ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬೆಂಬಲ ಸೂಚಿಸಿದೆ. ಪಾಕ್ನಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಬಿಸಿಸಿಐ ನಿರಾಕರಿಸಿದ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಲಂಡನ್ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಅವರನ್ನು ಭೇಟಿಯಾಗಿದ್ದಾರೆ.
ಈ ಭೇಟಿಯ ವೇಳೆ ನಖ್ವಿ ಪ್ರಸ್ತುತ ಸನ್ನಿವೇಶವನ್ನು ಇಸಿಬಿ ಮುಖ್ಯಸ್ಥರಿಗೆ ವಿವರಿಸಿದ್ದು, ಇದೇ ವೇಳೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪಿಸಿಬಿ ಜೊತೆ ನಿಲ್ಲುವುದಾಗಿ ಭರವಸೆ ನೀಡಿದೆ ಎಂದು ವರದಿಯಾಗಿದೆ.
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಸ್ಥಾನಮಾನವನ್ನು ಹೊಂದಿದೆ. ಆದ್ದರಿಂದ, ಬಿಸಿಸಿಐನೊಂದಿಗಿನ ವಿವಾದದ ನಂತರ, ಮೊಹ್ಸಿನ್ ನಖ್ವಿ ಅದರ ಬೆಂಬಲವನ್ನು ಪಡೆಯಲು ಲಂಡನ್ ತೆರಳಿದ್ದರು. ಅಲ್ಲದೆ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಅವರನ್ನು ಭೇಟಿಯಾಗಿ ಅವರ ಬೆಂಬಲವನ್ನು ಕೋರಿದ್ದರು.
ಈ ಭೇಟಿಯ ವೇಳೆ ಉಭಯ ಸಂಸ್ಥೆಗಳ ಮುಖ್ಯಸ್ಥರು ಬಿಸಿಸಿಐ ಮುಂದಿಟ್ಟಿರುವ ಭದ್ರತಾ ಕಾಳಜಿ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಪಿಸಿಬಿಯ ನಿರ್ಧಾರಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ.
ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡ ಪಾಕಿಸ್ತಾನ್ ಪ್ರವಾಸ ಮಾಡಿದ್ದು, ಆ ಸರಣಿಯು ಅದ್ಭುತವಾಗಿತ್ತು. ಚಾಂಪಿಯನ್ಸ್ ಟ್ರೋಫಿಗಾಗಿ ನಮ್ಮ ಕಡೆಯಿಂದ ಶುಭ ಹಾರೈಕೆ ಎಂದು ರಿಚರ್ಡ್ ಥಾಂಪ್ಸನ್ ತಿಳಿಸಿದ್ದಾರೆ.
ಅಲ್ಲದೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಧ್ಯಕ್ಷರು ಹೇಳಿದ್ದಾರೆ. ಈ ಮೂಲಕ ಪಾಕ್ನಲ್ಲೇ ಚಾಂಪಿಯನ್ಸ್ ಟ್ರೋಫಿ ಜರುಗಲಿ ಎಂಬ ಆಶಯವನ್ನು ಥಾಂಪ್ಸನ್ ಮುಂದಿಟ್ಟಿದ್ದಾರೆ.
ಇತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಇಸಿಬಿ ಬೆಂಬಲ ನೀಡಿರುವ ಕಾರಣ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಸಮಸ್ಯೆಯು ಮತ್ತಷ್ಟು ಜಟಿಲವಾಗುವ ಸಾಧ್ಯತೆಯಿದೆ. ಏಕೆಂದರೆ ಪಾಕ್ನಲ್ಲಿ ಟೂರ್ನಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಮೊಹಮ್ಮದ್ ಶಮಿ ವಿರುದ್ಧ ಗಂಭೀರ ಆರೋಪ: ಟೀಮ್ ಇಂಡಿಯಾದಿಂದ ಬ್ಯಾನ್ ಭೀತಿ
ಅಲ್ಲದೆ ಟೀಮ್ ಇಂಡಿಯಾ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಬೇಕೆಂದು ತಿಳಿಸಿದೆ. ಅದರಂತೆ ಭಾರತ ತಂಡವು ತನ್ನ ಪಂದ್ಯಗಳನ್ನು ಶ್ರೀಲಂಕಾ ಅಥವಾ ಯುಎಇ ನಲ್ಲಿ ಆಡುವ ಇಂಗಿತವನ್ನು ವ್ಯಕ್ತಪಡಿಸಿದೆ. ಆದರೆ ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಸಿದ್ಧವಿಲ್ಲ. ಅಲ್ಲದೆ ಇದೀಗ ಟೂರ್ನಿ ಆಯೋಜನೆಗೆ ಇತರೆ ಕ್ರಿಕೆಟ್ ಸಂಸ್ಥೆಗಳ ಬೆಂಬಲ ಪಡೆಯಲು ಮುಂದಾಗಿದೆ.