Duleep Trophy 2023: ಕೊಡಗಿನ ಕುವರನ ದಾಳಿಗೆ ನಲುಗಿದ ಪಶ್ಚಿಮ ವಲಯ! ದುಲೀಪ್ ಟ್ರೋಫಿ ಗೆದ್ದ ದಕ್ಷಿಣ ವಲಯ

|

Updated on: Jul 16, 2023 | 3:22 PM

Duleep Trophy 2023:

Duleep Trophy 2023: ಕೊಡಗಿನ ಕುವರನ ದಾಳಿಗೆ ನಲುಗಿದ ಪಶ್ಚಿಮ ವಲಯ! ದುಲೀಪ್ ಟ್ರೋಫಿ ಗೆದ್ದ ದಕ್ಷಿಣ ವಲಯ
ದುಲೀಪ್ ಟ್ರೋಫಿ
Follow us on

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium, Bangalore) ನಡೆದ ದುಲೀಪ್ ಟ್ರೋಫಿ ಫೈನಲ್ (Duleep Trophy 2023 final) ಪಂದ್ಯದಲ್ಲಿ ಪಶ್ಚಿಮ ವಲಯ ತಂಡವನ್ನು 75 ರನ್​ಗಳಿಂದ ಮಣಿಸಿದ ದಕ್ಷಿಣ ವಲಯ ತಂಡ (South Zone beat West Zone) 14ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಸರ್ಫರಾಜ್ ಖಾನ್, ಚೇತೇಶ್ವರ್ ಪೂಜಾರರಂತಹ ಸ್ಟಾರ್ ಆಟಗಾರರ ದಂಡನ್ನೇ ಹೊಂದಿದ್ದ ಪಶ್ಚಿಮ ವಲಯ ತಂಡ ಈ ಪಂದ್ಯದ ಗೆಲ್ಲುವ ಫೆವರೆಟ್ ಎನಿಸಿಕೊಂಡಿತ್ತು. ಆದರೆ ಕನ್ನಡಿಗ ವಿಧ್ವತ್ ಕಾವೇರಪ್ಪ (Vidhwath Kaverappa) ದಾಳಿಗೆ ನಲುಗಿದ ಪ್ರಿಯಾಂಕ್ ಪಾಂಚಾಲ್ ಪಡೆ ಸುಲಭವಾಗಿ ಸೋಲೊಪ್ಪಿಕೊಂಡಿತು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಪ್ರಿಯಾಂಕ್ ಪಾಂಚಾಲ್ 95 ರನ್ ಬಾರಿಸಿ ಹೋರಾಟದ ಇನ್ನಿಂಗ್ಸ್ ಆಡಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ದಕ್ಷಿಣ ವಲಯದ ಮೊದಲ ಇನ್ನಿಂಗ್ಸ್

ಈ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ವಲಯ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದಿದ್ದ ಕನ್ನಡಿಗರಾದ ಆರ್. ಸಮರ್ಥ್ ಹಾಗೂ ಮಯಾಂಕ್ ಆಗರ್ವಾಲ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. ಸಮರ್ಥ್ 7 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಮಯಾಂಕ್ 28 ರನ್​ಗಳಿಗೆ ಸುಸ್ತಾದರು. ಆ ಬಳಿಕ ಬಂದ ತಿಲಕ್ ವರ್ಮಾ 40 ರನ್ ಬಾರಿಸುವುದರೊಂದಿಗೆ ನಾಯಕ ವಿಹಾರಿಗೆ ಉತ್ತಮ ಸಾಥ್ ನೀಡಿದರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ವಿಹಾರಿ 68 ರನ್​ಗಳ ಇನ್ನಿಂಗ್ಸ್ ಆಡಿದರು.ಈ ಇಬ್ಬರನ್ನು ಬಿಟ್ಟರೆ ಕೆಳಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ 22 ರನ್​ಗಳ ಕಾಣಿಕೆ ನೀಡಿದರು. ಅಂತಿಮವಾಗಿ ದಕ್ಷಿಣ ವಲಯ 213 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು.

Ishan kishan: ದುಲೀಪ್ ಟ್ರೋಫಿಯಿಂದ ಇಶಾನ್ ಕಿಶನ್ ಹಿಂದೆ ಸರಿದಿದ್ದು ಯಾಕೆ ಗೊತ್ತಾ?

ಪಶ್ಚಿಮ ವಲಯದ ಮೊದಲ ಇನ್ನಿಂಗ್ಸ್

213 ರನ್​ಗಳ ಗುರಿಯೊಂದಿಗೆ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯಕ್ಕೆ ಆರಂಭಿಕ ಪೃಥ್ವಿ ಶಾ ಅರ್ಧಶತಕ (65 ರನ್) ಬಾರಿಸುವುದರೊಂದಿಗೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆದರೆ ಪೃಥ್ವಿ ಹೊರತಾಗಿ ತಂಡದ ಇನ್ನ್ಯಾವ ಆಟಗಾರನೂ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬಂದ ಹಾರ್ವಿಕ್ ದೇಸಾಯಿ 21 ರನ್​ಗಳ ಕೊಡುಗೆ ನೀಡಿದ್ದನ್ನು ಬಿಟ್ಟರೆ, ಕನ್ನಡಿಗ ವಿಧ್ವತ್ ಕಾವೇರಪ್ಪ ದಾಳಿಗೆ ನಲುಗಿದ ಪಶ್ವಿಮ ವಲಯ ಪಡೆ 146 ರನ್​ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್ ಮುಗಿಸಿತು. ದಕ್ಷಿಣ ವಲಯದ ಪರ ಕನ್ನಡಿಗ ವಿಧ್ವತ್ 7 ವಿಕೆಟ್ ಪಡೆದು ಮಿಂಚಿದರೆ, ಮತ್ತೊಬ್ಬ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ 2 ವಿಕೆಟ್ ಪಡೆದರು.

ದಕ್ಷಿಣ ವಲಯದ ಎರಡನೇ ಇನ್ನಿಂಗ್ಸ್

ಪಶ್ಚಿಮ ವಲಯ ತಂಡವನ್ನು ಕೇವಲ 146 ರನ್​ಗಳಿಗೆ ಆಲೌಟ್ ಮಾಡುವ ಮೂಲಕ ಮೊದಲ ಇನ್ನಿಂಗ್ಸ್​ನಲ್ಲಿ 67 ರನ್​ಗಳ ಮುನ್ನಡೆ ಕಾಯ್ದುಕೊಂಡಿದ್ದ ದಕ್ಷಿಣದ ಎರಡನೇ ಇನ್ನಿಂಗ್ಸ್​ ಆರಂಭವೂ ಉತ್ತಮವಾಗಿರಲಿಲ್ಲ. ಈ ಇನ್ನಿಂಗ್ಸ್​ನಲ್ಲೂ ಸಮರ್ಥ್​ 5 ರನ್​ಗಳಿಗೆ ಸುಸ್ತಾದರು. ಆದರೆ ಮಯಾಂಕ್ ಮಾತ್ರ 35 ರನ್​ಗಳ ಕೊಡುಗೆ ನೀಡಿದರು. ಇನ್ನುಳಿದಂತೆ ನಾಯಕ ಹನುಮ ವಿಹಾರಿ 42 ರನ್ ಬಾರಿಸುವ ಮೂಲಕ ಎರಡನೇ ಇನ್ನಿಂಗ್ಸ್​ನಲ್ಲೂ ಅದ್ಭುತ ಪ್ರದರ್ಶನ ನೀಡಿದರೆ, ರಿಕಿ ಭುಯಿ 37 ರನ್​ಗಳ ಇನ್ನಿಂಗ್ಸ್ ಆಡಿದರು.  ಆ ಬಳಿಕ ಬಂದ ಸಚಿನ್ ಬೇಬಿ 28 ರನ್, ವಾಷಿಂಗ್ಟನ್ ಸುಂದರ್ 37 ರನ್, ಕನ್ನಡಿಗ ವೈಶಾಕ್ ವಿಜಯ್​ಕುಮಾರ್ 23 ರನ್ಗಳ ಕೊಡುಗೆ ನೀಡಿದರು. ಎರಡನೇ ಇನ್ನಿಂಗ್ಸ್​ನಲ್ಲಿ ದಕ್ಷಿಣ ವಲಯದ ಪರ ಯಾರೂ ಬಿಗ್ ಇನ್ನಿಂಗ್ಸ್ ಆಡದಿದ್ದರೂ, ತಂಡದಿಂದ ಸಾಂಘಿಕ ಹೋರಾಟ ಕಂಡು ಬಂತು. ಹೀಗಾಗಿ ದಕ್ಷಿಣ ವಲಯ ತಂಡ 230 ರನ್​ಗಳಿಗೆ ಆಲೌಟ್ ಆಗುವ ಮೂಲಕ ಪಶ್ಚಿಮ ವಲಯ ತಂಡಕ್ಕೆ 298 ರನ್​ಗಳ ಟಾರ್ಗೆಟ್ ನೀಡಿತ್ತು.

ಪಶ್ಚಿಮ ವಲಯದ ಎರಡನೇ ಇನ್ನಿಂಗ್ಸ್

ಮೊದಲ ಇನ್ನಿಂಗ್ಸ್​ನಲ್ಲೇ 67 ರನ್​ಗಳ ಹಿನ್ನಡೆ ಅನುಭವಿಸಿದ ಪಶ್ಚಿಮ ವಲಯ ತಂಡ ಎರಡನೇ ಇನ್ನಿಂಗ್ಸ್​ನಲ್ಲೂ ಮುಗ್ಗರಿಸಿತು.  ಆರಂಭಿಕ ಪೃಥ್ವಿ 7 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರೆ, ನಾಯಕನ ಇನ್ನಿಂಗ್ಸ್ ಆಡಿದ ಪ್ರಿಯಾಂಕ್ ಗೆಲುವಿಗಾಗಿ ಕೊನೆಯವರೆಗೂ ಹೋರಾಡಿ 95 ರನ್ ಬಾರಿಸಿ ಔಟಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ 48 ರನ್ ಗಳಿಸಿದ್ದು ಬಿಟ್ಟರೆ,  ಸೂರ್ಯ ಕುಮಾರ್ 4 ರನ್ ಹಾಗೂ ಚೇತೇಶ್ವರ್ ಪೂಜಾರ 15 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಪಶ್ಚಿಮ ವಲಯ ತಂಡ 222 ರನ್​ಗಳಿಗೆ ಆಲೌಟ್ ಆಗುವುದರೊಂದಿಗೆ 75 ರನ್​ಗಳ ಹೀನಾಯ ಸೋಲೊಪ್ಪಿಕೊಂಡಿತು.

ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಕನ್ನಡಿಗ ವಿಧ್ವತ್ ಕಾವೇರಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಹಾಗೂ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Sun, 16 July 23