೆಟ್ ಫ್ಯಾನ್ಸ್ಗೆ ಬುಧವಾರ ಅಂದರೆ ಜೂನ್ 17 ರಂದು ಡಬಲ್ ಮನರಂಜನೆ ಸಿಗಲಿದೆ. ಏಕೆಂದರೆ ಈ ದಿನದಂದು ಭಾರತದ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಪಂದ್ಯಗಳನ್ನಾಡಲಿವೆ. ಒಂದೆಡೆ ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ಪುರುಷ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈ ಸರಣಿಯ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳುವ ಇರಾದೆಯಲ್ಲಿ ಭಾರತದ ಪುರುಷರ ತಂಡವಿದೆ. ಮತ್ತೊಂದೆಡೆ ಭಾರತ ಮಹಿಳಾ ಕ್ರಿಕೆಟ್ ತಂಡ, 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Women’s T20 World Cup) ತನ್ನ ಎರಡನೇ ಪಂದ್ಯವನ್ನು ಆಡಲು ಸಜ್ಜಾಗಿದೆ.
ಧರ್ಮಶಾಲಾದಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಶುಭ್ಮನ್ ಗಿಲ್ ಪಡೆ 7 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಮಳೆ ಪೀಡಿತ ಈ ಪಂದ್ಯವನ್ನು ತಲಾ 25 ಓವರ್ಗಳಿಗೆ ನಿಗದಿಪಡಿಸಲಾಗಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ 194 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನು 7 ಎಸೆತಗಳು ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದುಕೊಂಡಿತು.
ಇದೀಗ ಉಭಯ ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಉತ್ತರ ಪ್ರದೇಶದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವನ್ನು ಭಾರತ ಗೆದ್ದರೆ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿ ಟೀಂ ಇಂಡಿಯಾ ಪಾಲಾಗಲಿದೆ. ಇತ್ತ ಅಫ್ಘಾನಿಸ್ತಾನ ಗೆದ್ದರೆ, ಸರಣಿ 1-1 ರಿಂದ ಸಮಬಲಗೊಳ್ಳಲಿದೆ. ಈ ಪಂದ್ಯ ಎಂದಿನಂತೆ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.
ಇತ್ತ 2026 ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡ ಲೀಗ್ ಹಂತದಲ್ಲಿ ತನ್ನ ಎರಡನೇ ಪಂದ್ಯವನ್ನು ಆಡಲು ಸಜ್ಜಾಗಿದೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿದ್ದ ಟೀಂ ಇಂಡಿಯಾ, ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 170 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 106 ರನ್ಗಳಿಗೆ ಆಲೌಟ್ ಆಗುವ ಮೂಲಕ 64 ರನ್ಗಳಿಂದ ಪಂದ್ಯವನ್ನು ಕಳೆದುಕೊಂಡಿತ್ತು. ಈ ಗೆಲುವಿನೊಂದಿಗೆ ಭಾರತ ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿತ್ತು.
IND vs PAK: ವಿಶ್ವಕಪ್ ಅಂಗಳದಲ್ಲೂ ಕೈಕುಲುಕದ ಉಭಯ ನಾಯಕಿಯರು
ಇದೀಗ ಭಾರತ ವನಿತಾ ತಂಡ ತನ್ನ ಎರಡನೇ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಲೀಗ್ ಹಂತದಲ್ಲಿ ಉಭಯ ತಂಡಗಳಿಗೆ ಇದು ಎರಡನೇ ಪಂದ್ಯವಾಗಿದೆ. ಮೊದಲ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ಬಾಂಗ್ಲಾದೇಶ ತಂಡವನ್ನು ಎದುರಿಸಿ ಸೋತಿತ್ತು. ಹೀಗಾಗಿ ಈ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಪ್ರಬಲ ಪೈಪೋಟಿ ನೀಡಲು ನೆದರ್ಲ್ಯಾಂಡ್ಸ್ ಪ್ರಯತ್ನಿಸಲಿದೆ. ಹೆಡ್ಡಿಂಗ್ಲಿ ಮೈದಾನದಲ್ಲಿ ನಡೆಯುವ ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಟಾಸ್ ಸಂಜೆ 6:30 ಕ್ಕೆ ನಡೆಯಲಿದೆ.
Published On - 2:56 pm, Tue, 16 June 26