Duleep Trophy 2024: ಶ್ರೇಯಸ್ ತಂಡಕ್ಕೆ ಹೀನಾಯ ಸೋಲು; ರುತುರಾಜ್ ಪಡೆಗೆ ಸುಲಭ ಜಯ

|

Updated on: Sep 07, 2024 | 4:44 PM

Duleep Trophy 2024: ಅನಂತಪುರದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ-ಸಿ ತಂಡವು, ಭಾರತ-ಡಿ ತಂಡ ನೀಡಿದ 233 ರನ್ ಗುರಿಯನ್ನು ಪಂದ್ಯದ ಮೂರನೇ ದಿನ 6 ವಿಕೆಟ್ ಕಳೆದುಕೊಂಡು ಸಾಧಿಸಿತು. ಭಾರತ-ಸಿ ತಂಡದ ಪರ ನಾಯಕ ರುತುರಾಜ್ ಮತ್ತು ರಜತ್ ಪಾಟಿದಾರ್ ಎರಡನೇ ಇನ್ನಿಂಗ್ಸ್‌ನಲ್ಲಿ ಬಲಿಷ್ಠ ಇನ್ನಿಂಗ್ಸ್ ಆಡಿದರೆ, ಅಭಿಷೇಕ್ ಪೊರೆಲ್ ಮೊದಲ ಇನ್ನಿಂಗ್ಸ್‌ನಂತೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಉಪಯುಕ್ತ ಕೊಡುಗೆ ನೀಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

Duleep Trophy 2024: ಶ್ರೇಯಸ್ ತಂಡಕ್ಕೆ ಹೀನಾಯ ಸೋಲು; ರುತುರಾಜ್ ಪಡೆಗೆ ಸುಲಭ ಜಯ
ಭಾರತ ಸಿ ತಂಡ
Follow us on

ದುಲೀಪ್ ಟ್ರೋಫಿ 2024 ರ ಮೊದಲ ಸುತ್ತಿನ ಪಂದ್ಯದಲ್ಲಿ, ರುತುರಾಜ್ ನಾಯಕತ್ವದ ಭಾರತ-ಸಿ ತಂಡವು ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ-ಡಿ ತಂಡವನ್ನು 4 ವಿಕೆಟ್‌ಗಳಿಂದ ಕೇವಲ ಮೂರೇ ದಿನಗಳಲ್ಲಿ ಸುಲಭವಾಗಿ ಮಣಿಸಿದೆ. ಅನಂತಪುರದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ-ಸಿ ತಂಡವು, ಭಾರತ-ಡಿ ತಂಡ ನೀಡಿದ 233 ರನ್ ಗುರಿಯನ್ನು ಪಂದ್ಯದ ಮೂರನೇ ದಿನ 6 ವಿಕೆಟ್ ಕಳೆದುಕೊಂಡು ಸಾಧಿಸಿತು. ಭಾರತ-ಸಿ ತಂಡದ ಪರ ನಾಯಕ ರುತುರಾಜ್ ಮತ್ತು ರಜತ್ ಪಾಟಿದಾರ್ ಎರಡನೇ ಇನ್ನಿಂಗ್ಸ್‌ನಲ್ಲಿ ಬಲಿಷ್ಠ ಇನ್ನಿಂಗ್ಸ್ ಆಡಿದರೆ, ಅಭಿಷೇಕ್ ಪೊರೆಲ್ ಮೊದಲ ಇನ್ನಿಂಗ್ಸ್‌ನಂತೆ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಉಪಯುಕ್ತ ಕೊಡುಗೆ ನೀಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಮಾನವ್ ದಾಳಿಗೆ ತತ್ತರಿಸಿದ ಭಾರತ-ಡಿ

ಸುಮಾರು 6 ವರ್ಷಗಳ ನಂತರ ಪ್ರಥಮ ಬಾರಿಗೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದ ಪ್ರಥಮ ದರ್ಜೆ ಪಂದ್ಯದಲ್ಲಿ ಕೇವಲ 3 ದಿನಗಳಲ್ಲೇ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಯಂತೆ ಆರಂಭದಲ್ಲಿ ವೇಗಿಗಳದ್ದೇ ಮೇಲುಗೈ ಆದರೂ ಮೂರು ಹಾಗೂ ನಾಲ್ಕನೇ ಇನಿಂಗ್ಸ್​ನಲ್ಲಿ ಸ್ಪಿನ್ನರ್​ಗಳು ಪ್ರಾಬಲ್ಯ ಮೆರೆದರು. ಭಾರತ-ಸಿ ತಂಡದ ಸ್ಪಿನ್ನರ್ ಮಾನವ್ ಸುತಾರ್ ಎರಡನೇ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆಯುವ ಮೂಲಕ ಇಡೀ ತಂಡವನ್ನು ಕೇವಲ 236 ರನ್‌ಗಳಿಗೆ ಔಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಇನಿಂಗ್ಸ್‌ನಲ್ಲಿ ವಿಫಲವಾದ ಭಾರತ-ಡಿ ತಂಡದ ನಾಯಕ ಶ್ರೇಯಸ್ (56) ಎರಡನೇ ಇನ್ನಿಂಗ್ಸ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದರಾದರೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು.

ಆಕ್ರಮಣಕಾರಿ ಆರಂಭ

ಮೊದಲ ಇನಿಂಗ್ಸ್‌ನಲ್ಲಿ 4 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ಭಾರತ-ಸಿ ತಂಡ ಗೆಲುವಿಗೆ 233 ರನ್‌ಗಳ ಗುರಿ ಪಡೆದಿತ್ತು. ಪಂದ್ಯದ ಮೂರನೇ ಮತ್ತು ನಾಲ್ಕನೇ ದಿನದಲ್ಲಿ ಈ ಗುರಿ ಬೆನ್ನಟ್ಟುವುದು ಸಹ ಕಷ್ಟಕರವಾಗಿ ಕಾಣುತ್ತಿತ್ತು. ಆದರೆ ಭಾರತ ಸಿ ತಂಡದ ನಾಯಕ ರುತುರಾಜ್ (46) ಅವರು ಬಂದ ತಕ್ಷಣ ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ ತಂಡಕ್ಕೆ ವೇಗದ ಆರಂಭ ನೀಡಿದರು. ಅಲ್ಲದೆ ನಾಯಕನಿಗೆ ಸಾಥ್ ನೀಡಿದ ಮತ್ತೊಬ್ಬ ಆರಂಭಿಕ ಸಾಯಿ ಸುದರ್ಶನ್ (22) ಮೊದಲ ವಿಕೆಟ್‌ಗೆ 11 ಓವರ್‌ಗಳಲ್ಲಿ 64 ರನ್ ಕಲೆಹಾಕಿದರು.

ಮಿಂಚಿದ ಮಾನವ್

ಈ ವೇಳೆ ಭಾರತ-ಡಿ ತಂಡದ ಸ್ಪಿನ್ನರ್ ಸರನ್ಶ್ ಜೈನ್ (4/92) ಈ ಇಬ್ಬರನ್ನೂ ಔಟ್ ಮಾಡುವ ಮೂಲಕ ಎದುರಾಳಿ ತಂಡಕ್ಕೆ ಆಘಾತ ನೀಡಿದರು. ಆದರೆ ಮೂರನೇ ವಿಕೆಟ್‌ಗೆ ಜೊತೆಯಾದ ರಜತ್ ಪಾಟಿದಾರ್ (44) ಮತ್ತು ಆರ್ಯನ್ ಜುಯಲ್ (47) 88 ರನ್ ಸೇರಿಸಿದರು. ಇಲ್ಲಿ ಮತ್ತೊಮ್ಮೆ ಮ್ಯಾಜಿಕ್ ಮಾಡಿದ ಸರನ್ಶ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದಾಗ್ಯೂ ಭಾರತ ಡಿ ಪರ ಗೆಲುವಿನ ಇನ್ನಿಂಗ್ಸ್ ಆಡಿದ ಮಾನವ್ ಹಾಗೂ ಅಭಿಷೇಕ್ ಪೊರೆಲ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಪೊರೆಲ್ 35 ರನ್ ಗಳಿಸಿ ಅಜೇಯರಾಗಿ ಉಳಿದರೆ, ಬೌಲಿಂಗ್‌ನಲ್ಲಿ 7 ವಿಕೆಟ್ ಪಡೆದಿದ್ದ ಮಾನವ್, ಬ್ಯಾಟಿಂಗ್​ನಲ್ಲೂ 19 ರನ್‌ಗಳ ಪ್ರಮುಖ ಅಜೇಯ ಇನ್ನಿಂಗ್ಸ್ ಆಡಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:40 pm, Sat, 7 September 24