
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ (Eden Gardens) ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ದಕ್ಷಿಣ ಆಫ್ರಿಕಾ ತಂಡ ಮೊದಲ ದಿನದ ಚಹಾ ವಿರಾಮದ ವೇಳೆಗೆ ಎಂಟು ವಿಕೆಟ್ಗಳನ್ನು ಕಳೆದುಕೊಂಡು 154 ರನ್ ಕಲೆಹಾಕಿದೆ. ಅಕ್ಷರ್ ಪಟೇಲ್, ಕಾರ್ಬಿನ್ ಬಾಷ್ ಅವರನ್ನು ಔಟ್ ಮಾಡಿದ ತಕ್ಷಣ ಅಂಪೈರ್ ಟೀ ವಿರಾಮ ಘೋಷಿಸಿದರು. ಹೀಗಾಗಿ ಟ್ರಿಸ್ಟಾನ್ ಸ್ಟಬ್ಸ್ 15 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಭಾರತದ ಪರ ಇದುವರೆಗೆ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದಿದ್ದರೆ, ಮೊಹಮ್ಮದ್ ಸಿರಾಜ್ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದಿದ್ದಾರೆ.
ಈ ಪಂದ್ಯದಲ್ಲಿ ತೆಂಬಾ ಬವುಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಐಡೆನ್ ಮಾರ್ಕ್ರಾಮ್ ಮತ್ತು ರಯಾನ್ ರಿಕಲ್ಟನ್ ಅವರ ಆರಂಭಿಕ ಜೋಡಿ ದಕ್ಷಿಣ ಆಫ್ರಿಕಾಕ್ಕೆ ಉತ್ತಮ ಆರಂಭವನ್ನು ನೀಡಿತು. ಇವರಿಬ್ಬರ ಜೊತೆಯಾಟದಿಂದಾಗಿ ಆಫ್ರಿಕಾ ತಂಡದ ಸ್ಕೋರ್ ಮೊದಲ 10 ಓವರ್‌ಗಳಲ್ಲಿ 50 ರ ಗಡಿ ದಾಟಿತು. ಈ ವೇಳೆ 11ನೇ ಓವರ್ ಬೌಲ್ ಮಾಡಲು ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ಆರಂಭಿಕ ರಯಾನ್ ರಿಕಲ್ಟನ್ ಅವರನ್ನು ಔಟ್ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು.
ಆ ನಂತರ ಮತ್ತೊಬ್ಬ ಆರಂಭಿಕ ಐಡೆನ್ ಮಾರ್ಕ್ರಾಮ್ ಅವರನ್ನು ಬುಮ್ರಾ ಔಟ್ ಮಾಡಿದರು. ರಿಕಲ್ಟನ್ 23 ರನ್ ಬಾರಿಸಿ ಔಟಾದರೆ, ಮಾರ್ಕ್ರಾಮ್ 31 ರನ್ ಗಳಿಸಿ ಔಟಾದರು. ನಂತರ ಕುಲ್ದೀಪ್ ಯಾದವ್, ನಾಯಕ ತೆಂಬ ಬವುಮಾ ಅವರನ್ನು ಪೆವಿಲಿಯನ್ಗಟ್ಟಿದರು. ಬವುಮಾ ಕೇವಲ ಮೂರು ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಮೊದಲ ದಿನದ ಊಟದ ವಿರಾಮದ ವೇಳೆಗೆ ದಕ್ಷಿಣ ಆಫ್ರಿಕಾ ಮೂರು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು.
IND vs SA: ಕ್ಲೀನ್ ಬೌಲ್ಡ್ ಮಾಡಿ ಅಶ್ವಿನ್ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ
ಎರಡನೇ ಸೆಷನ್ ಆರಂಭದಲ್ಲೇ ಕುಲ್ದೀಪ್ ಯಾದವ್ ವಿಯಾನ್ ಮುಲ್ಡರ್ ಅವರನ್ನು ಔಟ್ ಮಾಡಿದರು. ಟೋನಿ ಡಿ ಜಾರ್ಜಿ ಕೂಡ 24 ರನ್ ಬಾರಿಸಿ ಬುಮ್ರಾಗೆ ಬಲಿಯಾದರು. ನಂತರ ದಾಳಿಗಿಳಿದ ಮೊಹಮ್ಮದ್ ಸಿರಾಜ್, ದಕ್ಷಿಣ ಆಫ್ರಿಕಾಕ್ಕೆ ಸತತ ಎರಡು ಹೊಡೆತಗಳನ್ನು ನೀಡಿದರು. ಮೊದಲು ಕೈಲ್ ವೆರೆನ್ ಅವರ ವಿಕೆಟ್ ಪಡೆದ ಸಿರಾಜ್, ನಂತರ ಮಾರ್ಕೊ ಯಾನ್ಸೆನ್ ಅವರನ್ನು ಔಟ್ ಮಾಡಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ 7 ವಿಕೆಟ್ ಕಳೆದುಕೊಂಡು 154 ರನ್ಗಳ ಗಡಿ ದಾಟಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:24 pm, Fri, 14 November 25