12 ಎಸೆತಗಳಲ್ಲಿ 61 ರನ್ ಬೇಕು; ಇನ್ನೊಂದು ಎಸೆತ ಬಾಕಿ ಇರುವಂತೆಯೇ ಗೆದ್ದ ಆಸ್ಟ್ರೀಯಾ; ವಿಡಿಯೋ ನೋಡಿ

|

Updated on: Jul 15, 2024 | 8:13 PM

ECI T10 Romania: ಕೊನೆಯ 2 ಓವರ್‌ಗಳಲ್ಲಿ ಆಸ್ಟ್ರೀಯಾ ಗೆಲುವಿಗೆ 61 ರನ್‌ಗಳ ಅಗತ್ಯವಿತ್ತು. ಎಂಟನೇ ಓವರ್​ವರೆಗೆ ಆಸ್ಟ್ರಿಯಾ ತಂಡ ಕೇವಲ 107 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆದರೆ ಒಂಬತ್ತನೇ ಓವರ್​ನಲ್ಲಿ ಆಸ್ಟ್ರಿಯಾದ ನಾಯಕ ಆಕಿಬ್ ಇಕ್ಬಾಲ್ ಬರೋಬ್ಬರಿ 41 ರನ್ ಚಚ್ಚಿದರು. ಇದರಲ್ಲಿ ವೈಡ್​ ಬಾಲ್ ಬೌಂಡರಿ, ನೋ ಬಾಲ್​ನಲ್ಲಿ ಎರಡು ಸಿಕ್ಸರ್ ಹಾಗೂ ಹಲವು ವೈಡ್​ಗಳಿಂದ ರನ್​ಗಳು ಹರಿದುಬಂದವು.

12 ಎಸೆತಗಳಲ್ಲಿ 61 ರನ್ ಬೇಕು; ಇನ್ನೊಂದು ಎಸೆತ ಬಾಕಿ ಇರುವಂತೆಯೇ ಗೆದ್ದ ಆಸ್ಟ್ರೀಯಾ; ವಿಡಿಯೋ ನೋಡಿ
ಆಸ್ಟ್ರಿಯಾ vs ರೊಮೇನಿಯಾ
Follow us on

ಕ್ರಿಕೆಟ್ ಮೈದಾನದಲ್ಲಿ ಪ್ರತಿ ದಿನ ಒಂದಿಲ್ಲೊಂದು ಅಚ್ಚರಿಯ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಒಂದೆಡೆ ಬ್ಯಾಟರ್​ವೊಬ್ಬ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸುತ್ತಾನೆ. ಇತ್ತ ಬೌಲರ್​ ಕೂಡ ಸತತ ವಿಕೆಟ್ ಉರುಳಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಳ್ಳುತ್ತಾನೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಆಸ್ಟ್ರಿಯಾ ತಂಡ ಕೇವಲ 11 ಎಸೆತಗಳಲ್ಲಿ 61 ರನ್​ಗಳ ಗುರಿ ಬೆನ್ನಟ್ಟಿ ರೋಚಕ ಜಯ ಸಾಧಿಸಿದೆ. ಇತ್ತ ಕೊನೆಯ ಹಂತದವರೆಗೂ ಗೆಲುವನ್ನು ತನ್ನ ಕೈಯಲ್ಲಿರಿಸಿಕೊಂಡಿದ್ದ ರೊಮೇನಿಯಾ ತಂಡ ಕೊನೆಯ ಎರಡು ಓವರ್​ಗಳಲ್ಲಿ ಬೌಲರ್​ಗಳು ಮಾಡಿದ ಕಳಪೆ ಬೌಲಿಂಗ್​ಗೆ ಸೋಲಿನ ಬೆಲೆ ತೆತ್ತಿದೆ.

ರೊಮೇನಿಯಾ ಅದ್ಭುತ ಬ್ಯಾಟಿಂಗ್

ವಾಸ್ತವವಾಗಿ ಯುರೋಪಿಯನ್ ಕ್ರಿಕೆಟ್‌ನಲ್ಲಿ ಆಸ್ಟ್ರಿಯಾ ಮತ್ತು ರೊಮೇನಿಯಾ ನಡುವೆ ಪಂದ್ಯ ನಡೆದಿತ್ತು. ಪ್ರಸ್ತುತ ಇಸಿಐ ರೊಮೇನಿಯಾ ಟಿ10 ಲೀಗ್​ನಲ್ಲಿ ನಡೆದ ಪಂದ್ಯದಲ್ಲಿ, ರೊಮೇನಿಯಾ ತಂಡವು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ 167 ರನ್ ಕಲೆಹಾಕಿತು. ರೊಮೇನಿಯಾದ ಬ್ಯಾಟ್ಸ್‌ಮನ್ ಅರಿಯನ್ ಮೊಹಮ್ಮದ್ 39 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್‌ಗಳೊಂದಿಗೆ ಅಜೇಯ 104 ರನ್ ಸಿಡಿಸಿದರೆ, ಮೊಹಮ್ಮದ್ ಮೊಯಿಸ್ 14 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್‌ನೊಂದಿಗೆ 42 ರನ್ ಬಾರಿಸಿದರು.

ಇಕ್ಬಾಲ್ ಸ್ಫೋಟಕ ಬ್ಯಾಟಿಂಗ್

ಬೃಹತ್ ಗುರಿ ಬೆನ್ನಟ್ಟಲು ಬಂದ ಆಸ್ಟ್ರಿಯಾ ತಂಡಕ್ಕೆ ಈ ಚೇಸ್ ಬಹುತೇಕ ಅಸಾಧ್ಯವಾಗಿತ್ತು. ತಂಡದ ಪ್ರಮುಖ ಮೂರು ವಿಕೆಟ್‌ಗಳು ಈಗಾಗಲೇ ಉರುಳಿದ್ದವು. ಅಂತಿಮವಾಗಿ ಕೊನೆಯ 2 ಓವರ್‌ಗಳಲ್ಲಿ ಗೆಲುವಿಗೆ 61 ರನ್‌ಗಳ ಅಗತ್ಯವಿತ್ತು. ಎಂಟನೇ ಓವರ್​ವರೆಗೆ ಆಸ್ಟ್ರಿಯಾ ತಂಡ ಕೇವಲ 107 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಆದರೆ ಒಂಬತ್ತನೇ ಓವರ್​ನಲ್ಲಿ ಆಸ್ಟ್ರಿಯಾದ ನಾಯಕ ಆಕಿಬ್ ಇಕ್ಬಾಲ್ ಬರೋಬ್ಬರಿ 41 ರನ್ ಚಚ್ಚಿದರು. ಇದರಲ್ಲಿ ವೈಡ್​ ಬಾಲ್ ಬೌಂಡರಿ, ನೋ ಬಾಲ್​ನಲ್ಲಿ ಎರಡು ಸಿಕ್ಸರ್ ಹಾಗೂ ಹಲವು ವೈಡ್​ಗಳಿಂದ ರನ್​ಗಳು ಹರಿದುಬಂದವು.

19 ಎಸೆತಗಳಲ್ಲಿ 72 ರನ್

ಕೊನೆಯ ಓವರ್‌ನಲ್ಲಿ ಇಮ್ರಾನ್ ಆಸಿಫ್ ಸಿಕ್ಸರ್ ಬಾರಿಸಿ, ನಂತರ ಆಕಿಬ್‌ಗೆ ಸ್ಟ್ರೈಕ್ ನೀಡಿದರು. ನಂತರ ಆಕಿಬ್ ಸತತ ಮೂರು ಸಿಕ್ಸರ್ ಬಾರಿಸಿ ತಂಡಕ್ಕೆ ಕೇವಲ 9.5 ಓವರ್​ಗಳಲ್ಲಿ ಅದ್ಭುತ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಆಕಿಬ್ ಬಿರುಸಿನ ಪ್ರದರ್ಶನ ನೀಡಿ, 19 ಎಸೆತಗಳಲ್ಲಿ 2 ಬೌಂಡರಿ ಮತ್ತು 10 ಸಿಕ್ಸರ್‌ಗಳಿಂದ ಅಜೇಯ 72 ರನ್ ಬಾರಿಸಿದರು. ಇಮ್ರಾನ್ ಆಸಿಫ್ ಕೂಡ 12 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 22 ರನ್ ಬಾರಿಸಿದರು. ಇದರೊಂದಿಗೆ ಆಸ್ಟ್ರಿಯಾ ಅದ್ಭುತ ಪ್ರದರ್ಶನದೊಂದಿಗೆ ಇಸಿಐ ರೊಮೇನಿಯಾ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:11 pm, Mon, 15 July 24