
ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಉತ್ತರ ವಲಯ ಮತ್ತು ಪಶ್ಚಿಮ ವಲಯ ನಡುವೆ ನಡೆಯುತ್ತಿರುವ ದುಲೀಪ್ ಟ್ರೋಫಿ (Duleep Trophy) ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯ ಪರ ಆಡುತ್ತಿರುವ ಸರ್ಫರಾಜ್ ಖಾನ್ ಅವರ ಸಹೋದರ ಮುಶೀರ್ ಖಾನ್ ( Musheer Khan) ಅದ್ಭುತ ಪ್ರದರ್ಶನ ನೀಡಿದರು. ಉತ್ತರ ವಲಯ ನೀಡಿರುವ 287 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಶ್ಚಿಮ ವಲಯ ಪರ ಮುಶೀರ್ ಖಾನ್ 126 ಎಸೆತಗಳಲ್ಲಿ 96 ರನ್‌ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಆದಾಗ್ಯೂ ಕೇವಲ 4 ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರೂ ತಮ್ಮ ಇನ್ನಿಂಗ್ಸ್ ಮೂಲಕ ತಂಡವನ್ನು 200 ರನ್‌ಗಳ ಗಡಿ ದಾಟಲು ಸಹಾಯ ಮಾಡಿದರು.
ಈ ಗುರಿ ಬೆನ್ನಟ್ಟಿದ ಪಶ್ಚಿಮ ವಲಯ ತಂಡ ಕಳಪೆ ಆರಂಭ ಪಡೆಯಿತು. ಕೇವಲ 4 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ನಂತರ ಕ್ರೀಸ್‌ಗೆ ಬಂದ ಮುಶೀರ್ ಖಾನ್ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ತಂಡವು 84 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡರೂ ಮುಶೀರ್ ಖಾನ್ 126 ಎಸೆತಗಳನ್ನು ಎದುರಿಸಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 96 ರನ್ ಗಳಿಸಿ ಔಟಾದರು.
ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ, ಮುಶೀರ್ ಖಾನ್ ದೀರ್ಘ ಇನ್ನಿಂಗ್ಸ್‌ಗಳನ್ನು ಆಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಮುಶೀರ್ 31 ರನ್ ಬಾರಿಸಿದರೂ ಬರೋಬ್ಬರಿ 126 ಎಸೆತಗಳನ್ನು ಎದುರಿಸಿ ಬಹಳ ಸಮಯ ಕ್ರೀಸ್‌ನಲ್ಲಿಯೇ ಇದ್ದರು. ಈ ಪಂದ್ಯದಲ್ಲಿ ಒಟ್ಟು 252 ಎಸೆತಗಳನ್ನು ಎದುರಿಸುವ ಮೂಲಕ, ಅವರು ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆಂಬುದನ್ನು ಸಾಬೀತುಪಡಿಸಿದರು.
ಕೇವಲ 21 ವರ್ಷ ವಯಸ್ಸಿನ ಮುಶೀರ್ ಖಾನ್ ಈಗಾಗಲೇ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ತಮ್ಮ 18 ಪ್ರಥಮ ದರ್ಜೆ ಪಂದ್ಯಗಳಲ್ಲಿ ಐದು ಶತಕಗಳು ಮತ್ತು ನಾಲ್ಕು ಅರ್ಧಶತಕಗಳನ್ನು ಬಾರಿಸಿರುವ ಮುಶೀರ್ ಅವರ ಬ್ಯಾಟಿಂಗ್ ಸರಾಸರಿ 46 ಕ್ಕಿಂತ ಹೆಚ್ಚಿದೆ. ಮುಂಬೈ ತಂಡದ ಪ್ರಮುಖ ಸದಸ್ಯರಾಗಿರುವ ಮುಶೀರ್ ಮೂರು ಸ್ವರೂಪಗಳಲ್ಲಿ ಆಡುತ್ತಾರೆ. ಲಿಸ್ಟ್ ಎ ನಲ್ಲಿ 40.83 ರ ಸರಾಸರಿಯನ್ನು ಹೊಂದಿರುವ ಮುಶೀರ್ ಖಾನ್ ಅವರ ಪ್ರದರ್ಶನವನ್ನು ನೋಡಿದರೆ, ಶೀಘ್ರದಲ್ಲೇ ಅವರಿಗೆ ಭಾರತ ಎ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆಗಳಿವೆ.
Published On - 8:00 pm, Tue, 25 August 26