ಚಕ್ಕನೆ ಜಿಗಿದು ಅತ್ಯದ್ಭುತ ಡೈವಿಂಗ್ ಕ್ಯಾಚ್ ಹಿಡಿದ ಧ್ರುವ್ ಜುರೇಲ್
Duleep Trophy 2024: ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಒಟ್ಟು 4 ತಂಡಗಳು ಕಣಕ್ಕಿಳಿಯುತ್ತಿವೆ. ಈ ತಂಡಗಳನ್ನು ಭಾರತ ಎ, ಬಿ, ಸಿ ಮತ್ತು ಡಿ ಎಂದು ಹೆಸರಿಸಲಾಗಿದೆ. ಇಲ್ಲಿ ಎ ತಂಡವನ್ನು ಶುಭ್ಮನ್ ಗಿಲ್ ಮುನ್ನಡೆಸಿದರೆ, ಬಿ ತಂಡಕ್ಕೆ ಅಭಿಮನ್ಯು ಈಶ್ವರನ್ ನಾಯಕರಾಗಿದ್ದಾರೆ. ಹಾಗೆಯೇ ಸಿ ತಂಡವು ರುತುರಾಜ್ ಗಾಯಕ್ವಾಡ್ ಅವರ ಸಾರಥ್ಯದಲ್ಲಿ ಕಣ್ಕಕಿಳಿದರೆ, ಡಿ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸುತ್ತಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಯುವ ವಿಕೆಟ್ ಕೀಪರ್ ಧ್ರುವ್ ಜುರೇಲ್ ಅತ್ಯುತ್ತಮ ಫ್ಲೈಯಿಂಗ್ ಕ್ಯಾಚ್ ಹಿಡಿದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಎ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ಬಿ ತಂಡಕ್ಕೆ ಅವೇಶ್ ಖಾನ್ ಆರಂಭಿಕ ಆಘಾತ ನೀಡಿದ್ದರು.
ಅವೇಶ್ ಖಾನ್ ಎಸೆದ ಪಂದ್ಯದ 13ನೇ ಓವರ್ನ ಕೊನೆಯ ಎಸೆತದಲ್ಲಿ ಭಾರತ ಬಿ ತಂಡದ ನಾಯಕ ಅಭಿಮನ್ನು ಈಶ್ವರನ್ ಕವರ್ಸ್ನತ್ತ ಬಾರಿಸಲು ಯತ್ನಿಸಿದರು. ಆದರೆ ಬ್ಯಾಟನ್ನು ಸವರಿದ ಚೆಂಡು ಸ್ಲಿಪ್ನತ್ತ ಚಿಮ್ಮಿತು. ತಕ್ಷಣವೇ ಬಲ ಬದಿಯತ್ತ ಡೈವಿಂಗ್ ಮಾಡುವ ಮೂಲಕ ವಿಕೆಟ್ ಕೀಪರ್ ಧ್ರುವ್ ಜುರೇಲ್ ಅದ್ಭುತವಾಗಿ ಚೆಂಡನ್ನು ಹಿಡಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಧ್ರುವ್ ಜುರೇಲ್ ಅವರ ವಿಕೆಟ್ ಕೀಪಿಂಗ್ ಬಗ್ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಪ್ರಥಮ ಇನಿಂಗ್ಸ್ ಆರಂಭಿಸಿರುವ ಭಾರತ ಬಿ ತಂಡವು ಭೋಜನಾ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು ಕೇವಲ 84 ರನ್ಗಳಿಸಿದೆ. ಭಾರತ ಎ ಪರ ಅವೇಶ್ ಖಾನ್ ಹಾಗೂ ಆಕಾಶ್ ದೀಪ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ಭಾರತ ಎ (ಪ್ಲೇಯಿಂಗ್ XI): ಶುಭ್ಮನ್ ಗಿಲ್ (ನಾಯಕ), ಮಯಾಂಕ್ ಅಗರ್ವಾಲ್, ಕೆಎಲ್ ರಾಹುಲ್, ರಿಯಾನ್ ಪರಾಗ್, ಧ್ರುವ್ ಜುರೇಲ್ (ವಿಕೆಟ್ ಕೀಪರ್), ಶಿವಂ ದುಬೆ, ತನುಷ್ ಕೋಟ್ಯಾನ್, ಕುಲ್ದೀಪ್ ಯಾದವ್, ಆಕಾಶ್ ದೀಪ್, ಅವೇಶ್ ಖಾನ್, ಖಲೀಲ್ ಅಹ್ಮದ್
ಭಾರತ ಬಿ (ಪ್ಲೇಯಿಂಗ್ XI): ಅಭಿಮನ್ಯು ಈಶ್ವರನ್ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಮುಶೀರ್ ಖಾನ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಸಾಯಿ ಕಿಶೋರ್, ಮುಖೇಶ್ ಕುಮಾರ್, ನವದೀಪ್ ಸೈನಿ, ಯಶ್ ದಯಾಳ್.