Duleep Trophy 2023: 7000 ರನ್ ಪೂರೈಸಿದ ಮಯಾಂಕ್; ಅರ್ಧಶತಕ ಬಾರಿಸಿದ ಹನುಮ ವಿಹಾರಿ

|

Updated on: Jul 13, 2023 | 12:13 PM

Duleep Trophy 2023: ಮೊದಲ ಇನ್ನಿಂಗ್ಸ್ ಮುಗಿಸಿರುವ ದಕ್ಷಿಣ ವಲಯ ತಂಡ 213 ರನ್ ಕಲೆಹಾಕಿದೆ. ಸತತ ವಿಕೆಟ್​ಗಳ ಪತನದ ನಡುವೆಯೂ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಬ್ಯಾಟರ್ ಹನುಮ ವಿಹಾರಿ ಅರ್ಧಶತಕ ಬಾರಿಸುವುದರೊಂದಿಗೆ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗುವುದರಿಂದ ಪಾರು ಮಾಡಿದ್ದಾರೆ.

Duleep Trophy 2023: 7000 ರನ್ ಪೂರೈಸಿದ ಮಯಾಂಕ್; ಅರ್ಧಶತಕ ಬಾರಿಸಿದ ಹನುಮ ವಿಹಾರಿ
ಹನುಮ ವಿಹಾರಿ
Follow us on

ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ (Duleep Trophy final) ಪಂದ್ಯಾವಳಿ ಅಂತಿಮ ಹಂತಕ್ಕೆ ಬಂದು ನಿಂತಿದೆ. ಪ್ರಶಸ್ತಿಗಾಗಿ ದಕ್ಷಿಣ ವಲಯ ಹಾಗೂ ಪಶ್ಚಿಮ ವಲಯ (south zone vs west zone) ತಂಡಗಳು ಕಾದಾಡುತ್ತಿದ್ದು, ಮೊದಲ ದಿನದಾಟದಂತ್ಯಕ್ಕೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿರುವ ದಕ್ಷಿಣ ವಲಯ ತಂಡ 213 ರನ್ ಕಲೆಹಾಕಿದೆ. ಸತತ ವಿಕೆಟ್​ಗಳ ಪತನದ ನಡುವೆಯೂ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಬ್ಯಾಟರ್ ಹನುಮ ವಿಹಾರಿ ( hanuma vihari) ಅರ್ಧಶತಕ ಬಾರಿಸುವುದರೊಂದಿಗೆ ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗುವುದರಿಂದ ಪಾರು ಮಾಡಿದ್ದಾರೆ. ಇನ್ನು ಟೀಂ ಇಂಡಿಯಾದಲ್ಲಿ ಏಕಾಏಕಿ ತನ್ನ ಸ್ಥಾನ ಕಳೆದುಕೊಂಡ ವಿಹಾರಿ ಈ ಇನ್ನಿಂಗ್ಸ್ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾದ ಕದ ಬಡಿದಿದ್ದಾರೆ.

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದಕ್ಷಿಣ ವಲಯ ಪರ ಆಡುತ್ತಿರುವ ಹನುಮ ವಿಹಾರಿ, ಪಶ್ಚಿಮ ವಲಯದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬೆಂಗಳೂರಿನಲ್ಲಿ ಮೊದಲ ದಿನ ಮೋಡ ಕವಿದ ವಾತಾವರಣವಿದ್ದಿದ್ದರಿಂದ ಇದರ ಲಾಭವನ್ನು ಪಶ್ಚಿಮ ವಲಯದ ಬೌಲರ್‌ಗಳು ಪಡೆದಕೊಂಡರು. ಕಳಪೆ ಬೆಳಕು ಮತ್ತು ಮಳೆಯಿಂದಾಗಿ ಬುಧವಾರ ಕೇವಲ 65 ಓವರ್‌ಗಳ ಆಟ ಮಾತ್ರ ನಡೆಯಿತು.

Duleep Trophy: ‘ಪೂಜಾರ ಸರ್ ನನ್ನಂತೆ ಬ್ಯಾಟ್ ಮಾಡಲು ಸಾಧ್ಯವಿಲ್ಲ’! ಸ್ಫೋಟಕ ಹೇಳಿಕೆ ನೀಡಿದ ಪೃಥ್ವಿ ಶಾ

ಹವಾಮಾನದ ಲಾಭ ಪಡೆದ ಪಶ್ಚಿಮ ವಲಯದ ಬೌಲರ್​ಗಳಾದ ನಾಗವಾಸ್ವಾಲಾ, ಚಿಂತನ್ ಗಜಾ ಮತ್ತು ಅತಿತ್ ಸೇಠ್ ದಕ್ಷಿಣ ವಲಯದ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ತೊಂದರೆ ನೀಡಿದರು. ಮೂವರೂ ಬೌಲರ್‌ಗಳ ಕರಾರುವಕ್ಕಾದ ದಾಳಿಗೆ ಬೆದರಿದ ದಕ್ಷಿಣ ವಲಯದ ಆರಂಭಿಕರಾದ ಮಯಾಂಕ್ ಅಗರ್ವಾಲ್ (28) ಮತ್ತು ಆರ್. ಸಮರ್ಥ್ (7)ಗೆ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದರೂ ಆರಂಭಿಕ ಮಯಾಂಕ್ ತನ್ನ ಅಲ್ಪ ಇನ್ನಿಂಗ್ಸ್​ನಲ್ಲೂ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದರು.

7000 ರನ್ ಪೂರೈಸಿದ ಮಯಾಂಕ್

ದಕ್ಷಿಣ ವಲಯದ ಪರ ಆಡುತ್ತಿರುವ ಮಯಾಂಕ್ ಅಗರ್ವಾಲ್ ಫೈನಲ್ ಪಂದ್ಯದಲ್ಲಿ ಬಾರಿಸಿದ 28 ರನ್​ಗಳ ಸಹಾಯದಿಂದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 7000 ರನ್ ಪೂರೈಸಿದರು. ಆದರೆ 28 ರನ್ ಬಾರಿಸಿ ಉತ್ತಮ ಆರಂಭ ಪಡೆದುಕೊಂಡಿದ್ದ ಅಗರ್ವಾಲ್ ಥರ್ಡ್​ ಸ್ಲಿಪ್‌ನಲ್ಲಿ ಸರ್ಫರಾಜ್ ಖಾನ್​ಗೆ ಕ್ಯಾಚಿತ್ತು ಔಟಾದರು. ಬಳಿಕ ದಕ್ಷಿಣ ವಲಯದ ಆರಂಭಿಕರಿಬ್ಬರೂ ಒಟ್ಟಾರೆ ತಂಡದ ಮೊತ್ತ 42 ರನ್‌ಗಳಿದ್ದಾಗ ಪೆವಿಲಿಯನ್ ಸೇರಿಕೊಂಡರು. ನಂತರ ತಂಡದ ಇನ್ನಿಂಗ್ಸ್ ನಿಭಾಯಿಸಿದ ತಿಲಕ್ ಮತ್ತು ವಿಹಾರಿ ಮೂರನೇ ವಿಕೆಟ್‌ಗೆ 79 ರನ್ ಸೇರಿಸಿದರು.

ತಂಡದ ಪರ ಏಕಾಂಗಿ ಹೋರಾಟ ನಡೆಸಿದ ವಿಹಾರಿ 3 ಗಂಟೆಗಳ ಕಾಲ ಪಿಚ್ ಮೇಲೆ ನಿಂತು, ಪಶ್ಚಿಮ ವಲಯದ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ 130 ಎಸೆತಗಳನ್ನು ಎದುರಿಸಿದ ವಿಹಾರಿ ಅಂತಿಮವಾಗಿ 63 ರನ್ ಗಳಿಸಿ ತಮ್ಮ ವಿಕೆಟ್ ಒಪ್ಪಿಸಿದರು. ವಿಹಾರಿ ವಿಕೆಟ್ ಬಳಿಕ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಆ ಬಳಿಕ ಬಂದ ರಿಕಿ ಭುಯಿ (9), ಸಚಿನ್ ಬೇಬಿ (7) ಮತ್ತು ಸಾಯಿ ಕಿಶೋರ್ (5) ಎರಡಂಕಿ ತಲುಪಲು ವಿಫಲರಾದರು. ಇನ್ನು ಎರಡನೇ ದಿನದಾಟ ಆರಂಭಿಸಿದ ದಕ್ಷಿಣ ವಲಯ ಅಂತಿಮವಾಗಿ 213 ರನ್​ಗಳಿಗೆ ಆಲೌಟ್ ಆಯಿತು. ಇದೀಗ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಪಶ್ಚಿಮ ವಲಯ ಈ ಸುದ್ದಿ ಬರೆಯುವ ಹೊತ್ತಿಗೆ ಒಂದು ವಿಕೆಟ್ ಕಳೆದುಕೊಂಡು 64 ರನ್ ಕಲೆಹಾಕಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ